Advertisement

ಕೃಷ್ಣೆಯಲ್ಲಿ ತೇಲಿದ ತಮದಡ್ಡಿ

11:49 AM Sep 02, 2019 | Suhan S |

ತೇರದಾಳ: ಗ್ರಾಮದ ಯಾವ ಮೂಲೆಗೆ ಹೋದರೂ ದುರ್ವಾಸನೆ, ಎಲ್ಲೆಂದರಲ್ಲಿ ತೋಯ್ದು ರಾಡಿಯಾದ ಹಾಸಿಗೆ-ಹೊದಿಕೆ, ಬಟ್ಟೆಗಳು. ತುಕ್ಕು ಹಿಡಿದು ಬಿದ್ದ ಇಸ್ತ್ರಿ ಪೆಟ್ಟಿ-ಎಲೆಕ್ಟ್ರಾನಿಕ್‌ ವಸ್ತುಗಳು…

Advertisement

ಕೃಷ್ಣಾ ನದಿ ಜಲದಡಿ ಸಿಲುಕಿದ ಬಿದ್ದಿವೆ. ಇನ್ನೂ ಅನೇಕ ಮನೆಗಳು ಬೀಳುವ ಹಂತದಲ್ಲಿವೆ. ಕಿತ್ತು ಹೋದ ಪತ್ರಾಸ್‌ಗಳು ಪತ್ತೆಯಿಲ್ಲ. ಮನೆಯ ಮುಂದಿನ ಕೃಷಿ ಸಲಕರಣೆಗಳು ನಾಪತ್ತೆಯಾಗಿವೆ. ಮನೆಯೊಳಗಿನ ಟಿವ್ಹಿ-ಫ್ರಿಡ್ಜ್ ಸಹಿತ ಎಲ್ಲ

ವಸ್ತುಗಳು ಕೆಟ್ಟು ಹೋಗಿವೆ. ಟ್ರಂಕ್‌ದಲ್ಲಿನ ಬೆಲೆಬಾಳುವ ಸೀರೆಗಳು ರಾಡಿಯಲ್ಲಿ ನೆಂದು ಬಣ್ಣವೇ ಗೊತ್ತಾಗದಂತೆ ಬಿದ್ದಿವೆ. ಮನೆ ತುಂಬ ಕಸದ ರಾಶಿ ಸಂಗ್ರಹಗೊಂಡಿದೆ. ಇದನ್ನೆಲ್ಲ ನೋಡಿದ ಕಂಡ ಸಂತ್ರಸ್ತರು ಮುಂದಿನ ಬದುಕು ಹ್ಯಾಂಗ್‌ ಎಂದು ದಿಗ್ಭ್ರಾಂತರಾಗಿದ್ದಾರೆ.

ಹೌದು, ಸಮೀಪದ ತಮದಡ್ಡಿ ಗ್ರಾಮದ ಸ್ಥಿತಿಯಿದು. ಕೃಷ್ಣಾ ನದಿಯ ಪ್ರವಾಹಕ್ಕೆ ತೇಲಿ ಹೋದ ಗ್ರಾಮದ ಕರುಣಾಜನಕ ಸ್ಥಿತಿ ನೋಡಿದ ಪ್ರತಿಯೊಬ್ಬರಿಗೂ ಕಣ್ಣಲ್ಲಿ ನೀರು ಬರುತ್ತಿದೆ. ಮಹಾರಾಷ್ಟ್ರದಲ್ಲಿ ಸುರಿದ ಮಹಾಮಳೆಯಿಂದಾಗಿ ಹಿಂದೆಂದೂ ಕಾಣದಷ್ಟು ಪ್ರವಾಹ ಬಂದು ಈ ಸ್ಥಿತಿ ನಿರ್ಮಾಣವಾಗಿದೆ. 2007ರ ಪ್ರವಾಹಕ್ಕಿಂತ 8-10ಅಡಿ ಎತ್ತರದಷ್ಟು ನೀರು ಬಂದು ಈ ಸಲದ ಪ್ರವಾಹ ಗ್ರಾಮದ ಜನರ ಬದುಕನ್ನೆ ಅಲ್ಲೋಲ-ಕಲ್ಲೋಲ ಮಾಡಿದೆ. ಇಡೀ ಬದುಕಿನ ಬಂಡಿಯೇ ಕೊಚ್ಚಿಕೊಂಡು ಹೋಗಿದೆ.

ನೀರಲ್ಲೇ ತೇಲಿದ ಗ್ರಾಮ: ಗ್ರಾಮದ ಜೈನ್‌ ಬಸದಿ, ಮಾರುತಿ ದೇವಸ್ಥಾನ, ಗ್ರಾಪಂ ಕಾರ್ಯಾಲಯ, ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸೇರಿದಂತೆ ಮನೆಗಳೆಲ್ಲ ಹೀಗೆ ಒಂದೂ ಬಿಡದೆ ಎಲ್ಲ ಕಟ್ಟಡಗಳು ನೀರಿನಲ್ಲಿ ಮುಳುಗಿದ್ದವು. ಬಹುತೇಕರು ಇಷ್ಟೊಂದು ನೀರು ಬರಲಿಕ್ಕಿಲ್ಲ ಎಂದು ಊಹೆ ಮಾಡಿ ವಸ್ತುಗಳನ್ನು ಸ್ವಲ್ಪ ಎತ್ತರದಲ್ಲಿರಿಸಿ ಸುರಕ್ಷಿತ ಸ್ಥಳಕ್ಕೆ ಬಂದಿದ್ದರು. ಆದರೆ ಪ್ರಕೃತಿ ವಿಸ್ಮಯ, ನಿಸರ್ಗದಾಟ ಯಾರಿಗೆ ಮುನ್ಸೂಚನೆ ಕೊಡಲು ಸಾಧ್ಯವಿದೆ. ಯಾರೂ ಅಂದಾಜಿಸಲಾರದಷ್ಟು ಹೆಚ್ಚಿನ ಮಟ್ಟದ ಪ್ರವಾಹ ಬಂದು ಎಲ್ಲವನ್ನು ತನ್ನೊಡಲಿಗೆ ಪಡೆಯಿತು.

Advertisement

ಆಲಮಟ್ಟಿ ಜಲಾಶಯದಿಂದಾಗಿ ತಮದಡ್ಡಿ ಹಾಗೂ ಶೇಗುಣಸಿ ಗ್ರಾಮಗಳು ಮುಳುಗಡೆ ಗ್ರಾಮವೆಂದು ಘೋಷಣೆಯಾಗಿವೆ. ನಮಗೆ ಬೇರೆ ಕಡೆಗೆ ಜಾಗೆ ಕೊಟ್ಟಿದ್ದರೆ ನಾವು ದನ-ಕರುಗಳೊಂದಿಗೆ ಅಲ್ಲಿಯೆ ವಾಸ ಮಾಡುತ್ತಿದ್ದೇವು. ಆದರೆ ಪುನರ್ವಸತಿ ಕೇಂದ್ರ ಹಾಗೂ ನಮಗೆ ವಾಸಿಸಲು ಸ್ಥಳ ನಿಗದಿಯಾಗಿಲ್ಲ. ನಾವು ಎಲ್ಲಿಗೆ ಹೋಗಬೇಕು ಎಂಬುದು ಗ್ರಾಮಗಳ ಜನರ ಪ್ರಶ್ನೆಯಾಗಿದೆ.

ಶೇಗುಣಸಿ ಹಾಗೂ ತಮದಡ್ಡಿ ಗ್ರಾಮಗಳು ಈ ಬಾರಿ ಸಂಪೂರ್ಣ ಜಲಾವೃತಗೊಂಡು 2009ರ ಪ್ರವಾಹದ ದಾಖಲೆ ಮುರಿದಿದೆ. ಶೇಗುಣಸಿಯ ಕೂಡನಹಳ್ಳದ 80ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿನ 4ನೇ ಕಾಲುವೆ ಪಕ್ಕದಲ್ಲಿ ಬೀಡಾರ್‌ ಹೂಡಿದ್ದಾರೆ. ಪ್ರವಾಹ ನಿಂತಿದ್ದರಿಂದ ಮನೆಗಳಿಗೆ ಹೋಗು ವಿಚಾರ ಮಾಡಿದ್ದಾರೆ. ಆದರೆ ದುರ್ವಾಸನೆ ಆವರಿಸಿ, ಸೊಳ್ಳೆ ಕಾಟ ಹೆಚ್ಚಾಗಿ ರೋಗರುಜಿನಗಳು ಬರುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಪ್ರವಾಹ ನಿಂತರೂ ತಮ್ಮ ತಮ್ಮ ಮನೆಗಳಿಗೆ ಹೋಗಲಾಗುತ್ತಿಲ್ಲ ಎಂಬ ಸಂಕಟ ಅವರದು.

ಗುಡ್ಡಕ್ಕೆ ಹೋಗಿ ಪ್ರಾಣ ಉಳಿಸಿಕೊಂಡ್ರು: ಹಳಿಂಗಳಿ ಗ್ರಾಮದ ಗುಳ್ಳಿಮಳಿ ಭಾಗದ ಜನ ಹಾಗೂ ಗ್ರಾಮದ ಉತ್ತರ ಭಾಗದ ಜನರು ಪ್ರವಾಹಕ್ಕೆ ಒಳಗಾಗಿ ಪಡಬಾರದ ಕಷ್ಟ ಪಟ್ಟಿದ್ದಾರೆ. ಗುಡ್ಡದ ಭಾಗಕ್ಕೆ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ನದಿ ತನ್ನ ಒಡಲು ಸೇರಿ ಅಲವು ದಿನಗಳೆದರೂ ಸಹ ಮೂಲಸ್ಥಳಗಳಿಗೆ ಬರಲಾರದ ಸ್ಥಿತಿ ಉಂಟಾಗಿದೆ.

ಹಳಿಂಗಳಿ ಗ್ರಾಮದ ಆದೇಶ ಕುಳ್ಳಿ ಅವರ ಹಸು, ಶಬ್ಬಿರ ಅಲಾಸ್‌ ಅವರ ಮೇಕೆ ಸೇರಿದಂತೆ ತಮದಡ್ಡಿ, ಶೇಗುಣಸಿ ಗ್ರಾಮಗಳ ಅನೇಕ ದನಕರುಗಳು, ನಾಯಿ, ಬೆಕ್ಕುಗಳು ಸಹ ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡಿವೆ.

ಈ ಸಲದ ಪಂಚಮಿ ಹಾಗೂ ಶ್ರಾವಣ ಮಾಸವೆಲ್ಲ ನಮ್ಮ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಪ್ರವಾಹ ಇಡೀ ನಮ್ಮೂರನ್ನೆ ಹಾಳು ಕೆಡವಿದೆ. ಕೃಷ್ಣೆಯ ಮಡಲಲ್ಲಿ ನದಿಯನ್ನೆ ನಂಬಿ ಬದುಕುವ ನಮ್ಮ ಮೇಲೆ ನದಿ ದೇವತೆ ಅದೇಕೋ ಕೆಂಗಣ್ಣು ಬೀರಿದ್ದಾಳೆ. ನಮ್ಮ ಜಮೀನುಗಳ ಬೆಳೆಗಳೆಲ್ಲ ಹಾಳಾಗಿವೆ.

 

•ಬಿ.ಟಿ. ಪತ್ತಾರ

Advertisement

Udayavani is now on Telegram. Click here to join our channel and stay updated with the latest news.

Next