ಅಗರ್ತಲಾ: ತ್ರಿಪುರದ ಮಹಿಳೆಯೊಬ್ಬಳು ತನ್ನ ಗಂಡನನ್ನು ಕೊಂದು, ಶವವನ್ನು ಅವರ ಮಲಗುವ ಕೋಣೆಯಲ್ಲಿ ಸಮಾಧಿ ಮಾಡಿ ಪೊಲೀಸರಿಗೆ ಶರಣಾದ ಘಟನೆ ನಡೆದಿದೆ.
ಸಂಜಿತ್ ರಿಯಾಂಗ್ (30) ಹತ್ಯೆಯಾದ ವ್ಯಕ್ತಿ. ಇದೀಗ ಶವವನ್ನು ಪೊಲೀಸರು ಪೋಸ್ಟ್ ಮಾರ್ಟಂಗೆ ರವಾನಿಸಿದ್ದಾರೆ.
ಆರೋಪಿ ಭಾರತಿ ರೇಂಗ್ (25) ಗುರುವಾರ ಮಧ್ಯಾಹ್ನ ತನ್ನ ಪತಿಯನ್ನು ಹತ್ಯೆಗೈದು ಬೆಡ್ ರೂಂ ನಲ್ಲಿ ಸಮಾಧಿ ಮಾಡಿ ಬಳಿಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾಳೆ.
ಪೊಲೀಸರ ಪ್ರಾಥಮಿಕ ತನಿಖೆಯಿಂದ ಮೃತಪಟ್ಟ ವ್ಯಕ್ತಿಯ ತಲೆಗೆ ಭಾರವಾದ ವಸ್ತುವಿನಿಂದ ಹೊಡೆಯಲಾಗಿದೆ ಎಂದು ತಿಳಿದುಬಂದಿದ್ದು ಶವಪರೀಕ್ಷೆ ವರದಿ ಇನ್ನಷ್ಟೆ ಬರಬೇಕಾಗಿದೆ.
ರಾಜ್ಯ ರಾಜಧಾನಿ ಅಗರ್ತಲಾದ ಪೂರ್ವಕ್ಕೆ 200 ಕಿ.ಮೀ ದೂರದಲ್ಲಿರುವ ಧಲೈ ಜಿಲ್ಲೆಯ ಗಂಡಚೆರಾ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಅದಾಗ್ಯೂ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲವಾಗಿದ್ದು ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ದಂಪತಿಗೆ ಆರು ವರ್ಷದ ಮಗಳು ಕೂಡ ಇದ್ದು, ಈ ಘಟನೆ ಪ್ರದೇಶದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.