Advertisement

ತಿರುವನಂತಪುರ –ಮಂಗಳೂರು ಹೈಸ್ಪೀಡ್‌ ರೈಲ್ವೇ ಲೈನ್‌ ಇನ್ನೂ ಮರೀಚಿಕೆ

02:30 AM Jul 16, 2017 | Team Udayavani |

ಕಾಸರಗೋಡು: ದೂರ ಪ್ರಯಾಣವನ್ನು ಕೇವಲ ಒಂದೆರಡು ಗಂಟೆಗಳಲ್ಲಿ ತಲುಪುವಂತೆ ಮಾಡುವ ಉದ್ದೇಶದಿಂದ ಮತ್ತು ಬಹಳಷ್ಟು ನಿರೀಕ್ಷೆಯಿರಿಸಿಕೊಳ್ಳಲಾಗಿದ್ದ ಮಹತ್ವಾ ಕಾಂಕ್ಷೆಯ ತಿರುವನಂತಪುರ – ಮಂಗಳೂರು ಹೈಸ್ಪೀಡ್‌ ರೈಲ್ವೇ  ಲೈನ್‌ ಇನ್ನೂ ಸಾಕಾರಗೊಳ್ಳದೆ ಮರೀಚಿಕೆಯಾಗಿಯೇ ಉಳಿದುಕೊಂಡಿದೆ. 

Advertisement

ಸುಮಾರು 580 ಕಿ.ಮೀ. ದೂರವನ್ನು ಸುಮಾರು 3 ಗಂಟೆಗಳೊಳಗೆ ತಲುಪುವ ಹೈಸ್ಪೀಡ್‌ ರೈಲು ಯೋಜನೆ ಶೀಘ್ರವೇ ಸಾಕಾರಗೊಳ್ಳುವಂತೆ ಜನರು ಬಯಸಿದ್ದರು. ಆದರೆ ಈ ವರೆಗೂ ಪ್ರಾಥಮಿಕ ಪ್ರಕ್ರಿಯೆಯೇ ಆರಂಭಿಸಿಲ್ಲ. ಇದರಿಂದ ಈ ಯೋಜನೆಯ ಸಾಕಾರದ ಬಗ್ಗೆ ಜನರಲ್ಲಿ ವಿಶ್ವಾಸ ಕಡಿಮೆಯಾಗುತ್ತಿದೆ.

ಕಳೆದ ವರ್ಷವೇ ತಿರುವನಂತಪುರ ಮತ್ತು ಕಣ್ಣೂರು ನಡುವೆ ಹೈಸ್ಪೀಡ್‌ ರೈಲ್ವೇ ಕಾರಿಡಾರ್‌ ಯೋಜನೆಯ ಕಾರ್ಯ ಸಾಧ್ಯತಾ ವರದಿಯನ್ನು ದಿಲ್ಲಿ ಮೆಟ್ರೋ ರೈಲ್ವೇ ಕಾರ್ಪೋರೇಶನ್‌(ಡಿಎಂಆರ್‌) ಸಿದ್ಧಪಡಿಸಿದೆ.

ಈ ವರದಿಯಲ್ಲಿ ಕಾಸರಗೋಡು ಜಿಲ್ಲೆಯನ್ನು ಕೈಬಿಡಲಾಗಿದೆ. ಇದಕ್ಕೆ ಕಾಸರಗೋಡು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಹೊಳೆಗಳ ಹಿನ್ನೆಲೆ ಕಾರಣ. ರಾಜ್ಯದಲ್ಲಿರುವ ಒಟ್ಟು ಹೊಳೆಗಳ ಸಂಖ್ಯೆಯ ಶೇ.30 ರಷ್ಟು ಹೊಳೆಗಳು ಕಾಸರಗೋಡು ಜಿಲ್ಲೆಯಲ್ಲಿವೆೆ. ಇದರಿಂದಾಗಿ ಯೋಜನೆ ವೆಚ್ಚದ ಬಹುಪಾಲು ಮೊತ್ತವನ್ನು ಕಾಸರಗೋಡು ಜಿಲ್ಲೆಯ ಹೊಳೆಯ ಕಾರಣಗಳಿಂದ ವ್ಯಯಿಸಬೇಕಾಗುತ್ತದೆ. ಯೋಜನೆಗೆ ವೆಚ್ಚ ಮಾಡುವ ಮೊತ್ತಕ್ಕೆ ಅನುಗುಣವಾಗಿ ರೈಲ್ವೇಗೆ ವರಮಾನ ಕಾಸರಗೋಡು ಜಿಲ್ಲೆಯಿಂದ ಲಭಿಸದು ಎಂಬುದಾಗಿ ಸಾಧ್ಯತಾ ವರದಿಯಲ್ಲಿ ಸೂಚಿಸಲಾಗಿದೆ. ಕೇವಲ ಎರಡೂವರೆ ಗಂಟೆಗಳೊಳಗೆ ತಿರುವನಂತಪುರಕ್ಕೆ ತಲುಪಬೇಕಾದ ಪ್ರಯಾಣಿಕರ ಸಂಖ್ಯೆ ಕಾಸರಗೋಡು ಜಿಲ್ಲೆಯಲ್ಲಿ ಕಡಿಮೆ ಎಂಬುದಾಗಿ ಸರಕಾರಕ್ಕೆ ಲಭಿಸಿದ ವರದಿಯಲ್ಲಿ ತಿಳಿಸಲಾಗಿದೆ. ಹೈಸ್ಪೀಡ್‌ ರೈಲ್ವೇ ಲೈನ್‌ ನಿರ್ಮಾಣ ಕಾಸರಗೋಡಿನ ವರೆಗೆ ವಿಸ್ತರಿಸಿದರೆ ಯೋಜನೆ ಪೂರ್ತಿಗೊಳ್ಳಲು ಬಹಳಷ್ಟು ವಿಳಂಬವಾಗಬಹುದು.

ಕಾಸರಗೋಡು ಜಿಲ್ಲೆಯ ಗುಡ್ಡಗಳಲ್ಲಿ ಸುರಂಗಗಳ ನಿರ್ಮಾಣ, ಹೊಳೆಗಳಿಗೆ ಸೇತುವೆ ನಿರ್ಮಾಣ ಅಗತ್ಯವಾಗಿದ್ದು, ಇದಕ್ಕೆ ಬಹಳಷ್ಟು ಮೊತ್ತವನ್ನು ವ್ಯಯಿಸಬೇಕಾಗುತ್ತದೆ. ಅಲ್ಲದೆ ಈ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಕಷ್ಟು ಕಾಲಾವಕಾಶವೂ ಅಗತ್ಯವಿದೆ. ಇದರಿಂದಾಗಿ ಯೋಜನೆ ಶೀಘ್ರ ಸಾಕಾರಗೊಳ್ಳದು ಎಂದು ವರದಿಯಲ್ಲಿ ಸೂಚಿಸಿತ್ತು. ಕಾಸರಗೋಡು ಜಿಲ್ಲೆಯ ಪ್ರಕೃತಿ ಸ್ವರೂಪ ಹೈಸ್ಪೀಡ್‌ ರೈಲ್ವೇ ಲೈನ್‌ ನಿರ್ಮಾಣಕ್ಕೆ ಅನುಕೂಲಕರವಾಗಿಲ್ಲ ಎಂದು ವರದಿಯಲ್ಲಿದೆ.

Advertisement

ಕೇರಳ ರಾಜ್ಯದಲ್ಲಿ ಒಟ್ಟು 44 ಹೊಳೆಗಳಿವೆ. ಈ ಪೈಕಿ ಕಾಸರಗೋಡು ಜಿಲ್ಲೆಯಲ್ಲಿ 12 ಹೊಳೆಗಳಿವೆ. ಕವ್ವಾಯಿ ಹಿನ್ನೀರು ಅಲ್ಲದೆ ಕಾರ್ಯಂಗೋಡು, ನೀಲೇಶ್ವರ, ಚಿತ್ತಾರಿ, ಬೇಕಲ, ಕಳನಾಡು, ಚಂದ್ರಗಿರಿ, ಮೊಗ್ರಾಲ್‌, ಕುಂಬಳೆ, ಶಿರಿಯ, ಉಪ್ಪಳ, ಮಂಜೇಶ್ವರ ಹೊಳೆಗಳನ್ನು ಸಾಗಿ ರೈಲು ಗಾಡಿ ಮುಂದುವರಿಯಬೇಕು. ಹೈಸ್ಪೀಡ್‌ ರೈಲ್ವೇ ಲೈನ್‌ ನಿರ್ಮಾಣ ಸಂದರ್ಭದಲ್ಲಿ ಈ ಹೊಳೆಗಳಿಗೆ ಬಲಿಷ್ಠವಾದ ಸೇತುವೆ ನಿರ್ಮಾಣ ಅಗತ್ಯವಾಗಿದೆ. ಸೇತುವೆ ನಿರ್ಮಾಣಕ್ಕೆ ಬಹಳಷ್ಟು ಮೊತ್ತವನ್ನು ವ್ಯಯಿಸಬೇಕಾಗುತ್ತದೆ. ಪ್ರಸ್ತುತ ಇರುವ ಸೇತುವೆಗಳೆಲ್ಲ ಹಳತು. ಈ ಸೇತುವೆಗಳೆಲ್ಲ ಬದಲಿಸಬೇಕಾದ ಕಾಲ ಈಗಾಗಲೇ ಕಳೆದಿದೆ. ಸಂಬಂಧಪಟ್ಟ ಅಧಿಕಾರಿಗಳ ನಿರ್ದೇಶದ ಪ್ರಕಾರ ಕಾಸರಗೋಡು ಜಿಲ್ಲೆಯನ್ನು ಈ ಯೋಜನೆಯಿಂದ ಕೈಬಿಡಲಾಗಿತ್ತು.

ಮಂಗಳೂರಿನ ವರೆಗೆ ವಿಸ್ತರಿಸಲು ಯತ್ನ  
ಹೈಸ್ಪೀಡ್‌ ರೈಲ್ವೇ ಲೈನ್‌ ನಿರ್ಮಾಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯನ್ನು ಅವಗಣಿಸಲಾಗಿದೆ ಎಂಬುದಾಗಿ ವ್ಯಾಪಕ ಆಕ್ರೋಶ ಕೇಳಿಬಂದ ಹಿನ್ನೆಲೆಯಲ್ಲಿ ಮಂಗಳೂರಿನ ವರೆಗೆ ಹೈಸ್ಪೀಡ್‌ ರೈಲನ್ನು ವಿಸ್ತರಿಸುವ ಬಗ್ಗೆ ಧನಾತ್ಮಕ ಹೇಳಿಕೆಗಳು ಕೇಳಿ ಬಂದಿದ್ದವು.   ಡಿ.ಎಂ.ಆರ್‌.ಸಿ.ಯ ಮಾಜಿ  ಚೆಯರ್‌ಮನ್‌ ಇ. ಶ್ರೀಧರನ್‌ ಈ ಯೋಜನೆಯ ಹಿಂದಿರುವ ಸೂತ್ರಧಾರಿ.

ಎಡರಂಗ ಸರಕಾರ ಆಡಳಿತಕ್ಕೆ ಬಂದ‌ ಪ್ರಥಮ ವರ್ಷದ ಮುಂಗಡಪತ್ರದಲ್ಲೇ ಇದಕ್ಕಾಗಿ 50 ಲಕ್ಷ ರೂ. ಕಾದಿರಿಸಿತ್ತು. ತಿರುವನಂತಪುರ-ಕಣ್ಣೂರು ಹೈಸ್ಪೀಡ್‌ ರೈಲ್ವೇ ಲೈನ್‌ ಯೋಜನೆ ಎಂಬು ದಾಗಿ ಘೋಷಣೆಯಾಗುತ್ತಿದ್ದಂತೆ ಕಾಸರಗೋಡು ಜಿಲ್ಲೆಯನ್ನು ಈ ಯೋಜನೆಯಿಂದ ಕೈಬಿಟ್ಟಿರುವುದು ಬಹುತೇಕ ನಿಶ್ಚಿತವಾಗಿತ್ತು. ಇದರ ವಿರುದ್ಧ ಕೇಳಿ ಬಂದ ಪ್ರತಿಭಟನೆಯ ಕಾರಣಕ್ಕೆ ಮಂಗಳೂರಿನ ವರೆಗೆ ವಿಸ್ತರಿಸುವ ಬಗ್ಗೆ ಪರಿಗಣಿಸುವುದಾಗಿ ತಿಳಿಸಲಾಗಿತ್ತು. 2017ರ ಜನವರಿ ತಿಂಗಳಲ್ಲಿ  ಯೋಜನೆ ಯನ್ನು ಆರಂಭಿಸಲು ತೀರ್ಮಾ ನಿಸ ಲಾಗಿತ್ತು. ಆದರೆ ಈಗಾಗಲೇ ಜೂನ್‌ ತಿಂಗಳು ಕಳೆದು ಜುಲೈ ತಿಂಗಳು ನಡೆಯುತ್ತಿದೆ. ಆದರೆ ಈ ವರೆಗೂ ಕನಸಿನ ಯೋಜನೆಯ ಪ್ರಾಥಮಿಕ ಪ್ರಕ್ರಿಯೆ ಕೂಡ ಆರಂಭಗೊಂಡಿಲ್ಲ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬಂದರು, ಜಿಲ್ಲೆಯ ಸಾವಿರಾರು ಮಂದಿ ವಿದ್ಯಾರ್ಥಿಗಳು ಕಲಿಯುವ ಹಲವಾರು ಕಾಲೇಜುಗಳು, ಮೆಡಿಕಲ್‌ ಕಾಲೇಜುಗಳು, ತಜ್ಞ ಚಿಕಿತ್ಸಾ ಕೇಂದ್ರಗಳು ಸಹಿತ ಇರುವ ಮಂಗಳೂರಿಗೆ ಯೋಜನೆಯನ್ನು ವಿಸ್ತರಿಸಿದರೆ ನಿಶ್ಚಿತ ಹೈಸ್ಪೀಡ್‌ ರೈಲ್ವೇ ಲೈನ್‌ನಿಂದ ಬಹಳಷ್ಟು ಲಾಭವಿದೆ ಎಂಬುದು ಸ್ಥಳೀಯರ ಅಂಬೋಣ.

ತಿರುವನಂತಪುರ-ಕಣ್ಣೂರು 430 ಕಿ.ಮೀ. ದೂರ 
ತಿರುವನಂತಪುರ ಮತ್ತು ಕಣ್ಣೂರು ಈ ಎರಡು ನಗರಗಳ ನಡುವಣ 430 ಕಿ.ಮೀ. ದೂರದ ಹೈಸ್ಪೀಡ್‌ ರೈಲ್ವೇ ಕಾರಿಡಾರ್‌ ಯೋಜನೆಯ ಕುರಿತಂತೆ ಅಧ್ಯಯನವನ್ನು ಈಗಾಗಲೇ ಪೂರ್ತಿಗೊಳಿಸಿದ್ದು, ಈ ಕಾರಿಡಾರ್‌ ನಡುವೆ 9 ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಕೊಚ್ಚಿ ಮತ್ತು ಕಲ್ಲಿಕೋಟೆಯಲ್ಲಿ ಬೃಹತ್‌ ನಿಲ್ದಾಣಗಳು ನಿರ್ಮಾಣವಾಗಲಿವೆೆ. ತಿರುವನಂತಪುರ, ಕೊಲ್ಲಂ, ಚೆಂಗನ್ನೂರು, ಕೋಟ್ಟಯಂ, ತೃಶ್ಶೂರು, ವಲಂಶೆÏàರಿ, ಕಣ್ಣೂರುನಲ್ಲಿ ಇತರ ನಿಲ್ದಾಣಗಳು ನಿರ್ಮಾಣವಾಗಲಿವೆೆ. ನೆಡುಂಬಶೆÏàರಿಯಲ್ಲಿ ಇನ್ನೊಂದು ಹೆಚ್ಚುವರಿ ನಿಲ್ದಾಣವನ್ನು ನಿರ್ಮಿಸುವ ಪ್ರಸ್ತಾವವೂ ಇದೆ.

ತಾಸಿಗೆ 250 ಕಿ.ಮೀ. ವೇಗ
ಈ ಕಾರಿಡಾರ್‌ನಲ್ಲಿ ರೈಲುಗಳು ತಾಸಿಗೆ ಗರಿಷ್ಠ 300 ಕಿ.ಮೀ. ಮತ್ತು ಸರಾಸರಿ 250 ಕಿ.ಮೀ. ವೇಗದಲ್ಲಿ ಚಲಿಸಲಿವೆ. ಸದ್ಯಕ್ಕೆ ತಿರುವನಂತಪುರದಿಂದ ಕಣ್ಣೂರಿಗೆ ಇತರ ರೈಲು ಗಾಡಿಗಳಲ್ಲಿ ಕ್ರಮಿಸಲು 12 ತಾಸುಗಳ ಅಗತ್ಯವಿದೆ.

– ಪ್ರದೀಪ್‌ ಬೇಕಲ್‌

Advertisement

Udayavani is now on Telegram. Click here to join our channel and stay updated with the latest news.

Next