ದೇವದುರ್ಗ: ಪಟ್ಟಣದ ಸಾರ್ವಜನಿಕ ಕ್ಲಬ್ ಆವರಣದ ಪಕ್ಕದ ಬಿಎಸ್‌ಎನ್ ಎಲ್ ಗ್ರಾಹಕರ ಸೇವಾ ಕೇಂದ್ರದಲ್ಲಿ ಆಧಾರ್ ನೋಂದಣಿ, ತಿದ್ದುಪಡಿಗೆ ವ್ಯವಸ್ಥೆ ಮಾಡಲಾಗಿದೆ. ಆದರೆ ಅಧಿಕಾರಿ ರಜೆ, ಬಿಎಸ್ಸೆನ್ನೆಲ್ ಕೆಲಸ-ಕಾರ್ಯ ನಿಮಿತ್ತ ತೆರಳಿದಾಗ ಸಾರ್ವಜನಿಕರು ಸೇವಾ ಕೇಂದ್ರಕ್ಕೆ ಬಂದು ಬರಿಗೈಲಿ ವಾಪಸ್ ಹೋಗುವಂತಾಗಿದೆ.
ಆಧಾರ್ ಕಾರ್ಡ್ ಹೊಣೆ: ಮೊಬೈಲ್ ಬಳಸುವವರ ಸಂಖ್ಯೆ ಹೆಚ್ಚಿದಂತೆ ಸ್ಥಿರ ದೂರವಾಣಿ ಸಂಪರ್ಕಗಳು ಕಡಿಮೆ ಆಗಿವೆ. ಈ ಕಾರಣಕ್ಕಾಗಿ ಕೇಂದ್ರ ಸರ್ಕಾರ ಗ್ರಾಹಕರ ಸೇವಾ ಕೇಂದ್ರದಲ್ಲಿ ಆಧಾರ್ ನೋಂದಣಿಗೆ ವ್ಯವಸ್ಥೆ ಮಾಡಿದೆ. ಇಲ್ಲಿರುವ ಅಧಿಕಾರಿ ಬಿಎಸ್ಸೆನ್ನೆಲ್ ಕೆಲಸ ಕಾರ್ಯದ ಜೊತೆಗೆ ಹೆಚ್ಚುವರಿಯಾಗಿ ಆಧಾರ್ ತಿದ್ದುಪಡಿ, ನೋಂದಣಿ ಕರ್ತವ್ಯ ನಿರ್ವಹಿಸಬೇಕಿದೆ.
ಅಧಿಕಾರಿ ರಜೆ, ಬಿಎಸ್ಸೆನ್ನೆಲ್ ಕಚೇರಿ ಮಿಟಿಂಗ್, ದೂರವಾಣಿ ಸಂಪರ್ಕಗಳಲ್ಲಿ ವ್ಯತ್ಯಯವಾದಾಗ ದುರಸ್ತಿ ಇತರೆ ಕಾರ್ಯಕ್ಕೆ ಹೋದಾಗ ಇಲ್ಲಿ ಆಧಾರ್ ನೋಂದಣಿ ಸ್ಥಗಿತಗೊಳ್ಳುತ್ತದೆ. ಹೀಗಾಗಿ ಕೆಲವೊಮ್ಮೆ ಸಾರ್ವಜನಿಕರು ಗ್ರಾಹಕರ ಸೇವಾ ಕೇಂದ್ರಕ್ಕೆ ಆಗಮಿಸಿ ತಾಸುಗಟ್ಟಲೇ ನಿಂತು ಕೆಲಸವಾಗದೇ ವಾಪಸ್ ಹೋಗುವಂತಾಗಿದೆ.
ಹುದ್ದೆ ಖಾಲಿ: ಬಿಎಸ್‌ಎನ್‌ಎಲ್ ಗ್ರಾಹಕರ ಸೇವಾ ಕೇಂದ್ರದಲ್ಲಿ ಬಹುತೇಕ ಹುದ್ದೆಗಳು ಖಾಲಿ ಇವೆ. ಜ್ಯೂನಿಯರ್ ಟೆಲಿಕಾಂ ಅಧಿಕಾರಿಯೇ ಎಲ್ಲವನ್ನು ನಿರ್ವಹಿಸಬೇಕಿದೆ. ಕ್ಲರ್ಕ್, ಟಿಟಿಎ, ಲೇಬರ್ ಸೇರಿ 4 ಜನ ಫೋನ್ ಮೆಕ್ಯಾನಿಕ್ ಹುದ್ದೆಗಳು ಖಾಲಿ ಇವೆ. ಕೇಂದ್ರ ಸರ್ಕಾರ ಖಾಲಿ ಹುದ್ದೆ ಭರ್ತಿಗೆ ಮುಂದಾಗುತ್ತಿಲ್ಲ. ಹೀಗಾಗಿ ಇರುವ ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಿದೆ.
ಎಲ್ಲೆಲ್ಲಿ ದೂರವಾಣಿ ಸಂಪರ್ಕ: ಪಟ್ಟಣ ಸೇರಿ ತಾಲೂಕಿನಾದ್ಯಂತ ಅರಕೇರಾ, ಗಬ್ಬೂರು, ಜಾಲಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ದೂರವಾಣಿ ಮತ್ತು ಡಾಟಾ ಸಂಪರ್ಕ ಇವೆ. ಅರಕೇರಾದಲ್ಲಿ 20, ಗಬ್ಬೂರು 20, ಜಾಲಹಳ್ಳಿ ಗ್ರಾಮದಲ್ಲಿ 35 ದೂರವಾಣಿ ಸೌಲಭ್ಯ ಕಲ್ಪಿಸಲಾಗಿದೆ. ಇಲ್ಲಿ ದೂರವಾಣಿ ಸೇವೆಯಲ್ಲಿ ವ್ಯತ್ಯಯವಾದಾಗ ಗ್ರಾಹಕರ ಸೇವಾ ಕೇಂದ್ರದಲ್ಲಿನ ಅಧಿಕಾರಿಯೇ ಸ್ಥಳಕ್ಕೆ ತೆರಳಿ ಸರಿಪಡಿಸಬೇಕಿದೆ. ಇನ್ನು ಬಿ.ಗಣೇಕಲ್, ಹಿರೇಬೂದೂರು, ಕೊಪ್ಪರ ಸೇರಿ ಇತರೆಡೆ ಬಿಎಸ್‌ಎನ್‌ಎಲ್ ಟವರ್ ಅಳವಡಿಸಲಾಗಿದೆ. ಇಲ್ಲೂ ತಾಂತ್ರಿಕ ಸಮಸ್ಯೆ ಎದುರಾದರೆ ಅವರೇ ನಿರ್ವಹಣೆ ಮಾಡಬೇಕಿದೆ.
ಕಟ್ಟಡ ಶಿಥಿಲ: ಇನ್ನು ಬಿಎಸ್ಸೆನ್ನೆಲ್ ಗ್ರಾಹಕರ ಸೇವಾ ಕೇಂದ್ರ ನಿರ್ವಹಣೆ ಕೊರತೆಯಿಂದಾಗಿ ಎಲ್ಲೆಂದರಲ್ಲಿ ಬಿರುಕು ಬಿಟ್ಟು ಶಿಥಿಲಗೊಂಡಿದೆ. ಸುಮಾರು 30 ವರ್ಷದ ಹಿಂದೆ ಈ ಕಟ್ಟಡ ನಿರ್ಮಿಸಲಾಗಿದೆ.
ವೇತನವಿಲ್ಲ: ಬಿಎಸ್‌ಎನ್‌ಎಲ್ ಗ್ರಾಹಕರ ಸೇವಾ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ದಿನಗೂಲಿ ಸಿಬ್ಬಂದಿಗೆ ವರ್ಷದಿಂದ ವೇತನವಾಗಿಲ್ಲ. ಕುಟುಂಬ ನಿರ್ವಹಣೆಗೆ ಸಂಕಷ್ಟ ಎದುರಿಸುವಂತಾಗಿದೆ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
ಬಿಎಸ್ಸೆನ್ನೆಲ್ ಕಚೇರಿಯಲ್ಲಿ ಹುದ್ದೆಗಳು ಖಾಲಿ ಇವೆ. ಕೆಲಸ ಕಾರ್ಯಗಳಿಗೆ ಸ್ವಲ್ಪ ತೊಂದರೆ ಆಗುತ್ತಿದೆ. ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಜವಾಬ್ದಾರಿ ವಹಿಸಲಾಗಿದೆ. ಕೇಬಲ್ ಸಮಸ್ಯೆ ಬಂದಾಗ ದುರಸ್ತಿಗೆ ಹೋಗಬೇಕಿರುವುದರಿಂದ ಜನರಿಗೆ ಆಧಾರ್ ಸೇವಾ ಸೌಲಭ್ಯ ನೀಡಲು ಆಗುತ್ತಿಲ್ಲ.
-ಕಾಂತಿಭೂಷಣ, ಜ್ಯೂನಿಯರ್ ಟೆಲಿಕಾಂ ಅಧಿಕಾರಿ
-ನಾಗರಾಜ ತೇಲ್ಕರ್