ನರೇಗಲ್ಲ: ಕೋವಿಡ್ ಸೋಂಕಿನ ಪರಿಣಾಮವಾಗಿ ಎರಡು ತಿಂಗಳಗಳಿಂದ ರೈತರು ದೊಡ್ಡ ಪ್ರಮಾಣದ ಸಂಕಷ್ಟ ಎದುರಿಸುತ್ತಿದ್ದು, ಈರುಳ್ಳಿ ಬೆಳೆಗೆ ಮಾರುಕಟ್ಟೆ ಹಾಗೂ ದರವಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಪಟ್ಟಣದ ಅನೇಕ ರೈತರು ನೀರಾವರಿ ಜಮೀನಿನಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದು, ಉತ್ತಮ ಫಸಲು ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ದರವಿಲ್ಲದ ಕಾರಣ ಕಣ್ಣೀರು ಹಾಕುವಂತಾಗಿದೆ.
ಪಟ್ಟಣದ ರೈತ ಶಿವಪ್ಪ ಗೋಡಿ ಸುಮಾರು 1.5 ಲಕ್ಷ ರೂ. ಖರ್ಚು ಮಾಡಿ 4 ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದರು. ದುಬಾರಿ ಬೀಜ, ಗೊಬ್ಬರ, ಕಳೆ ನಿರ್ವಹಣೆ, ರಾಸಾಯನಿಕ ಸಿಂಪರಣೆ ಸೇರಿದಂತೆ ಇತರೆ ಖರ್ಚುಗಳಿಗೆ ಸಾಕಷ್ಟು ಹಣ ವ್ಯಯ ಮಾಡಿದ್ದಾರೆ. ಉತ್ತಮ ಫಸಲು ಬಂದು ನಿರೀಕ್ಷಿತ ಪ್ರಮಾಣದ ಆದಾಯದ ಕನಸು ಕಾಣುತ್ತಿದ್ದ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಈಗಾಗಲೇ 100 ಚೀಲ ಉಳ್ಳಾಗಡ್ಡಿ ಮಾರಾಟಕ್ಕೆ ಸಿದ್ಧವಾಗಿದ್ದರೆ, 3 ಎಕರೆ ಪ್ರದೇಶದಲ್ಲಿನ ಈರುಳ್ಳಿ ಕಟಾವು ಮಾಡಲು ಸಿದ್ಧವಾಗಿದೆ. ಆದರೆ, ಕಟಾವು ಮಾಡಿದ ಕೂಲಿ ಹಣವೂ ಮರಳಿ ಬಾರದ ಪರಿಸ್ಥಿತಿ ಇರುವುದರಿಂದ ಜಮೀನಿನಲ್ಲಿಯೇ ಈರುಳ್ಳಿ ಹಾಳಾಗುತ್ತಿದೆ. ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಕಾರಣ ರೈತನಿಗೆ ದಿಕ್ಕು ತೋಚದಂತಾಗಿದೆ.
ಹಗಲು ರಾತ್ರಿಯೆನ್ನದೇ ಈರುಳ್ಳಿ ಬೆಳೆಗೆ ನೀರು ಹಾಯಿಸಿ ಬೆಳೆಯಲಾಗಿತ್ತು. ಸರಿ ಸುಮಾರು 300ರಿಂದ 400 ಚೀಲ ಈರುಳ್ಳಿ ಫಸಲು ಬಂದಿದೆ. ಅಂದಾಜು 4 ಲಕ್ಷ ರೂ.ಗಳ ಆದಾಯ ನಿರೀಕ್ಷಿಸಲಾಗಿತ್ತು. ಆದರೆ, ಮಾರುಕಟ್ಟೆಯಲ್ಲಿ ಈರುಳ್ಳಿಯನ್ನು ಕೇಳುವವರೇ ಇಲ್ಲ. ಚೀಲಕ್ಕೆ 200 ರಿಂದ 300 ರೂ.ಗಳಿಗೆ ಕೇಳುತ್ತಾರೆ. ಈರುಳ್ಳಿ ಬೀಜ, ಗೊಬ್ಬರ ಸೇರಿದಂತೆ ಇತರೆ ಖರ್ಚು ಲೆಕ್ಕ ಹಾಕಿದರೆ, ಕೇವಲ ಕಟಾವು ಮಾಡಿದ ಕೂಲಿಯೂ ಬರುವುದಿಲ್ಲ. ಈ ಕುರಿತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದೇನೆ. ತೋಟಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದರು
.ಒಂದು ವಾರ ಕಳೆದರೂ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ. ದಯವಿಟ್ಟು ಅಧಿಕಾರಿಗಳು ಇತ್ತ ಗಮನ ಹರಿಸಿ ಪರಿಹಾರ ನೀಡಬೇಕು. ಇಲ್ಲದಿದ್ದರೆ ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಳ್ಳುವುದೊಂದೇ ದಾರಿ ಎಂದು ಹೇಳುತ್ತಾರೆ ಉಳ್ಳಾಗಡ್ಡಿ ಬೆಳೆದ ರೈತ ಶಿವಪ್ಪ ಗೋಡಿ.
ರೋಣ/ಗಜೇಂದ್ರಗಡ ತಾಲೂಕಿನ ತೋಟಗಾರಿಕೆ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ದರವಿಲ್ಲದರ ಕುರಿತು ಮಾಹಿತಿ ಇದೆ. ಈಗಾಗಲೇ ಅನೇಕ ತೋಟಗಳಿಗೆ ಭೇಟಿ ನೀಡಿ ಸ್ಥಾನಿಕ ಪರಿಶೀಲನೆ ಕೈಗೊಳ್ಳಲಾಗಿದ್ದು, ಇನ್ನುಳಿದ ತೋಟಗಳಿಗೆ ಭೇಟಿ ನೀಡಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ.
-ಎಂ.ಎಂ. ತಾಂಬೂಟಿ, ರೋಣ ತೋಟಗಾರಿಕೆ ಸಹಾಯಕ ನಿರ್ದೇಶಕ