Advertisement

ರಿಸಾ, ರಿಗ್ನೈ, ರಿಕುಟು

01:19 AM Sep 06, 2019 | mahesh |

ತ್ರಿಪುರಾ ರಾಜ್ಯವು ಪರ್ವತಗಳಿಂದ ಆವೃತವಾದ ಸುಂದರ ರಾಜ್ಯ. ಈ ರಾಜ್ಯದ ಸಾಂಪ್ರದಾಯಿಕ ತೊಡುಗೆಯ ವೈಶಿಷ್ಟ್ಯವೆಂದರೆ ಈ ರಾಜ್ಯದಲ್ಲಿರುವ ಹಲವು ಬುಡಕಟ್ಟು ಜನಾಂಗಗಳ ತಮ್ಮದೇ ಆದ ವೈಶಿಷ್ಟ್ಯಮಯ ವಸ್ತ್ರಾಲಂಕಾರದ ಛಾಪು!

Advertisement

ಖಾಕ್ಲೂ ಮಹಿಳೆಯರ ಉಡುಗೆ
ಪರ್ವತ ರಾಜ್ಯವಾದ ತ್ರಿಪುರಾದಲ್ಲಿ ಆರಾಮದಾಯಿಕವಾಗಿ ತೊಡುವಂತೆ ಖಾಕ್ಲೂ ಜನಾಂಗದ ಮಹಿಳೆಯರ ವಸ್ತ್ರವನ್ನು ವಿನ್ಯಾಸಮಾಡಲಾಗಿದೆ.

ಮುಖ್ಯವಾಗಿ ರಿಸಾ, ರಿಗ್ನೈ ಹಾಗೂ ರಿಕುಟು ಎಂಬ ಸಾಂಪ್ರದಾಯಿಕ ಉಡುಗೆ ತ್ರಿಪುರಾದಲ್ಲಿ ಸಾಂಪ್ರದಾಯಿಕ ಮಹತ್ವ ಪಡೆದಿದೆ.
“ರಿಗ್ನೆ„’ ದಿರಿಸು ಸ್ಕರ್ಟ್‌ನಂತಹ ತೊಡುಗೆ. ಇದನ್ನು ಸೊಂಟದಿಂದ ಪಾದಗಳವರೆಗೆ ಉದ್ದವಾಗಿ ತೊಡಲಾಗುತ್ತದೆ. ವಿವಿಧ ಬುಡಕಟ್ಟು ಜನಾಂಗದ ಶೈಲಿ ಹಾಗೂ ವಿನ್ಯಾಸ ಬಗೆಬಗೆಯಾಗಿದ್ದರೂ ರಿಗ್ನೆ„ ದಿರಿಸು ಮೂಲಭೂತ ಸಾಂಪ್ರದಾಯಿಕ ಉಡುಗೆಯಾಗಿದೆ.

“ರಿಸು’ ಬಗೆಯ ಉಡುಗೆಯು “ರಿಗ್ನೆ„’ ಸ್ಕರ್ಟ್‌ನಂತಹ ತೊಡುಗೆಯ ಮೇಲೆ ಧರಿಸುವ ಮೇಲ್‌ವಸ್ತ್ರವಾಗಿದೆ. ಅಡ್ಡಗೆರೆ ಹಾಗೂ ಉದ್ದದ ಗೆರೆಗಳಿಂದ ಅಂದರೆ (ಸ್ಟ್ರೈಪ್ಸ್‌)ಗಳಿಂದ ವಿನ್ಯಾಸ ಮಾಡಲಾಗುವ ಈ ತೊಡುಗೆ ಮದುವೆ, ಸಭೆ-ಸಮಾರಂಭಗಳಲ್ಲಿಯೂ ಮಹತ್ವ ಪಡೆದಿದೆ. ವಧುವಿಗೆ ಅಲಂಕೃತವಾದ ವೈಭವಯುತ “ರಿಸಾ’ದಿಂದ ಶೃಂಗಾರಗೊಳಿಸಲಾಗುತ್ತದೆ.

ಈ ಸಾಂಪ್ರದಾಯಿಕ ತೊಡುಗೆಯ ಚರಿತ್ರೆಯೂ ದಿರಿಸಿನಂತೆ ವರ್ಣರಂಜಿತವಾಗಿದೆ. ತ್ರಿಪುರಾದ ಪ್ರಸಿದ್ಧ ರಾಜಮನೆತನವಾದ “ಸುಬ್ರೈ ರಾಜಾ’ ದೊರೆಯ ಆಡಳಿತ ಕಾಲದಲ್ಲಿ ರಿಸಾ ತೊಡುಗೆಯು ವೈವಿಧ್ಯಮಯ ವಿನ್ಯಾಸಗಳಿಂದ ಶ್ರೀಮಂತ ತೊಡುಗೆಯಾಗಿ ಮಹತ್ವ ಪಡೆಯಿತು. ಆದರೆ ರಾಜ್ಯಾಡಳಿತದ ತದನಂತರದ ಕಾಲದಲ್ಲಿ ವಿನ್ಯಾಸಗಳು ಬದಲಾಗುತ್ತ ಇಂದಿನ ಆಧುನಿಕ ಕಾಲದ ವಿನ್ಯಾಸಗಳೊಂದಿಗೆ ಮಹತ್ವಪೂರ್ಣ ಬದಲಾವಣೆಗಳನ್ನು ಮೇಳೈಸಿಕೊಂಡಿದೆ.

Advertisement

“ರಿಸಾ’ ತೊಡುಗೆಯ ಮೇಲೆ ಅಂದದ ಬುಡಕಟ್ಟು ಜನಾಂಗಕ್ಕೆ ವಿಶಿಷ್ಟವಾಗಿರುವಂತಹ ಆಭರಣಗಳನ್ನು ಧರಿಸಲಾಗುತ್ತದೆ. ಇಂದು ತ್ರಿಪುರಾದ “ರಿಸಾ’ ದಿರಿಸಿಗೆ ಭಾರತದಲ್ಲಿ ಮಾತ್ರವಲ್ಲ, ವಿಶ್ವಾದ್ಯಂತ ಬೇಡಿಕೆ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗೂ ರಫ್ತಾಗುವ “ರಿಸಾ’ ದಿರಿಸು ತನ್ನ ವಿಶಿಷ್ಟತೆಯಿಂದಲೇ ಜನಪ್ರಿಯವಾಗಿದೆ. ಈ ದಿರಿಸಿನ ಮೇಲೆ ಬೇರೆ ಬೇರೆ ಬಗೆಯ ಕಸೂತಿಯ ವಿನ್ಯಾಸಗಳನ್ನು ಹೆಣೆಯಲಾಗುತ್ತಿದೆ. ಈ ಕಸೂತಿ ವಿನ್ಯಾಸಗಳಿಗೂ ವಿಶೇಷ ಹೆಸರುಗಳಿವೆ. ಉದಾ: ಕ್ವಚಕ್‌ ಪಾಲಿ, ಕೊಸೊಮ್‌ ಪಾಲಿ, ಟಿಕುಮ್‌ಟ್ಟಿ ಹಾಗೂ ಖಮ್‌ಜಂಗ್‌ ಇವೇ ಮೊದಲಾದ ತ್ರಿಪುರಾದ ವಿಶೇಷ ಕಸೂತಿ ವಿನ್ಯಾಸಗಳು ಜನಪ್ರಿಯವಾಗಿವೆ.

ತ್ರಿಪುರಾದಲ್ಲಿ ರಿಗ್ನೆ„ ಹಾಗೂ ರಿಸಾ ಬಟ್ಟೆಯ ನೇಯ್ಗೆಯ ಗೃಹೋದ್ಯಮವು ಖ್ಯಾತಿ ಪಡೆದಿದ್ದು, ತ್ರಿಪುರಾದ ಮಹಿಳೆಯರಿಗೂ ಪುರುಷರಿಗೂ ಈ ವಸ್ತ್ರೋದ್ಯಮವೇ ಉತ್ತಮ ಜೀವನೋಪಾಯದ ಮಾಧ್ಯಮವೂ ಆಗಿದೆ.

ಕಕ್ಲೂ ಬುಡಕಟ್ಟು ಜನಾಂಗದ ಮಹಿಳೆಯರು ತೊಡುವ ರಿಗ್ನೆ„ ದಿರಿಸಿನ ಉದ್ದ ಕಡಿಮೆ ಇದ್ದು, ಜಾನುಸಂಧಿಯ ಭಾಗದವರೆಗೆ ಅಲಂಕೃತವಾಗಿ ಉಡಲ್ಪಡುತ್ತದೆ. ರಿಸಾ ಮೇಲ್‌ವಸ್ತ್ರಕ್ಕೆ ಅದರದೇ ಶೈಲಿಯ ಕಸೂತಿಯ ಅಲಂಕಾರವಿದ್ದು, ಈ ಮಹಿಳೆಯರು ಕೆಲಸದ ಸಮಯದಲ್ಲಿ ತಲೆಯ ಭಾಗವನ್ನು ಗಾಳಿಚಳಿಯಿಂದ ರಕ್ಷಿಸಲು ಅಲಂಕೃತ ಬಟ್ಟೆಯಿಂದ ಸುತ್ತಿಕೊಳ್ಳುತ್ತಾರೆ.

ಲುಶೈ ಬುಡಕಟ್ಟು ಜನಾಂಗದ ರಿಗ್ನೆ„ ತೊಡುಗೆಯು ಸರ್ವೇಸಾಮಾನ್ಯ ಗಾಢರಂಗಿನಿಂದ ಕೂಡಿರುತ್ತದೆ. ಗಾಢ ನೀಲಿ ಬಣ್ಣದ ದಿರಿಸು ಸಾಂಪ್ರದಾಯಿಕವಾಗಿ ಇಂದಿಗೂ ಮಹತ್ವಪೂರ್ಣವೆನಿಸುತ್ತದೆ. ಈ ಬಟ್ಟೆಯನ್ನು ಸೊಂಟದ ಸುತ್ತ ಸುತ್ತಲು ದಾರದಂತೆ ಬಳಸಲು ಹಿತ್ತಾಳೆಯ ತೆಳುವಾದ ಸರಿಗೆಗಳನ್ನು ಬಳಸುವುದು ವಿಶೇಷ.

ಬುಡಕಟ್ಟು ಜನಾಂಗದಲ್ಲಿಯೂ ಸಿರಿವಂತ ಮಹಿಳೆಯರು ಈ ದಿರಿಸುಗಳಲ್ಲಿಯೇ ಆಕರ್ಷಕ ಶೈಲಿಯನ್ನು ಹೊಂದಿರುವ ಥನ್‌ಗಂಗ್‌, ಖಮ್‌ಟಂಗ್‌, ಸೈಪಿಕುಪ್‌ ಎಂಬ ವಿಶೇಷ ತೊಡುಗೆಗಳನ್ನು ಧರಿಸುತ್ತಾರೆ.

ಆಧುನಿಕ ಕಾಲದಲ್ಲಿ ರಿಗ್ನೆ„ ಜೊತೆಗೆ ಮೇಲ್‌ವಸ್ತ್ರವಾಗಿ “ರಿಸಾ’ ತೊಡುಗೆ ಧರಿಸುವ ಬದಲಾಗಿ ಟೀಶರ್ಟ್‌ ಅಥವಾ ಕುಪ್ಪಸ ಹಾಗೂ ಸೀರೆಯ ವಿನ್ಯಾಸದ ಶಾಲಿನಂತಹ ಹೊದಿಕೆ ತೊಡುವುದೂ ಜನಪ್ರಿಯವಾಗುತ್ತಿದೆ.

ಇಂದು ತ್ರಿಪುರಾ ಸರಕಾರವು ಈ ಸಾಂಪ್ರದಾಯಿಕ ಉಡುಗೆಯ ಪುರಾತನ ವಿನ್ಯಾಸಗಳನ್ನು ಉಳಿಸಿ ಬೆಳೆಸಲು ಬಹುಮುಖಿ ಪ್ರಯತ್ನವನ್ನು ಮಾಡುತ್ತಿದೆ. ತ್ರಿಪುರಾದ ಸಾಂಪ್ರದಾಯಿಕ ಉಡುಗೆಯ ಸಾಂಸ್ಕೃತಿಕ ಮಹತ್ವದೊಂದಿಗೆ, ಈ ದಿರಿಸುಗಳ ಉದ್ಯಮವು, ಹಣಕಾಸು ಹಾಗೂ ವಾಣಿಜ್ಯ ಕ್ಷೇತ್ರದ ಮೇಲೆ ತನ್ನದೇ ಆದ ಛಾಪು ಹೊಂದಿರುವುದು ಈ ಪುಟ್ಟ ನಾಡಿನ ಮಹೋನ್ನತೆಯೇ ಎನ್ನಬಹುದು!

ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next