ಜೀರಗಾಳ (ಬಾಗಲಕೋಟೆ): ಯಪ್ಪಾ ಮೂಕ ಜನವಾರ ಜಿಟಿಜಿಟಿ ಮಳ್ಯಾಗ್ ನಿಂತಿದ್ದು. ನಾಳಿಗಿ ನದಿಗಿ ನೀರ್ ಬಾಳ್ ಬರ್ತೈತಿ ಅಂತ ಊರಾಗ್ ಡಂಗ್ರಾ (ಡಂಗುರ) ಹೊಡೆದಿದ್ರು. ಹಿಂಗಾಗ್ ನಾನು, ನನ್ನ ಮಗ ಕೂಡಿ, ಹೊಲ್ದಾಗ್ ಕಟ್ಟಿದ್ದ ಎಮ್ಮಿ, ಎರಡ್ ಆಕಳ, ಒಂದು ಕರು ತಗೊಂಡು ಬರಾಕ್ ಹೋಗಿದ್ವಿ. ನಾವು ಹೋಗುವಾಗ ಮೊಣಕಾಲ ಮಟಾ ಮಾತ್ರ ನೀರು ಇದ್ವು. ದನಾ ತಗೊಂಡು ಹೊಳ್ಳಿ ಬರುವಷ್ಟರಲ್ಲಿ ಎದಿಮಟಾ ನೀರು ಬಂದ್ವು. ಹಿಂಗಾಗಿ ಮಗನ ಬಳಿ ಇದ್ದ ಮೊಬೈಲ್ದಿಂದ ಊರಾನ್ ಮಂದಿಗಿ ಫೋನ್ ಮಾಡಿ ಹೇಳ್ವಿ. ಅವರೆಲ್ಲ ಕೂಡಿ ದೊಡ್ಡ ಮಂದಿಗಿ ಕರಿಸಿ, ನಮ್ಮ ಜೀವಾ ಉಳಿಸಿದ್ರು. ಹೋದ ಜೀವಾ ಮತ್ತ ಬಂದಂಗ್ ಆತು…
ಹೀಗೆ ಹೇಳಿದ್ದು ಘಟಪ್ರಭಾ ನದಿ ಪ್ರವಾಹದಲ್ಲಿ ಸಿಲುಕಿದ್ದ ಮುಧೋಳ ತಾಲೂಕು ಜೀರಗಾಳ ಗ್ರಾಮದ ಶ್ರೀಶೈಲ ರಾಮಪ್ಪ ಉಪ್ಪಾರ ಎಂಬ ರೈತ. ಶ್ರೀಶೈಲ, ತನ್ನ ಮಗ ರಮೇಶನ ಜತೆಗೆ ಹೊಲದಲ್ಲಿದ್ದ (ಚಿಚಖಂಡಿ ಸೇತುವೆ ಬಳಿ) ದನಗಳನ್ನು ರಕ್ಷಿಸಿಕೊಂಡು ಬರಲು ಹೋಗಿ, ತಾವೇ ಆಪತ್ತಿಗೆ ಒಳಗಾಗಿದ್ದರು. ಬರೋಬ್ಬರಿ 9 ಗಂಟೆಗಳ ಕಾಲ ಪ್ರವಾಹದಲ್ಲಿ ಸಿಲುಕಿದ್ದ ತಂದೆ ಮತ್ತು ಮಗ, ರಾಜ್ಯ ವಿಪತ್ತು ಸ್ಪಂದನಾ ಪಡೆ (ಎಸ್‌ಡಿಆರ್‌ಎಫ್) ತಂಡ ಹಾಗೂ ಮುಧೋಳ ಪಿಎಸ್‌ಐ ಶ್ರೀಶೈಲ ಬ್ಯಾಕೋಡ ಅವರ ಧೈರ್ಯದ ಕಾರ್ಯಾಚರಣೆಯಿಂದ ಬದುಕುಳಿದು ಬಂದರು.
ರಕ್ಷಣೆಗೆ ನೆರವಾದ ಪತ್ರಕರ್ತ-ಎಸ್‌ಡಿಆರ್‌ಎಫ್: ರೈತ ಶ್ರೀಶೈಲ ಮತ್ತು ಪುತ್ರ ರಮೇಶ ಅವರು, ದನಗಳನ್ನು ರಕ್ಷಿಸಲು ಹೋಗಿ, ಆಪತ್ತಿಗೆ ಸಿಲುಕಿರುವುದು ಇಡೀ ಊರಿಗೆ ವಿಷಯ ತಿಳಿದಿತ್ತು. ಗ್ರಾಮಸ್ಥರು ಹಾಗೂ ಯುವ ಪತ್ರಕರ್ತ ರವಿ ಹಳ್ಳೂರ ಅವರ ಸತತ ಪ್ರಯತ್ನದಿಂದ ಅತಿಬೇಗ ಜಿಲ್ಲಾಡಳಿತಕ್ಕೆ ವಿಷಯ ಮುಟ್ಟಿತ್ತು. ಎಸ್‌ಡಿಆರ್‌ಎಫ್‌ನ 15 ಜನ ಸಿಬ್ಬಂದಿ, ಮುಧೋಳ ಪಿಎಸ್‌ಐ ಶ್ರೀಶೈಲ ಬ್ಯಾಕೋಡ ತಮ್ಮ ಸಿಬ್ಬಂದಿಯೊಂದಿಗೆ ಘಟಪ್ರಭಾ ನದಿ ತೀರಕ್ಕೆ ಧಾವಿಸಿ ಬಂದರು. ಈ ತಂಡ ಬರುವ ಹೊತ್ತಿಗೆ ಘಟಪ್ರಭಾ ನದಿಯ ಚಿಚಖಂಡಿ ಸೇತುವೆ ಮೇಲಿಂದ ನೀರು ಹರಿಯುವ ಜತೆಗೆ ಸುಮಾರು ಒಂದೂವರೆ ಕಿ.ಮೀ ವರೆಗೆ ಹೆದ್ದಾರಿ ಮೇಲೆ ನೀರು ಹರಿಯುತ್ತಿತ್ತು. ಚಿಚಖಂಡಿ ಸೇತುವೆ ಬಳಿ ಇದ್ದ ಹೆದ್ದಾರಿಯ ನಾಮಫಲಕದ ಬಳಿ ಎತ್ತರದ ಪ್ರದೇಶದಲ್ಲಿ ತನ್ನ ಜಾನುವಾರುಗಳ ಸಮೇತ ನಿಂತಿದ್ದ ಶ್ರೀಶೈಲ ಮತ್ತು ರಮೇಶ ಅವರಿಗೆ ಮೊಬೈಲ್ ಕರೆ ಮಾಡಿ, ಯಾವುದೇ ರೀತಿಯ ಗಾಬರಿಯಾಗಬೇಡಿ. ನಾವು ಬೋಟ್ ಮೂಲಕ ಬರುತ್ತೇವೆ. ನೀವು ಧೈರ್ಯದಿಂದ ಇರಿ ಎಂದು ಧೈರ್ಯ ತುಂಬಿದರು.
ಬಳಿಕ ಎಸ್‌ಡಿಆರ್‌ಎಫ್‌ನಿಂದ ತಂದಿದ್ದ ಬೋಟ್ ಸಿದ್ಧಪಡಿಸಿಕೊಂಡು, ಎಸ್‌ಡಿಆರ್‌ಎಫ್‌ನ ಪಿಎಸ್‌ಯ ಅರುಣ ಡಿ.ವಿ, ಹರೀಶ ಬಿ.ಕೆ, ರಾಮಭದ್ರಯ್ಯ, ರಾಜು ಹುನ್ನೂರ, ಶ್ರೀನಿವಾಸ ಹಾಗೂ ಮುಧೋಳ ಪಿಎಸ್‌ಐ ಶ್ರೀಶೈಲ ಬ್ಯಾಕೋಡ ಅವರು ಸೇರಿ ಒಟ್ಟು ಆರು ಜನರು ಬೋಟ್‌ನಲ್ಲಿ ಶ್ರೀಶೈಲ ಮತ್ತು ರಮೇಶ ಸಿಕ್ಕಿಕೊಂಡ ಸ್ಥಳಕ್ಕೆ ತೆರಳಿದರು. ಸುಮಾರು ಒಂದು ಗಂಟೆಗಳ ಕಾರ್ಯಾಚರಣೆ ಬಳಿಕ ಇಬ್ಬರನ್ನೂ ಸುರಕ್ಷಿತವಾಗಿ ಹೊರ ತಂದರು. ಆದರೆ, ಶ್ರೀಶೈಲ ಉಪ್ಪಾರ ಅವರ ಜಾನುವಾರುಗಳನ್ನು ಹೊರ ತರಲಾಗಲಿಲ್ಲ. ಅವು ಸೇತುವೆಯ ಬಳಿಯ ಎತ್ತರದ ಪ್ರದೇಶದಲ್ಲೇ ಮೇಯುತ್ತ ನಿಂತಿದ್ದವು. ಘಟಪ್ರಭಾ ನದಿಯಲ್ಲಿ ನೀರಿನ ಹರಿವು ಇನ್ನೂ ಜೋರಾಗಿದ್ದು, ನಮ್ಮ ದನಗಳೂ ಉಳಿದು ಬರಲಿ ಎಂದು ಶ್ರೀಶೈಲ ಮತ್ತು ರಮೇಶ ಬೇಡಿಕೊಳ್ಳುತ್ತಿದ್ದರು.
ಪತಿ-ಮಗನಿಗಾಗಿ ಒದ್ದಾಡುತ್ತಿತ್ತು ಜೀವ: ತನ್ನ ಪತಿ ಹಾಗೂ ಪುತ್ರ ನದಿಯ ಪ್ರವಾಹದಲ್ಲಿ ಸಿಲುಕಿದ್ದು ಕಂಡು, ಶ್ರೀಶೈಲರ ಪತ್ನಿ ಚಿನ್ನವ್ವ ದಡದಲ್ಲಿ ನಿಂತು ಒದ್ದಾಡುತ್ತಿದ್ದಳು. ಬೇಗ ಹೋಗ್ರೆಪಾ. ನಮ್ಮ ಹಿರ್ಯಾನ್ (ಗಂಡನಿಗೆ ಹಿರ್ಯಾ ಎನ್ನುತ್ತಾರೆ) ಕರ್ಕೊಂಡು ಬರ್ರಿ ಎಂದು ಅಂಗಲಾಚುತ್ತಿದ್ದಳು. ದೂರ ಒಂದೂವರೆ ಕಿ.ಮೀ ಅಂತರದಲ್ಲಿ ಪತಿ ಮತ್ತು ಮಗ ನಿಂತುಕೊಂಡಿದ್ದನ್ನು ಖಾತ್ರಿಪಡಿಸಿಕೊಂಡು, ಅತ್ತಿಂದ ಇತ್ತ, ಇತ್ತಿಂದ ಅತ್ತ ಅಲೆದಾಡುತ್ತ, ಪೊಲೀಸರಿಗೆ ಮನವಿ ಮಾಡುತ್ತಿದ್ದಳು.
ಆಯುಕ್ತ-ಡಿಸಿ-ಶಾಸಕ ಭೇಟಿ: ಘಟಪ್ರಭಾ ನದಿಯಲ್ಲಿ ಸಿಲುಕಿದ್ದ ಶ್ರೀಶೈಲ, ರಮೇಶ ಉಪ್ಪಾರ ಹಾಗೂ ಅದೇ ಸ್ಥಳದ ಸುಮಾರು 50 ಮೀಟರ್ ದೂರದ ಇನ್ನೊಂದೆಡೆ ಮರವೇರಿ ಕುಳಿತಿದ್ದ ರಮೇಶ ದಡ್ಡಿ ಅವರ ರಕ್ಷಣಾ ಕಾರ್ಯಾಚರಣೆ ವೇಳೆ ಬೆಳಗಾವಿ ಪ್ರಾದೇಶಿಕ ಆಯುಕ್ತ ತುಷಾರ ಗಿರಿನಾಥ, ಜಿಲ್ಲಾಧಿಕಾರಿ ರಾಮಚಂದ್ರನ್ ಹಾಗೂ ಮುಧೋಳ ಶಾಸಕ ಗೋವಿಂದ ಕಾರಜೋಳ ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿದರು.
ರೈತ ಮುಖಂಡರ ವಾಗ್ವಾದ:
ಜೀರಗಾಳ ಸಮೀಪದ ಘಟಪ್ರಭಾ ನದಿಯಲ್ಲಿ ಸಿಲುಕಿದ್ದ ಮೂವರ ರಕ್ಷಣಾ ಕಾರ್ಯಾಚರಣೆ ನಡೆದಿರುವಾಗಲೇ ಸ್ಥಳಕ್ಕೆ ಆಗಮಿಸಿದ್ದ ರೈತರು ಮುಖಂಡರು, ಜಿಲ್ಲಾಧಿಕಾರಿ ಜತೆಗೆ ವಾಗ್ವಾದ ನಡೆಸಿದ ಪ್ರಸಂಗವೂ ನಡೆಯಿತು. ಘಟಪ್ರಭಾ ನದಿಗೆ ಇಷ್ಟೊಂದು ನೀರು ಬಿಡುವುದು ಮೊಲದೇ ಗೊತ್ತಾಗಿದೆ. ಹೀಗಾಗಿ ದನ-ಕರುಗಳು ಹಾಗೂ ಜನರನ್ನು ಮೊದಲೇ ಬೇರೆಡೆ ಸ್ಥಳಾಂತರಿಸಬೇಕಿತ್ತು. ಈಗ ನೀರಿನಲ್ಲಿ ಎಷ್ಟು ದನ ಕೊಚ್ಚಿ ಹೋಗಿವೆ ಎಂಬುದು ತಿಳಿಯುತ್ತಿಲ್ಲ. ಜಿಲ್ಲಾಡಳಿತ ಏನು ರಕ್ಷಣಾ ಕಾರ್ಯ ಮಾಡುತ್ತಿದೆ ಎಂಬುದೂ ಗೊತ್ತಾಗುತ್ತಿಲ್ಲ. ನಮಗೆ ಹೇಳಿ ಎಂದು ರೈತ ಮುಖಂಡರು ಒತ್ತಾಯಿಸಿದರು. ಆಗ ತಾಳ್ಮೆ ಕಳೆದುಕೊಂಡ ಡಿಸಿ ರಾಮಚಂದ್ರಮನ್, ನಿಮಗೆ ಎಲ್ಲ ಮಾಹಿತಿ ಕೊಡುತ್ತೇನೆ. ನಾನು ಎಲ್ಲೂ ಓಡಿ ಹೋಗಲ್ಲ. ಸಧ್ಯ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆ ಮಾಡಲು ಬಿಡಿ ಎಂದರು. ಆಗ ರೈತ ಮುಖಂಡರನ್ನು ಪೊಲೀಸರು ಅಲ್ಲಿಂದ ಕಳುಹಿಸಿದರು.
ನಾವು ಹೊದಲ ಮನೆಯಿಂದ ಬುಧವಾರ ರಾತ್ರಿಯೇ ಗ್ರಾಮದ ಮನೆಗೆ ಹೋಗಿದ್ದೇವು. ಮುಂಜಾನಿ 5-30ಕ್ಕ ಬಂದು ದನ ತೆಗೆದುಕೊಂಡು ಹೋಗಲು ಬಂದಿದ್ದೇವು. ನಾವು ಬರುವಾಗ ಒಂದು ಫುಟ ನೀರು ಇತ್ತು. ದನಗೋಳ ತಗೊಂಡು ಬರುವಷ್ಟರೊಳಗ ಎದಿಮಟ ನೀರು ಬಂದಿತ್ತು. ನಾವೇನು ಬದುಕುದಿಲ್ಲಾ ಅನಿಸಿತ್ತು. ಎಲ್ಲ ಅಧಿಕಾರಿಗಳು ಕೂಡಿ, ನಮ್ಮನ್ನ ರಕ್ಷಣೆ ಮಾಡ್ಯಾರ್. ಹೋದ್ ಜೀವಾ ಮರಳಿ ಬಂದಂಗ್ ಆಗೈತಿ. •ಶ್ರೀಶೈಲ ರಾಮಪ್ಪ ಉಪ್ಪಾರ ಪ್ರವಾಹದಲ್ಲಿ ಸಿಲುಕಿದ್ದ ಜೀರಗಾಳದ ರೈತ
•ಶ್ರೀಶೈಲ ಕೆ. ಬಿರಾದಾರ