Advertisement

ಸುಂದರಿಯ ಮರ್ಡರ್‌ ಮಿಸ್ಟರಿ

11:43 PM Aug 22, 2019 | mahesh |

ಹೆಣ್ಣು ಮಕ್ಕಳ ಸೌಂದರ್ಯವನ್ನು ವರ್ಣಿಸುವಾಗ ತ್ರಿಪುರ ಸುಂದರಿ ಎನ್ನುವ ವಿಶೇಷಣವನ್ನು ಬಳಸುವುದನ್ನು ನೀವು ನೋಡಿರಬಹುದು. ಈಗ ಅದೇ ತ್ರಿಪುರ ಸುಂದರಿಯ ಬಗ್ಗೆ ಕನ್ನಡದಲ್ಲಿ ಚಿತ್ರವೊಂದು ತಯಾರಾಗುತ್ತಿದೆ.

Advertisement

ಅಂದಹಾಗೆ, ಈ ಚಿತ್ರಕ್ಕೆ “ತ್ರಿಪುರ’ ಎಂದು ಹೆಸರಿಡಲಾಗಿದ್ದು, ಸಸ್ಪೆನ್ಸ್‌ ಕಂ ಮರ್ಡರ್‌ ಮಿಸ್ಟರಿ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಕೆ. ಶಂಕರ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ “ತ್ರಿಪುರ’ ಚಿತ್ರದ ಹಾಡುಗಳು ಮತ್ತು ಟ್ರೇಲರ್‌ ಗಳು ಹೊರಬಂದಿವೆ. ಇದೇ ವೇಳೆ “ತ್ರಿಪುರ’ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಕೆ. ಶಂಕರ್‌, “ಇದೊಂದು ಕಾಲ್ಪನಿಕ ಕಥೆ. ಸರಿ ಸುಮಾರು 500 ವರ್ಷಗಳ ಹಿಂದೆ ಎರಡು ಸಾಮ್ರಾಜ್ಯದ ರಾಜರು ತ್ರಿಪುರ ಸುಂದರಿಗಾಗಿ ಯುದ್ದವನ್ನು ನಡೆಸಿ, ಒಬ್ಬ ಸಾಮ್ರಾಜ್ಯ ಕಳೆದುಕೊಂಡ ಕಥೆಯೇ ಚಿತ್ರದ ತಿರುಳು. ಆ ತಿರುಳನ್ನು ಇಟ್ಟುಕೊಂಡು ಈಗಿನ ಕಾಲ ಘಟ್ಟಕ್ಕೆ ಹೊಂದುವಂತೆ
ಸಿನಿಮಾ ಮಾಡಲಾಗಿದೆ. ಇದರಲ್ಲಿ ಒಂದು ಮರ್ಡರ್‌ ಮಿಸ್ಟರಿ ಕೂಡ ಇದೆ.

ಚಿತ್ರದಲ್ಲಿ ನಟಿ ಅಶ್ವಿ‌ನಿ ಗೌಡ ಸಾಮ್ರಾಜ್ಯ ಕಳೆದುಕೊಂಡ ರಾಜ ಮನೆತದ ಹೆಣ್ಣಾಗಿ ಜೊತೆಗೆ, ಪೊಲೀಸ್‌ ಅಧಿಕಾರಿಯಾಗಿ ಎರಡು ಶೇಡ್‌ನ‌ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಸಾಕಷ್ಟು ಕುತೂಹಲದಿಂದ ಕೂಡಿದೆ’ ಎಂಬ ವಿವರಣೆ ನೀಡಿದರು. “ತ್ರಿಪುರ’ ಚಿತ್ರವನ್ನು ಸುಮಾರು 45 ದಿನಗಳ ಕಾಲ ಮಂಗಳೂರು, ನಂದಿಬೆಟ್ಟ ಮತ್ತು ಕಾವೇರಿ ನದಿ
ತೀರದ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ.

ಚಿತ್ರದಲ್ಲಿ ಕೇವಲ ಒಂದೇ ಹಾಡಿದ್ದು, ಅದು ಕುತೂಹಲಕಾರಿಯಾಗಿ ಚಿತ್ರವನ್ನು ಕಟ್ಟಿ ಕೊಡುತ್ತದೆಯಂತೆ. ಈ ಹಿಂದೆ “ಮಿಠಾಯಿ ಮನೆ’, “ಮಿಂಚುಹುಳು’ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದ ಹುಲ್ಲೂರು ಮಂಜುನಾಥ್‌ “ತ್ರಿಪುರ’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ.
“ನಿರ್ದೇಶಕರು ಹೇಳಿದ ಕಥೆ ಕೇಳಿ ಇಷ್ಟವಾಯಿತು. ಬಳಿಕ ಇದನ್ನು ನಿರ್ಮಿಸುವ ನಿರ್ಧಾರಕ್ಕೆ ಬಂದೆ. ಒಂದು ನಿಧಿಯ ಸುತ್ತ ಸಾಗುವ ಕಥೆ ಕೊನೆಗೆ ಎಲ್ಲಿಗೆ ಕರೆದುಕೊಂಡು ಹೋಗುತ್ತದೆ ಅನ್ನೋದೆ ಚಿತ್ರದ ಕ್ಲೈಮ್ಯಾಕ್ಸ್‌. ಚಿತ್ರ ಎಲ್ಲರಿಗೂ ಇಷ್ಟವಾಗುವುದೆಂಬ ನಂಬಿಕೆ ಇದೆ’ ಎನ್ನುತ್ತಾರೆ ನಿರ್ಮಾಪಕ ಹುಲ್ಲೂರು ಮಂಜುನಾಥ್‌.

“ತ್ರಿಪುರ’ ಚಿತ್ರದಲ್ಲಿ ಹಿರಿಯ ಕಲಾವಿದ ಡಿಂಗ್ರಿ ನಾಗರಾಜ್‌
ಕ್ಯಾಂಟೀನ್‌ ನಡೆಸುವವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡುವ ಡಿಂಗ್ರಿ ನಾಗರಾಜ್‌, “ಖಾಲಿ ಕೂತಿದ್ದ ನನಗೆ ಈ ಚಿತ್ರದಲ್ಲಿ ನಟಿಸುವ ಅವಕಾಶ ಹುಡುಕಿಕೊಂಡು ಬಂತು. ಪಾತ್ರ ಕೇಳಿದ ಕೂಡಲೆ ಖುಷಿಯಿಂದ ಒಪ್ಪಿಕೊಂಡೆ. ಎಲ್ಲರೂ ಸೇರಿ ನೀಟಾಗಿ ಸಿನಿಮಾ ಮಾಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಉಳಿದಂತೆ ಹಿರಿಯ ಕಲಾವಿದ ಮೈಸೂರು ರಮಾನಂದ್‌, ಶ್ರೀಧರ್‌, ಧರ್ಮ, ಟೆನ್ನಿಸ್‌ ಕೃಷ್ಣ, ಥ್ರಿಲ್ಲರ್‌ ವೆಂಕಟೇಶ್‌ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿರುವ ಏಕೈಕ ಹಾಡಿಗೆ ಬಿ. ಅರ್‌ ಹೇಮಂತ್‌ ಕುಮಾರ್‌ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಗೌರಿ ವೆಂಕಟೇಶ್‌ ಛಾಯಾಗ್ರಹಣ, ರಾಜಶೇಖರ್‌ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಹರಿಕೃಷ್ಣ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ. “ಅಂಕುರ ಕ್ರಿಯೇಷನ್‌’ ಲಾಂಚನದಡಿ ಚಿತ್ರ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next