ಅದು ಬೆಂಗಳೂರಿನ ಮಿಲ್ಕ್ ಕಾಲೋನಿ ಗ್ರೌಂಡ್‌ನಲ್ಲಿ ಹಾಕಲಾಗಿದ್ದ ದೊಡ್ಡ ಸೆಟ್. ಅಲ್ಲಿ ಖ್ಯಾತ ನೃತ್ಯ ನಿರ್ದೇಶಕ ರಾಜು ಸುಂದರಂ ಅವರ ನೃತ್ಯ ಸಂಯೋಜನೆಯಲ್ಲಿ “ಪಕ್ಕದ ಮನೆ ಪಮ್ಮಿ… ಕೊಡ್ತಾಳೆ ಸಿಗ್ನಲ್ ಕೆಮ್ಮಿ…’ ಅನ್ನೋ ಹಾಡಿನ ಸಾಲುಗಳಿಗೆ ನವ ನಟ ವಿಕ್ರಮ್ ರವಿಚಂದ್ರನ್ ಹೆಜ್ಜೆ ಹಾಕುತ್ತಿದ್ದರು. ಈ ದೃಶ್ಯಗಳನ್ನು ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದರೆ, ನಿರ್ದೇಶಕ ಸಹನಾ ಮೂರ್ತಿ ಚಿತ್ರದ ದೃಶ್ಯಗಳ ಟೇಕ್ ಓ.ಕೆ ಮಾಡುತ್ತಿದ್ದರು.
ಇದು “ತ್ರಿವಿಕ್ರಮ’ ಚಿತ್ರದ ಹಾಡಿನ ದೃಶ್ಯವೊಂದರ ಚಿತ್ರೀಕರಣದ ಸಂದರ್ಭ. ಕ್ರೇಜಿಸ್ಟಾರ್ ರವಿಚಂದ್ರನ್ ದ್ವಿತೀಯ ಪುತ್ರ ವಿಕ್ರಮ್ ರವಿಚಂದ್ರನ್ ನಾಯಕನಾಗಿ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ “ತ್ರಿವಿಕ್ರಮ’ ಸದ್ಯ ಭರದಿಂದ ಚಿತ್ರೀಕರಣದಲ್ಲಿ ನಿರತವಾಗಿದೆ. ಈಗಾಗಲೇ ಶೇಕಡಾ 30ರಷ್ಟು ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಚಿತ್ರದ ಚಿತ್ರೀಕರಣದ ಬಗ್ಗೆ ಮಾಹಿತಿ ನೀಡಲು ಮಾಧ್ಯಮಗಳು ಮತ್ತು ಪತ್ರಕರ್ತರನ್ನು ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಆಹ್ವಾನಿಸಿತ್ತು. ಈ ವೇಳೆ ಚಿತ್ರದ ಹಾಡಿನ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರೀಕರಣದ ನಡುವೆ ಬ್ರೇಕ್ ತೆಗೆದುಕೊಂಡು ಚಿತ್ರತಂಡ ಮಾತಿಗಿಳಿಯಿತು.
ಮೊದಲಿಗೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಸಹನಾ ಮೂರ್ತಿ, “ಈಗಾಗಲೇ ಸುಮಾರು 18 ದಿನಗಳ ಕಾಲ “ತ್ರಿವಿಕ್ರಮ’ ಚಿತ್ರದ ಶೂಟಿಂಗ್ ಮಾಡಿದ್ದೇವೆ. ಚಿತ್ರೀಕರಣ ಸರಾಗವಾಗಿ ನಡೆಯುತ್ತಿದ್ದು, ಚಿತ್ರ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಚಿತ್ರವಾಗಿದ್ದು, ಎಲ್ಲಾ ವರ್ಗದ ಆಡಿಯನ್ಸ್‌ಗೂ “ತ್ರಿವಿಕ್ರಮ’ ಇಷ್ಟವಾಗಲಿದ್ದಾನೆ. ನಾಯಕ ನಟ ವಿಕ್ರಮ್ ಕೂಡ ಸಾಕಷ್ಟು ಪರಿಶ್ರಮ ವಹಿಸಿ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ದೊಡ್ಡ ಕಲಾವಿದರು, ತಂತ್ರಜ್ಞರು ಇರುವುದರಿಂದ ಅದಕ್ಕೆ ತಕ್ಕಂತೆ ಚಿತ್ರ ಕೂಡ ದೊಡ್ಡದಾಗಿ ಬರುತ್ತಿದೆ. ಸದ್ಯ ಕರ್ನಾಟಕದಲ್ಲಿ ಚಿತ್ರದ ಶೂಟಿಂಗ್ ಮುಗಿಸಿ, ನಂತರ ರಾಜಸ್ಥಾನ ಮತ್ತು ವಿದೇಶಗಳಲ್ಲೂ ಶೂಟಿಂಗ್ ಮಾಡಲಿದ್ದೇವೆ’ ಎಂದು ಚಿತ್ರೀಕರಣದ ಯೋಜನೆಯನ್ನು ತೆರೆದಿಟ್ಟರು.
ಇನ್ನು “ತ್ರಿವಿಕ್ರಮ’ ನ ಬಗ್ಗೆ ವಿಕ್ರಮ್ ರವಿಚಂದ್ರನ್ ಕೂಡ ಸಾಕಷ್ಟು ಭರವಸೆಯ ಮಾತುಗಳನ್ನಾಡುತ್ತಾರೆ. “ಗುಣಮಟ್ಟದಲ್ಲಿ ಎಲ್ಲೂ ರಾಜಿ ಇಲ್ಲದಂತೆ ಸಿನಿಮಾ ಮಾಡುತ್ತಿದ್ದೇವೆ. ರವಿಚಂದ್ರನ್ ಮಗ ಅಂದುಕೊಂಡು ಸಿನಿಮಾ ನೋಡಲು ಬರುವವರು, ಹೋಗುವಾಗ ಇದು ವಿಕ್ರಮ್ ರವಿಚಂದ್ರನ್ ಸಿನಿಮಾ ಅಂದಕೊಂಡು ಹೋಗುತ್ತಾರೆ. ಅಷ್ಟರ ಮಟ್ಟಿಗೆ “ತ್ರಿವಿಕ್ರಮ’ ಹೊಸತರದಲ್ಲಿ ಬರುತ್ತಿದೆ’ ಅನ್ನೋದು ವಿಕ್ರಮ್ ಮಾತು.
ಇದೇ ವೇಳೆ ಹಾಜರಿದ್ದ ಚಿತ್ರದ ಛಾಯಾಗ್ರಹಕ ಸಂತೋಷ್ ರೈ ಪಾತಾಜೆ, ಚಿತ್ರದ ಕ್ಯಾಮರಾ ಚಿತ್ರೀಕರಣದ ತಂತ್ರಜ್ಞಾನದ ಬಗ್ಗೆ ಒಂದಷ್ಟು ಮಾಹಿತಿ ಕೊಟ್ಟರೆ, ಕಲಾವಿದರಾದ ತುಳಸಿ ಶಿವಮಣಿ, ಚಿಕ್ಕಣ್ಣ, ನಾಯಕಿ ಆಕಾಂಕ್ಷಾ ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮತ್ತು ಚಿತ್ರೀಕರಣದ ಅನುಭವಗಳ ಬಗ್ಗೆ ಮಾತನಾಡಿದರು. ನಿರ್ಮಾಪಕ ಸೋಮಣ್ಣ, ಕಲಾ ನಿರ್ದೇಶಕ ನಾಗು ಚಿತ್ರದ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡರು.
ಸದ್ಯ ಭರದಿಂದ ಚಿತ್ರೀಕರಣದಲ್ಲಿ ನಿರತವಾಗಿರುವ “ತ್ರಿವಿಕ್ರಮ’ ಇದೇ ವರ್ಷಾಂತ್ಯಕ್ಕೆ ಅಥವಾ ಮುಂದಿನ ವರ್ಷದ ಪ್ರಾರಂಭದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. “ತ್ರಿವಿಕ್ರಮ’ನ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿರುವ ರವಿಪುತ್ರನನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಅನ್ನೋ ಪ್ರಶ್ನೆಗೆ “ತ್ರಿವಿಕ್ರಮ’ ತೆರೆಗೆ ಬಂದ ಮೇಲಷ್ಟೇ ಉತ್ತರ ಸಿಗಲಿದೆ.