ಅಗರ್ತಾಲಾ: ತ್ರಿಪುರಾ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ಅವರ ಹತ್ಯೆಗೆ ಯತ್ನಿಸಿದ ಆರೋಪದಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ (ಆಗಸ್ಟ್ 07) ತಿಳಿಸಿದ್ದಾರೆ.
ಇದನ್ನೂ ಓದಿ:ಬದಲಾವಣೆ ತರುವ ನಿಟ್ಟಿನಲ್ಲಿ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ: ಸಿಎಂ ಬೊಮ್ಮಾಯಿ
ಶ್ಯಾಮ್ ಪ್ರಸಾದ್ ಮುಖರ್ಜಿ ಲೇನ್ ನಲ್ಲಿರುವ ತಮ್ಮ ನಿವಾಸದ ಸಮೀಪ ಸಂಜೆ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ಗುರುವಾರ(ಆಗಸ್ಟ್ 05) ವಾಕಿಂಗ್ ನಲ್ಲಿದ್ದ ಸಂದರ್ಭದಲ್ಲಿ ಭದ್ರತೆಯ ನಡುವೆಯೂ ಮೂವರು ಕಾರಿನಲ್ಲಿ ಆಗಮಿಸಿ ಅವರ ಹತ್ಯೆಗೆ ಯತ್ನಿಸಿರುವುದಾಗಿ ಮೂಲಗಳು ಪಿಟಿಐಗೆ ತಿಳಿಸಿರುವುದಾಗಿ ಹೇಳಿದೆ.
ಅಪಾಯದ ಮುನ್ಸೂಚನೆ ಅರಿತ ಮುಖ್ಯಮಂತ್ರಿ ದೇಬ್ ಅವರು ಪಕ್ಕಕ್ಕೆ ಜಿಗಿದು ತಪ್ಪಿಸಿಕೊಂಡಿದ್ದರು. ಆದರೆ ಘಟನೆಯಲ್ಲಿ ಓರ್ವ ಭದ್ರತಾ ಸಿಬಂದಿ ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ. ಮುಖ್ಯಮಂತ್ರಿಯ ಭದ್ರತಾ ಸಿಬಂದಿ ಕಾರನ್ನು ಅಡ್ಡಗಟ್ಟಲು ಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಗುರುವಾರ ರಾತ್ರಿ ಕೇರ್ ಚೌಮುಹಾನಿ ಪ್ರದೇಶದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಕಾರನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದು, ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರನ ದಾಖಲಿಸಲಾಗಿದೆ ಎಂದು ವಿವರಿಸಿದ್ದಾರೆ.
ಮೂವರು ಆರೋಪಿಗಳನ್ನು ಶುಕ್ರವಾರ ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಪಿಪಿ ಪೌಲ್ ಅವರ ಮುಂದೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವ ಕಾರಣಕ್ಕೆ ಮುಖ್ಯಮಂತ್ರಿಯವರ ಹತ್ಯೆಗೆ ಯತ್ನಿಸಿದ್ದಾರೆ ಎಂಬ ಬಗ್ಗೆ ಇನ್ನಷ್ಟೇ ತನಿಖೆಯಿಂದ ತಿಳಿಯಬೇಕಾಗಿದೆ. ನಾವು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಮನವಿ ಮಾಡಿಕೊಂಡಿದ್ದೇವು, ಆದರೆ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.