Advertisement

ಬೌ..ಬೌ..

10:54 AM Jul 13, 2019 | Team Udayavani |

ಹಾವೇರಿ: ನಗರದ ವಿವಿಧ ಬಡಾವಣೆ, ರಸ್ತೆಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ನಾಯಿಗಳ ಭಯದಲ್ಲೇ ಬೀದಿಗಳಲ್ಲಿ ಓಡಾಡುವಂತಾಗಿದೆ.

Advertisement

ನಗರದಲ್ಲಿ ದಿನದಿಂದ ದಿನಕ್ಕೆ ನಾಯಿಕೊಡೆಗಳಂತೆ ಅಲ್ಲಲ್ಲಿ ತಲೆ ಎತ್ತುತ್ತಿರುವ ಕೋಳಿ ಮಾಂಸದ ಅಂಗಡಿಗಳಿಂದಾಗಿ ಬೀದಿ ನಾಯಿಗಳು ಹಲವು ರಸ್ತೆಗಳಲ್ಲಿ ಹಿಂಡು ಹಿಂಡಾಗಿ ಬೀಡು ಬಿಟ್ಟಿವೆ.

ಭಯದ ವಾತಾವರಣ: ರಸ್ತೆ ಮೇಲೆ ಬೀಡು ಬಿಟ್ಟಿರುವ ಹಲವಾರು ಸಂದರ್ಭದಲ್ಲಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರ ಮೇಲೆ ಎರಗುತ್ತಿದ್ದು, ಅನೇಕ ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅಲ್ಲದೇ ಶಾಲೆಗೆ ಹೋಗುವ ಮಕ್ಕಳು ಸಹ ಭಯ ಪಡುವಂಥ ವಾತಾವರಣ ನಿರ್ಮಾಣವಾಗಿದೆ.

ನಗರದ ದೇವದಾರ ರಸ್ತೆ, ಸುಭಾಸ ಸರ್ಕಲ್, ಮಟನ್‌ ಮಾರ್ಕೆಟ್, ತರಕಾರಿ ಮಾರುಕಟ್ಟೆ, ರೇಲ್ವೆ ನಿಲ್ದಾಣ ಸೇರಿದಂತೆ ಪ್ರಮುಖ ಬಡಾವಣೆ ಹಾಗೂ ರಸ್ತೆಗಳಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ರಸ್ತೆಗಳಲ್ಲಿ ನಡೆಯುತ್ತಿರುವ ನಾಯಿಗಳ ಜಗಳದಿಂದ ಬೈಕ್‌ ಸವಾರರು ಬಿದ್ದು ಗಾಯಗೊಂಡ ಉದಾಹರಣೆಗಳೂ ಇವೆ.

ಬೆನ್ನಟ್ಟುವ ನಾಯಿಗಳು… ಕೆಲ ನಾಯಿಗಳು ಬೈಕ್‌ ಸವಾರರನ್ನು ಬೆನ್ನಟ್ಟುತ್ತಿವೆ. ಪಾದಚಾರಿಗಳ ಮೇಲೆ ದಾಳಿ ಮಾಡುವಂತೆ ಗುರ್‌.. ಎನ್ನುತ್ತವೆ. ಹೀಗಾಗಿ ಮಹಿಳೆಯರು ಹಾಗೂ ಮಕ್ಕಳು ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಬಿದ್ದು ಪೆಟ್ಟು ತಿಂದಿರುವ ಘಟನೆಗಳು ಸಾಕಷ್ಟಿವೆ.

Advertisement

ದೂರವಾದ ನೆಮ್ಮದಿ: ತಡರಾತ್ರಿ ಕೆಲಸ ಮುಗಿಸಿ ಬರುವ ಸಾರ್ವಜನಿಕರ ಮೇಲೆ ದಾಳಿ ನೆಡೆಸಿದ ಉದಾರಣೆಗಳು ಸಾಕಷ್ಟಿದ್ದು, ಬೀದಿ ನಾಯಿಗಳು ಕಾಟದಿಂದ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟಾಗಿದೆ. ಒಟ್ಟಾರೆ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಿದ್ದರಿಂದ ಸಾರ್ವಜನಿಕರ ನೆಮ್ಮದಿ ಹಾಳಾಗಿದೆ. ರಾತ್ರಿ ಸಮಯದಲ್ಲಿ ಬೀದಿ ನಾಯಿಗಳು ಬೊಗಳುವುದರಿಂದ ನೆಮ್ಮದಿಯಾಗಿ ನಿದ್ರೆ ಮಾಡದ ಪರಿಸ್ಥಿತಿ ಬಂದೊದಗಿದೆ.

ನಗರಸಭೆ ನಿರ್ಲಕ್ಷ್ಯ: ದಿನದಿಂದ ದಿನಕ್ಕೆ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಿದ್ದು, ನಗರಸಭೆ ಮಾತ್ರ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ. ಇಲ್ಲಿಯವರೆಗೆ ಎಷ್ಟು ನಾಯಿಗಳನ್ನು ಹಿಡಿದಿದ್ದೀರಿ?, ಎಷ್ಟು ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲಾಗಿದೆ?, ಹಿಡಿದಿರುವ ನಾಯಿಗಳನ್ನು ಎಲ್ಲಿ ಬಿಟ್ಟಿದ್ದೀರಿ? ಎಂದು ಕೇಳಿದರೆ ನಗರಸಭೆ ಸಿಬ್ಬಂದಿಗಳು ಸ್ಪಷ್ಟ ಮಾಹಿತಿ ಇಲ್ಲ.

ಕಳೆದ ಮೂರು ವರ್ಷಗಳ ಹಿಂದೆ ಮಾಡಿದ ಬೀದಿ ನಾಯಿಗಳ ಗಣತಿಯಂತೆ ನಗರದಲ್ಲಿ 1600 ರಿಂದ 2000 ನಾಯಿಗಳ ಸಂಖ್ಯೆ ಇದೆ. ಆದರೆ, ಬೀದಿ ನಾಯಿಗಳ ನಿಯಂತ್ರಣಕ್ಕೆ ಹಲವು ಕಟ್ಟುಪಾಡುಗಳಿದ್ದು, ಅವುಗಳನ್ನು ಕೊಲ್ಲುವಂತಿಲ್ಲ ಬೇರೆಡೆಗೆ ಬಿಟ್ಟು ಬರುವಂತಿಲ್ಲ. ಕೇವಲ ಸಂತಾನಹರಣ ಚಿಕಿತ್ಸೆ ನೀಡುವ ಮೂಲಕ ತಡೆಗಟ್ಟಬೇಕಾಗುತ್ತದೆ. ಅಲ್ಲದೇ, ಒಂದು ನಾಯಿಗೆ ಚಿಕಿತ್ಸೆ ನೀಡಲು 800 ರಿಂದ 1000 ಸಾವಿರ ರೂ. ವೆಚ್ಚ ತಗಲುತ್ತದೆ. ಇದು ಕೂಡ ನಗರಸಭೆ ನಾಯಿಗಳ ನಿಯಂತ್ರಣಕ್ಕೆ ಹಿಂದೇಟು ಹಾಕಲು ಕಾರಣವಾಗಿದೆ. ಬೀದಿ ನಾಯಿ ಕಾಟದಿಂದ ಕಂಗೆಟ್ಟ ಜನರು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.

 

•ಎಚ್.ಕೆ. ನಟರಾಜ್‌

Advertisement

Udayavani is now on Telegram. Click here to join our channel and stay updated with the latest news.

Next