Advertisement

ರಾಜ್ಯದಲ್ಲಿ ತ್ರಿಪುರಾ ಮಾದರಿ ತಂತ್ರ

06:00 AM Mar 05, 2018 | |

ಬೆಂಗಳೂರು: ಇತ್ತೀಚೆಗೆ ವಿವಿಧ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಕಾರಣವಾದ ಕಾರ್ಯತಂತ್ರಗಳನ್ನು ಕ್ರೋಢೀಕರಿಸಿ ರಾಜ್ಯದಲ್ಲಿ ತಂತ್ರಗಾರಿಕೆ ರೂಪಿಸಲು ಬಿಜೆಪಿ ತೀರ್ಮಾನಿಸಿದೆ.

Advertisement

ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಶೂನ್ಯದಿಂದ ಅಧಿಕಾರಕ್ಕೆ ಬರುವ ಮುನ್ನ ತನ್ನ ಒಂಬತ್ತು ಕಾರ್ಯಕರ್ತರನ್ನು ಕಳೆದುಕೊಂಡಿತ್ತು. ಈ ಅಂಶದ ಜತೆಗೆ ಅಭಿವೃದ್ಧಿಯ ಸೂತ್ರವನ್ನು ಮುಂದಿಟ್ಟುಕೊಂಡು ಬಿಜೆಪಿ ಅಲ್ಲಿ ಅಧಿಕಾರಕ್ಕೆ ಬರುವಂತಾಗಿದೆ. ಅದೇರೀತಿ ರಾಜ್ಯದಲ್ಲಿ 24 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದ್ದು, ತ್ರಿಪುರಾ ಮಾದರಿಯಲ್ಲೇ ರಾಜ್ಯದಲ್ಲಿ ಇದನ್ನು ಪ್ರಸ್ತಾಪಿಸಿ ಹಿಂದೂ ಮತಗಳನ್ನು ಸೆಳೆಯಲು ತಂತ್ರಗಾರಿಕೆ ಸಿದ್ಧಪಡಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.

ಜತೆಗೆ ಇತರೆ ರಾಜ್ಯಗಳ ಕಾರ್ಯತಂತ್ರಗಳನ್ನು ಕರ್ನಾಟಕಕ್ಕೆ ಅನುಕೂಲವಾಗುವಂತೆ ಯಾವ ರೀತಿ ಮಾರ್ಪಾಡುಗಳೊಂದಿಗೆ ಸಿದ್ಧಪಡಿಸಬೇಕು ಎಂಬ ವಿಚಾರವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ಅವರ ತಂಡಕ್ಕೆ ಬಿಟ್ಟುಬಿಡಲು ಭಾನುವಾರ ನಡೆದ ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಯಿತು.

ಇದಕ್ಕೆ ಪೂರಕ ಎಂಬಂತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ತ್ರಿಪುರಾ, ನಾಗಾಲ್ಯಾಂಡ್‌, ಮೇಘಾಲಯಗಳಲ್ಲಿ ಬಿಜೆಪಿ ಅಭೂತಪೂರ್ವ ವಿಜಯ ಸಾಧಿಸಿದೆ. ಅದರಲ್ಲೂ ತ್ರಿಪುರಾದಲ್ಲಿ ಒಂಬತ್ತು ಬಿಜೆಪಿ ಕಾರ್ಯಕರ್ತರ ಬಲಿದಾನಕ್ಕೆ ಅಲ್ಲಿನ ಜನತೆ ತಕ್ಕ ಉತ್ತರ ಕೊಟ್ಟಿದ್ದಾರೆ. ಕರ್ನಾಟಕದಲ್ಲೂ 24 ಬಿಜೆಪಿ, ಆರ್‌ಎಸ್‌ಎಸ್‌ ಸೇರಿದಂತೆ ಹಿಂದೂ ಕಾರ್ಯಕರ್ತರ ಬಲಿದಾನವಾಗಿದ್ದು, ರಾಜ್ಯದಲ್ಲೂ ಜನತೆ ಮುಂಬರುವ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದ್ದಾರೆ.

ಇದಲ್ಲದೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು 150ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವ ಗುರಿಯನ್ನು ರಾಜ್ಯ ಬಿಜೆಪಿಗೆ ನೀಡಿದ್ದಾರೆ. ಆ ಗುರಿ ಸಾಧಿಸಲು ಏನೆಲ್ಲಾ ಕಾರ್ಯಕ್ರಮ ರೂಪಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

Advertisement

ಸರ್ಕಾರದ ವಿರುದ್ಧ ಮತ್ತೂಂದು ಆರೋಪಪಟ್ಟಿ: ಇತ್ತೀಚೆಗೆ ತಾನೇ ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ರಾಜ್ಯದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆರೋಪಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ, ಸರ್ಕಾರದ ವಿರುದ್ಧ ಮತ್ತೂಂದು ಆರೋಪ ಪಟ್ಟಿ ಬಿಡುಗಡೆ ಮಾಡಲು ಮುಂದಾಗಿದ್ದು, ಈ ಬಗ್ಗೆ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚಿಸಲಾಗಿದೆ. ಶೀಘ್ರದಲ್ಲೇ ಇದಕ್ಕೆ ದಿನಾಂಕ ನಿಗದಿಯಾಗಲಿದ್ದು, ಈ ಬಾರಿ ಆರೋಪಪಟ್ಟಿ ಜತೆಗೆ ಪ್ರಮುಖ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನೂ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ರಾಜ್ಯಸಭೆ ಅಭ್ಯರ್ಥಿ ಆಯ್ಕೆ ಶಾ ಹೆಗಲಿಗೆ
ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಜವಾಬ್ದಾರಿಯನ್ನು ಅಮಿತ್‌ ಶಾ ಅವರಿಗೆ ವಹಿಸಲು ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸ್ವಂತ ಬಲದಿಂದ ಒಬ್ಬ ಅಭ್ಯರ್ಥಿಯನ್ನು ಮಾತ್ರ ಕಣಕ್ಕಿಳಿಸಲು ಸಾಧ್ಯವಿರುವ ಕಾರಣ ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬ ಗೊಂದಲದಲ್ಲಿ ರಾಜ್ಯ ಮುಖಂಡರು ಸಿಲುಕಿದ್ದಾರೆ. ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿರುವ ಹಾಲಿ ರಾಜ್ಯಸಭೆ ಸದಸ್ಯ ರಾಜೀವ್‌ ಚಂದ್ರಶೇಖರ್‌ ಜತೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್‌ ಕೂಡ ಆಕಾಂಕ್ಷಿಯಾಗಿದ್ದಾರೆ. 

ಇನ್ನೊಂದೆಡೆ ವೀರಶೈವ ಲಿಂಗಾಯತರನ್ನು ಓಲೈಸಲು ಉದ್ಯಮಿ ವಿಜಯ ಸಂಕೇಶ್ವರ ಮತ್ತು ಒಕ್ಕಲಿರಗನ್ನು ಓಲೈಸಲು ಎಸ್‌.ಎಂ.ಕೃಷ್ಣಾ ಅವರನ್ನು ರಾಜ್ಯಸಭೆಗೆ ಕಳುಹಿಸಿಕೊಡಬೇಕು ಎಂಬ ಬೇಡಿಕೆ ಇದೆ.

ಈ ಹಿನ್ನೆಲೆಯಲ್ಲಿ ಕೋರ್‌ ಕಮಿಟಿ ಸಭೆಯಲ್ಲಿ ಯಾರ ಹೆಸರನ್ನೂ ಪ್ರಸ್ತಾಪಿಸದೆ ಮುಂಬರುವ ವಿಧಾನಸಭೆ ಚುನಾವಣೆ ಮತ್ತು ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಸಮಾಲೋಚಿಸಿ ಅಭ್ಯರ್ಥಿ ಆಯ್ಕೆ ಜವಾಬ್ದಾರಿಯನ್ನು ಅಮಿತ್‌ ಶಾ ಅವರಿಗೇ ಬಿಡಲು ತೀರ್ಮಾನಿಸಲಾಯಿತು ಎಂದು ತಿಳಿದುಬಂದಿದೆ.

ಈ ಕುರಿತಂತೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ರಾಜ್ಯಸಭೆ ಅಭ್ಯರ್ಥಿಯಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಸಭೆಯಲ್ಲಿ ಯಾರ ಹೆಸರನ್ನೂ ಪ್ರಸ್ತಾಪಿಸಿಲ್ಲ. ಅಮಿತ್‌ ಶಾ ಅವರು ರಾಜ್ಯಕ್ಕೆ ಆಗಮಿಸುವ ವೇಳೆ ಅವರೊಂದಿಗೆ ಚರ್ಚಿಸಿ ಅಭ್ಯರ್ಥಿ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಪ್ರತಿಕ್ರಿಯಿಸಿ, ಈಗಾಗಲೇ ಈ ಕುರಿತು ಚರ್ಚೆಗಳು ನಡೆಯುತ್ತಿವೆ. ಅಮಿತ್‌ ಶಾ ಅವರು ಬೆಂಗಳೂರಿಗೆ ಬಂದ ಮೇಲೆ ಸಭೆ ನಡೆಸಿ ಆದಷ್ಟು ಬೇಗ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next