ಅಗರ್ತಲಾ: ತ್ರಿಪುರಾದ ಆಡಳಿತಾರೂಢ ಬಿಜೆಪಿ ಶಾಸಕ ಅರುಣ್ ಚಂದ್ರ ಭೌಮಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತಾಲಿಬಾನಿಗಳಂತೆ ತೃಣಮೂಲ ಕಾಂಗ್ರೆಸ್ ನಾಯಕರನ್ನು ಎದುರಿಸಬೇಕೆಂದು ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
2023ರಲ್ಲಿ ತ್ರಿಪುರಾ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಹಲವು ನಾಯಕರು ಪಕ್ಷ ಸಂಘಟನೆಗಾಗಿ ಗುಡ್ಡಗಾಡು ರಾಜ್ಯಕ್ಕೆ ಆಗಾಗ್ಗೆ ಭೇಟಿ ನೀಡುತ್ತಿರುವುದನ್ನು ಉದ್ದೇಶಿಸಿ ಅರುಣ್ ಚಂದ್ರ ಈ ಹೇಳಿಕೆ ನೀಡಿದ್ದಾರೆ.
25 ವರ್ಷಗಳ ಕಮ್ಯೂನಿಸ್ಟ್ ಆಡಳಿತವನ್ನು ಕೊನೆಗೊಳಿಸುವ ಮೂಲಕ ಅಧಿಕಾರಕ್ಕೆ ಬಂದ ತ್ರಿಪುರಾದ ಬಿಪ್ಲಬ್ ಕುಮಾರ್ ದೇಬ್ ನೇತೃತ್ವದ ಸರ್ಕಾರಕ್ಕೆ ಟಿಎಂಸಿ ಹಾನಿ ಮಾಡಲು ಪ್ರಯತ್ನಿಸುತ್ತಿದೆ. ಇವೆಲ್ಲವೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಪ್ರೇರಣೆಯಿಂದ ನಡೆಯುತ್ತಿದೆ ಎಂದು ಹೇಳಿದರು.
ಭೌಮಿಕ್ ದಕ್ಷಿಣ ತ್ರಿಪುರಾ ಜಿಲ್ಲೆಯ ಬೆಲೋನಿಯಾ ಹಳೆಯ ಟೌನ್ ಹಾಲ್‌ನಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾದ ಪ್ರತಿಮಾ ಭೌಮಿಕ್ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಈ ಹೇಳಿಕೆ ನೀಡಿದರು.
ಇನ್ನು ಭೌಮಿಕ್ ಅವರ ಹೇಳಿಕೆ ವಿವಾದದ ರೂಪ ಪಡೆದು ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಇದು ಶಾಸಕರ ವೈಯಕ್ತಿಕ ಹೇಳಿಕೆಯಾಗಿದ್ದು ಇದು ನಮ್ಮ ಮನಸ್ಥಿತಿಯಲ್ಲ ಎಂದು ಬಿಜೆಪಿ ಪಕ್ಷ ಸ್ಪಷ್ಟನೆ ನೀಡಿದೆ.