ತ್ರಿಪುರಾ: ತ್ರಿಪುರಾದಲ್ಲಿ ಮಾಣಿಕ್ ಸರ್ಕಾರ್ ನೇತೃತ್ವದ 25 ವರ್ಷಗಳ ಕಮ್ಯೂನಿಷ್ಟ್ ಪಕ್ಷದ ಆಡಳಿತ ಅಂತ್ಯಗೊಂಡು ಭಾರತೀಯ ಜನತಾ ಪಕ್ಷ ಮೊತ್ತ ಮೊದಲ ಬಾರಿಗೆ ಅಧಿಕಾರದ ಗದ್ದುಗೆಗೆ ಏರಿದೆ. ಏತನ್ಮಧ್ಯೆ ಬಿಜೆಪಿ ಕಾರ್ಯಕರ್ತರು ವ್ಲಾಡಿಮಿರ್ ಲೆನಿನ್ ಪ್ರತಿಮೆಯನ್ನು ಒಡೆದು ಹಾಕಿರುವ ಘಟನೆ ನಡೆದಿದೆ. ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದ ಪ್ರದೇಶಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ಎಎನ್ ಐ ವರದಿ ಮಾಡಿದೆ.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದು, ಈ ಸಂದರ್ಭದಲ್ಲಿ ಬೆಲೋನಿಯ ಸರ್ಕಾರಿ ಕಾಲೇಜು ಸಮೀಪ ಇದ್ದ ಲೆನಿನ್ ಪ್ರತಿಮೆಯನ್ನು ಬುಲ್ಡೋಜರ್ ನಿಂದ ಧ್ವಂಸಗೊಳಿಸಿರುವುದಾಗಿ ವರದಿ ವಿವರಿಸಿದೆ.
ಹಿಂಸಾಚಾರವನ್ನು ಖಂಡಿಸುವುದಾಗಿ ಹೇಳಿರುವ ಸಿಪಿಐನ ಹಿರಿಯ ಮುಖಂಡ ಡಿ.ರಾಜಾ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಕೃತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಹಲವು ಪಕ್ಷಗಳಿವೆ. ಕೆಲವು ಪಕ್ಷಗಳು ಜಯ ಸಾಧಿಸುತ್ತವೆ, ಕೆಲವು ಸೋಲುತ್ತವೆ. ಹಾಗಂತ ಹಿಂಸಾಚಾರ ನಡೆಸುವುದು ಅಥವಾ ಲೆನಿನ್ ಪ್ರತಿಮೆಯನ್ನು ಧ್ವಂಸಗೊಳಿಸುವುದಲ್ಲ ಎಂದು ರಾಜಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ತ್ರಿಪುರಾದಲ್ಲಿನ ಹಿಂಸಾಚಾರಕ್ಕೆ ಭಾರತೀಯ ಜನತಾ ಪಕ್ಷ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘವೇ ಕಾರಣ ಎಂದು ಸಿಪಿಐಎಂನ ಸೀತಾರಾಮ್ ಯೆಚೂರಿ ಆರೋಪಿಸಿದ್ದಾರೆ.