ಲಿಂಗಸುಗೂರು: ಹಿಂದೆಂದೂ ಕಾಣದಂತಹ ಪ್ರವಾಹಕ್ಕೆ ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಜನರ ಬದುಕು ದುಸ್ತರವಾಗಿದೆ.
ತಾಲೂಕಿನ ನದಿ ತೀರದ ಗ್ರಾಮ ಗಳಾದ ಕಡದರಗಡ್ಡಿ, ಯರಗೋಡಿ, ಹಂಚಿನಾಳ, ಯಳಗುಂದಿ, ಶೀಲಹಳ್ಳಿ, ಗೋನವಾಟ್ಲ, ಗುಂತಗೋಳ, ಟಣಮನಕಲ್, ಗದ್ದಗಿ, ಐದಬಾವಿ, ರಾಯದುರ್ಗ ಗ್ರಾಮಗಳ ಜನರು ಮನೆ ಮತ್ತು ಬೆಳೆ ಹಾನಿಗೆ ನಲುಗುವಂತಾಗಿದೆ.
ಬೆಳೆ ನೀರು ಪಾಲು: ತಾಲೂಕಿನ ಶೀಲಹಳ್ಳಿಯಲ್ಲಿ 140 ಹೆಕ್ಟೇರ್, ಗೋನವಾಟ್ಲ 135 ಹೆಕ್ಟೇರ್, ಗುಂತಗೋಳ 113 ಹೆಕ್ಟೇರ್, ಕಡದರಗಡ್ಡಿ 131 ಹೆಕ್ಟೇರ್, ಯಳಗುಂದಿ 91 ಹೆಕ್ಟೇರ್, ಯರಗೋಡಿ 114 ಹೆಕ್ಟೇರ್, ಹಂಚಿನಾಳ 151 ಹೆಕ್ಟೇರ್, ಟಣಮನಕಲ್ 54 ಹೆಕ್ಟೇರ್, ರಾಯದುರ್ಗ 44 ಹೆಕ್ಟೇರ್, ಗದ್ದಗಿ 84 ಹೆಕ್ಟೇರ್, ಐದಬಾವಿ 22 ಹೆಕ್ಟೇರ್, ರಾಮಲೂಟಿಯಲ್ಲಿ 21 ಹೆಕ್ಟೇರ್ ಜಮೀನು ಜಲಾವೃತಗೊಂಡು ವಿವಿಧ ಬೆಳೆಗಳು ಹಾನಿಯಾಗಿವೆ. ಇದಲ್ಲದೆ 50 ಹೆಕ್ಟೇರ್‌ಗಿಂತ ಅಧಿಕ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ಪಪ್ಪಾಯಿ ಸೇರಿ ಇತರೆ ಬೆಳೆ ಹಾನಿಯಾಗಿವೆ. ಸಜ್ಜೆ 630 ಹೆಕ್ಟೇರ್, ತೊಗರಿ 368 ಹೆಕ್ಟೇರ್, ಕಬ್ಬು 3 ಹೆಕ್ಟೇರ್, ಭತ್ತ 84 ಹೆಕ್ಟೇರ್, ಎಳ್ಳು 2 ಹೆಕ್ಟೇರ್, ಹತ್ತಿ 7 ಹೆಕ್ಟೇರ್, ಸೂರ್ಯಕಾಂತಿ 3 ಹೆಕ್ಟೇರ್ ಸೇರಿ ಅಂದಾಜು 1,099 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಬೆಳೆ ಜಲಾವೃತವಾಗಿದೆ. ಇದಲ್ಲದೆ ನೀರಿನ ರಭಸಕ್ಕೆ ಹೊಲದಲ್ಲಿದ್ದ ಫಲವತ್ತತೆ ಮಣ್ಣು ಕೊಚ್ಚಿಹೋಗಿದ್ದರಿಂದ ರೈತರನ್ನ ಮತ್ತಷ್ಟು ಚಿಂತೆಗೀಡು ಮಾಡಿದೆ.
ಮನೆಗಳೂ ಜಲಾವೃತ: ಪ್ರವಾಹಕ್ಕೆ ತಾಲೂಕಿನ ಕೃಷ್ಣಾ ನದಿ ತೀರದ ಕಡದರಗಡ್ಡಿಯ 15 ಮನೆಗಳು, ಗದ್ದಗಿಯ 10 ಮನೆಗಳು ಟಣಮನಕಲ್ನಲ್ಲಿ ಕೆಲವು ಮನೆಗಳು ಮುಳುಗಡೆ ಆಗಿದ್ದವು. ಈ ಗ್ರಾಮಗಳ ಸಂತ್ರಸ್ತರು ಪರಿಹಾರ ಕೇಂದ್ರಗಳಲ್ಲಿ ನಾಲ್ಕಾರು ದಿನ ಕಾಲ ಕಳೆಯುವಂತಾಗಿತ್ತು. ಪ್ರವಾಹ ತಗ್ಗಿದ ನಂತರ ಮನೆಯಲ್ಲಿ ಸಂಗ್ರಹವಾಗಿದ್ದ ಕೆಸರು, ಹೂಳು ತೆಗೆದು ಸ್ವಚ್ಚಗೊಳಿಸಿ ಪುನಃ ಬದುಕು ಕಟ್ಟಿಕೊಳ್ಳಬೇಕಿದೆ. ಹೊಲದಲ್ಲಿದ್ದ ಬೆಳೆ ಹಾಗೂ ಮನೆಯೂ ಮುಳುಗಡೆಯಾಗಿ ನಾನಾ ಸಂಕಷ್ಟವನ್ನು ಸಂತ್ರಸ್ತರು ಅನುಭವಿಸುತ್ತಿದ್ದಾರೆ.
ಶಾಲೆ ಪುನಾರಂಭ: ಆಗಸ್ಟ್ 10ರಿಂದ ಮುಳುಗಡೆಯಾಗಿದ್ದ ತಾಲೂಕಿನ ಕಡದರಗಡ್ಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ನೀರಿನ ಮಟ್ಟ ಇಳಿಮುಖವಾಗಿದ್ದರಿಂದ ಸೋಮವಾರ ಪುನಾರಂಭವಾಗಿದೆ. ಮುಳುಗಡೆಯಾಗಿದ್ದಾಗ ಶಾಲೆ ಯಲ್ಲಿದ್ದ ದವಸ ಧಾನ್ಯ, ಪಠ್ಯಪುಸ್ತಕ, ರಾಷ್ಟ್ರದ ಮಹಾನ್ ನಾಯಕರ ಭಾವಚಿತ್ರ ಸೇರಿದಂತೆ ಇತರೆ ವಸ್ತುಗಳು ನೀರು ಪಾಲಾಗಿದ್ದವು. ಶಿಕ್ಷಕರು ಮರಳಿ ಶಾಲೆಗೆ ತೆರಳಿ ಶಾಲೆಯಲ್ಲಿ ಸಂಗ್ರಹವಾಗಿದ್ದ ಹೊಂಡು ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತಿದ್ದರು. ಹೀಗಾಗಿ ಶಾಲೆಯಲ್ಲಿ 105 ವಿದ್ಯಾರ್ಥಿಗಳು ಇದ್ದರೂ ಸೋಮವಾರ ಬರೀ 25 ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರಿಗೆ ಕಾರಿಡಾರ್‌ನಲ್ಲಿ ಪಾಠ ಮಾಡಲಾಗುತ್ತಿತ್ತು.
150 ವಿದ್ಯುತ್ ಕಂಬ ಹಾನಿ: ಕೃಷ್ಣಾ ನದಿಯಲ್ಲಿ 6.30 ಲಕ್ಷ ಕ್ಯೂಸೆಕ್ ನೀರು ಹರಿಸಿದ ಪರಿಣಾಮ ನಾನಾ ಕಡೆಗಳಲ್ಲಿ 150 ವಿದ್ಯುತ್ ಕಂಬ ಮುರಿದು ಬಿದ್ದಿವೆ. 15 ವಿದ್ಯುತ್ ಪರಿವರ್ತಕ, 15 ಕಿ.ಮೀ. ವಿದ್ಯುತ್ ತಂತಿ ನೀರು ಪಾಲಾಗಿದೆ. ಕೆಲವು ದಿನಗಳು ವಿದ್ಯುತ್ ಸಂಪರ್ಕ ಇಲ್ಲದೆ ನದಿ ತೀರದ ಗ್ರಾಮಸ್ಥರು ಕತ್ತಲಲ್ಲಿ ಕಾಲ ಕಳೆದಿದ್ದಾರೆ. ರಸ್ತೆ ಸಂಪರ್ಕಕ್ಕಿದ್ದ ಜಲದುರ್ಗ, ಶೀಲಹಳ್ಳಿ ಸೇತುವೆಗಳು ಜಖಂಗೊಂಡಿವೆ.
• ಸಾವಿರ ಹೆಕ್ಟೇರ್ ಬೆಳೆ ಹಾನಿ
• ಜೆಸ್ಕಾಂಗೂ ನಷ್ಟ
• ಜಖಂಗೊಂಡ ಸೇತುವೆಗಳು
• ಶಾಲೆ, ಮನೆಗಳಲ್ಲಿ ಹೂಳು
•ಶಿವರಾಜ ಕೆಂಬಾವಿ