Advertisement

ಅಂತ್ಯಕ್ರಿಯೆಗೆ ತಪ್ಪದ ಸಂಕಟ

02:54 PM Jan 07, 2020 | Suhan S |

ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆಯ ಲಾಲ್‌ ಬಹಾದ್ದೂರ್‌ ಜಲಾಶಯ ನಿರ್ಮಾಣಕ್ಕೆ ಮುಳುಗಡೆ ಹೊಂದಿರುವ ಪ್ರಥಮ ಗ್ರಾಮಗಳಲ್ಲಿ ಒಂದಾಗಿರುವ ಆಲಮಟ್ಟಿಯಲ್ಲಿ ಅಂತ್ಯಕ್ರಿಯೆಗೆ ಪರದಾಡುವಂಹ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

20 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಆಲಮಟ್ಟಿ ಪುನರ್ವಸತಿ ಕೇಂದ್ರಕ್ಕೆ ಸುಮಾರು 10 ಎಕರೆ ಜಮೀನನ್ನು ಕೃ.ಮೇ.ಯೋ. ಪುನರ್ವಸತಿ ಇಲಾಖೆಯಿಂದ ಸ್ವಾಧೀನ ಮಾಡಿಕೊಂಡಿದ್ದರೂ ಕೂಡ ಸ್ಮಶಾನಕ್ಕೆ ಅಗತ್ಯವಾಗಿರುವ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಅಲ್ಲದೇ ಅದರಲ್ಲಿ ಅಂತ್ಯಕ್ರಿಯೆ ನಡೆಸಬೇಕೆಂದರೆ ಸ್ಮಶಾನದ ತುಂಬೆಲ್ಲ ಮುಳ್ಳು ಕಂಟಿಗಳು ತುಂಬಿವೆ.ಅಲ್ಲದೇ ಆ ಸ್ಥಳ ಕೂಡ ಸವುಳು-ಜವುಳಿನಿಂದ ಕೂಡಿದ್ದರಿಂದ ಮಳೆಗಾಲದಲ್ಲಂತೂ ಎಲ್ಲೆಂದರಲ್ಲಿ ನೀರು ಜಿನುಗುತ್ತದೆ.

ಅಂತ್ಯಕ್ರಿಯೆ ಎಲ್ಲಿ?: ಪಟ್ಟಣದಲ್ಲಿ ಯಾರಾದರೂ ಮೃತರಾದರೆ ಅವರ ಅಂತ್ಯಕ್ರಿಯೆಯನ್ನು ಪಾರ್ವತಿ ಕಟ್ಟೆ ಸೇತುವೆ ಹತ್ತಿರ ಇಲ್ಲವೇ ರಾಕ್‌ ಉದ್ಯಾನದ ಮುಂಭಾಗದಲ್ಲಿರುವ ಸರ್ಕಾರಿ ಜಾಗೆಯಲ್ಲಿ ನಡೆಸಲಾಗುತ್ತಿದೆ. ಇದರಿಂದ ಪುನರ್ವಸತಿ ಕೇಂದ್ರವಾಗಿರುವ ಆಲಮಟ್ಟಿಗೆ ಸಮರ್ಪಕವಾಗಿ ರುದ್ರಭೂಮಿಯಿಲ್ಲದೇ ಇರುವುದರಿಂದ ಅನಿವಾರ್ಯವಾಗಿ ಹೀಗೆ ಮಾಡಬೇಕಾಗುತ್ತಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಿಡಗುಂದಿ ತಾಲೂಕು ಉಪಾಧ್ಯಕ್ಷ ವೆಂಕಟೇಶ ವಡ್ಡರ.

ಆಲಮಟ್ಟಿಯನ್ನು ಸುಮಾರು 1980ರ ದಶಕದಲ್ಲಿ ಅವೈಜ್ಞಾನಿಕ ಪುನರ್ವಸತಿ ಕೇಂದ್ರ ನಿರ್ಮಾಣ ಮಾಡಿದ್ದರ ಪರಿಣಾಮ ಸಂತ್ರಸ್ತರು ಇನ್ನೂವರೆಗೆ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇನ್ನು ಸಂತ್ರಸ್ತರಾದವರು ಮರಣ ಹೊಂದಿದರೆ ಅವರ ಅಂತ್ಯಕ್ರಿಯೆ ನಡೆಸಲೂ ಪ್ರಯಾಸ ಪಡುವಂತಾಗಿದೆ.

ಆಲಮಟ್ಟಿ ಪುನರ್ವಸತಿ ಕೇಂದ್ರಕ್ಕೆ ಸ್ಮಶಾನ ಜಾಗೆ ಬಗ್ಗೆ ಯಾವ ದಾಖಲೆಯಿಲ್ಲ, ನೀರಿನ ವ್ಯವಸ್ಥೆಯಿಲ್ಲ, ವಿದ್ಯುತ್‌ ವ್ಯವಸ್ಥೆಯಿಲ್ಲ. ಅಲ್ಲದೇ ಎಲ್ಲೆಡೆಯೂ ಮುಳ್ಳು ಕಂಟಿಗಳು ತುಂಬಿದ್ದು ಸವುಳು-ಜವುಳಿನಿಂದ ಕೂಡಿದೆ. ಗ್ರಾಮಸ್ಥರಿಗೆ ಅದನ್ನು ಇನ್ನೂವರೆಗೆ ಪುನರ್ವಸತಿ ಇಲಾಖೆಯವರು ತೋರಿಸಿಲ್ಲ. ಅಲ್ಲದೇ ಅಲ್ಲಿಗೆ ಹೋಗಲು ಸಮರ್ಪಕ ರಸ್ತೆಯೂ ಇಲ್ಲ. ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಅಂತ್ಯಕ್ರಿಯೆ ನಡೆಸಲು ಜಾಗವಿಲ್ಲದಂತಾಗಿದೆ.

Advertisement

 

-ಶಂಕರ ಜಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next