Advertisement

ಲೋಕಸಭೆಯಲ್ಲಿ ಮತ್ತೆ ತ್ರಿವಳಿ ತಲಾಖ್‌ ಗದ್ದಲ

11:41 AM Jun 24, 2019 | mahesh |

ನವದೆಹಲಿ: ಪ್ರತಿಪಕ್ಷಗಳ ತೀವ್ರ ಪ್ರತಿಭಟನೆ, ವಿರೋಧದ ನಡುವೆಯೇ ತ್ರಿವಳಿ ತಲಾಖ್‌ಗೆ ಸಂಬಂಧಿಸಿದ ಹೊಸ ವಿಧೇಯಕವನ್ನು ಕೇಂದ್ರ ಸರ್ಕಾರ ಶುಕ್ರವಾರ ಲೋಕಸಭೆಯಲ್ಲಿ ಮಂಡನೆ ಮಾಡಿದೆ.

Advertisement

ಮುಸ್ಲಿಮರಲ್ಲಿ ಜಾರಿಯಲ್ಲಿರುವಂಥ ಏಕಕಾಲಕ್ಕೆ 3 ಬಾರಿ ‘ತಲಾಖ್‌’ ಹೇಳಿ ವಿಚ್ಛೇದನ ನೀಡುವ ‘ತ್ರಿವಳಿ ತಲಾಖ್‌’ ಪದ್ಧತಿಯನ್ನು ನಿಷೇಧಿಸುವ ಮುಸ್ಲಿಂ ಮಹಿಳೆಯರ(ವೈವಾಹಿಕ ಹಕ್ಕುಗಳ ರಕ್ಷಣೆ) ವಿಧೇಯಕ 2019 ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 2ನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ, ಲೋಕಸಭೆಯಲ್ಲಿ ಮಂಡನೆಯಾದ ಮೊದಲ ಮಸೂದೆ ಇದು.

186 ಸದಸ್ಯರ ಬೆಂಬಲ: ಇದು ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ಆಶಯವುಳ್ಳಂಥ ವಿಧೇಯಕ ಎಂದು ಕೇಂದ್ರ ಸರ್ಕಾರ ವಾದಿಸಿದರೆ, ಪ್ರತಿಪಕ್ಷಗಳ ನಾಯಕರು ಮಾತ್ರ ಇದನ್ನು ಒಪ್ಪದೇ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ವಿಧೇಯಕವನ್ನು ಮತಕ್ಕೆ ಹಾಕಿದಾಗ, ಕಲಾಪದಲ್ಲಿ ಹಾಜರಿದ್ದ 186 ಸದಸ್ಯರು ಬೆಂಬಲ ಸೂಚಿಸಿ, 74 ಸದಸ್ಯರು ವಿರೋಧಿಸಿದ್ದಾರೆ. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹಾಗೂ ಜಗನ್ಮೋಹನ್‌ ರೆಡ್ಡಿ ನೇತೃತ್ವದ ವೈಎಸ್ಸಾರ್‌ ಕಾಂಗ್ರೆಸ್‌ ಮತದಾನದಿಂದ ದೂರವುಳಿದರೆ, ಜೆಡಿಯು ತ್ರಿವಳಿ ತಲಾಖ್‌ ವಿಧೇಯಕವನ್ನು ವಿರೋಧಿಸುವುದಾಗಿ ಹೇಳಿದೆ. ನವೀನ್‌ ಪಾಟ್ನಾಯಕ್‌ ನೇತೃತ್ವದ ಬಿಜೆಡಿ ಕೂಡ ವಿಧೇಯಕವನ್ನು ಬೆಂಬಲಿಸಿಲ್ಲ.

ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಅವರು ಮಸೂದೆ ಮಂಡಿಸಲು ಮುಂದಾದಾಗ, ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ಕೊನೆಗೆ ಸ್ಪೀಕರ್‌ ಓಂ ಬಿರ್ಲಾ ಅವರು ವಿಧೇಯಕದ ಕುರಿತು ಚರ್ಚೆಗೆ ಅವಕಾಶ ಕಲ್ಪಿಸಿದರು.

ಘನತೆ ಕಾಪಾಡಲು ಬದ್ಧ: ರವಿಶಂಕರ್‌ ಪ್ರಸಾದ್‌ವಿಧೇಯಕದ ಕುರಿತು ಮಾತನಾಡಿದ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌, ಲಿಂಗ ಸಮಾನತೆ ಮತ್ತು ನ್ಯಾಯಕ್ಕಾಗಿ ಈ ಕಾನೂನು ತರಲೇಬೇಕಾಗಿದೆ. ಇಲ್ಲಿ ಧರ್ಮದ ಪ್ರಶ್ನೆ ಉದ್ಭವಿಸುವುದಿಲ್ಲ, ಬದಲಿಗೆ ಮಹಿಳೆಯರಿಗೆ ನ್ಯಾಯ ಒದಗಿಸುವ ವಿಚಾರವಷ್ಟೇ ಪ್ರಮುಖವಾಗುತ್ತದೆ. ದೇಶದಲ್ಲಿ ವರ್ಷಕ್ಕೆ 543 ತ್ರಿವಳಿ ತಲಾಖ್‌ ಕೇಸುಗಳು ದಾಖಲಾಗುತ್ತಿವೆ. ತ್ರಿವಳಿ ತಲಾಖ್‌ ನಿಷೇಧಿಸಿ ಸುಪ್ರೀಂ ಕೋರ್ಟ್‌ ತೀರ್ಪು ಬಂದ ಬಳಿಕವೂ, 200ಕ್ಕೂ ಹೆಚ್ಚು ಕೇಸುಗಳು ದಾಖಲಾಗಿವೆ. ಇದು ಮಹಿಳೆಯರ ಘನತೆಯ ಪ್ರಶ್ನೆಯಾಗಿರುವ ಕಾರಣ, ನಾವು ಈ ವಿಧೇಯಕಕ್ಕೆ ಬದ್ಧರಾಗಿದ್ದೇವೆ ಎಂದರು.

Advertisement

ಸಾರ್ವತ್ರಿಕ ವಿಧೇಯಕ ತನ್ನಿ: ಶಶಿ ತರೂರ್‌: ಚರ್ಚೆಗೆ ನಾಂದಿ ಹಾಡಿ ಮಾತನಾಡಿದ ಕಾಂಗ್ರೆಸ್‌ ಸಂಸದ ಶಶಿ ತರೂರ್‌, ‘ಏಕಕಾಲಕ್ಕೆ ತ್ರಿವಳಿ ತಲಾಖ್‌ ನೀಡುವ ಪದ್ಧತಿಯನ್ನು ನಾನು ವಿರೋಧಿಸುತ್ತೇನೆ. ಆದರೆ, ಈ ವಿಧೇಯಕವನ್ನು ಖಂಡಿಸುತ್ತೇನೆ. ಏಕೆಂದರೆ, ಈ ವಿಧೇಯಕದಲ್ಲಿ ಒಂದು ಸಮುದಾಯವನ್ನಷ್ಟೇ ಕೇಂದ್ರೀಕರಿಸಲಾಗಿದೆ. ಪತ್ನಿಯನ್ನು ತ್ಯಜಿಸುವಂಥ ಕೆಲಸಗಳು ಮುಸ್ಲಿಂ ಸಮುದಾಯದಲ್ಲಿ ಮಾತ್ರವೇ ನಡೆಯುವಂಥದ್ದೇನೂ ಅಲ್ಲ. ನನ್ನ ಪ್ರಕಾರ, ಪತ್ನಿಯನ್ನು ತ್ಯಜಿಸುವಂಥ ಎಲ್ಲ ಸಮುದಾಯದ ಪುರುಷರಿಗೂ ಅನ್ವಯವಾಗುವ ಸಾರ್ವತ್ರಿಕ ವಿಧೇಯಕವನ್ನು ತರಬೇಕು’ ಎಂದು ಆಗ್ರಹಿಸಿದರು.

ಇಬ್ಬಗೆಯ ಧೋರಣೆಯೇಕೆ?: ಚರ್ಚೆಯಲ್ಲಿ ಪಾಲ್ಗೊಂಡ ಎಐಎಂಐಎಂ ಸಂಸದ ಅಸಾದುದ್ದೀನ್‌ ಒವೈಸಿ, ‘ಮುಸ್ಲಿಂ ಮಹಿಳೆಯರ ಬಗ್ಗೆ ಇಷ್ಟೊಂದು ಒಲವು ತೋರಿಸುತ್ತಿರುವ ಇದೇ ಬಿಜೆಪಿ, ಕೇರಳದಲ್ಲಿ ಶಬರಿಮಲೆ ದೇಗುಲ ಪ್ರವೇಶಿಸುವ ಹಿಂದೂ ಮಹಿಳೆಯರ ಹಕ್ಕನ್ನು ವಿರೋಧಿಸುತ್ತದೆ. ತ್ರಿವಳಿ ತಲಾಖ್‌ ವಿಧೇಯಕವು ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗಿದೆ. ಪತ್ನಿಯನ್ನು ತ್ಯಜಿಸಿ ಹೋಗುವ ಮುಸ್ಲಿಂ ಪುರುಷರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸುವುದಾಗಿ ಈ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ, ಅದೇ ತಪ್ಪು ಮಾಡುವ ಮುಸ್ಲಿಮೇತರ ಪುರುಷರಿಗೆ ಕೇವಲ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇದ್ಯಾವ ನ್ಯಾಯ?’ ಎಂದು ಪ್ರಶ್ನಿಸಿದರು.

ವಿಧೇಯಕದಲ್ಲೇನಿದೆ?

ಏಕಕಾಲಕ್ಕೆ ಮೂರು ಬಾರಿ ತಲಾಖ್‌ ಎಂದು ಹೇಳಿ ವಿಚ್ಛೇದನ ನೀಡುವುದು ಕಾನೂನುಬಾಹಿರವಾಗಿದ್ದು, ಅಂಥ ವ್ಯಕ್ತಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ವಲ್ಪಮಟ್ಟಿಗೆ ಅದಕ್ಕೆ ತಿದ್ದುಪಡಿ ತರಲಾಗಿದೆ. ಅದರಂತೆ, ಪತ್ನಿಯ ವಾದವನ್ನು ಆಲಿಸಿದ ಬಳಿಕ ಮ್ಯಾಜಿಸ್ಟ್ರೇಟ್ ಬಯಸಿದಲ್ಲಿ, ಆರೋಪಿಗೆ ಜಾಮೀನು ನೀಡುವ ನಿಯಮವನ್ನು ಸೇರಿಸಲಾಗಿದೆ. ಈ ತಿದ್ದುಪಡಿಗೆ ಕಳೆದ ವರ್ಷದ ಆ.29ರಂದು ಸಂಪುಟದ ಒಪ್ಪಿಗೆ ಸಿಕ್ಕಿದೆ.

ಸೋನಿಯಾ ಗಾಂಧಿಯಂಥ ಮಹಿಳೆಯು ಕಾಂಗ್ರೆಸ್‌ನ ನಾಯಕಿಯಾಗಿದ್ದಾರೆ. ಆದರೂ, ತ್ರಿವಳಿ ತಲಾಖ್‌ ಮಸೂದೆಯನ್ನು ವಿರೋಧಿಸುವ ಮೂಲಕ ಲೋಕಸಭೆಯಲ್ಲಿ ಕಾಂಗ್ರೆಸ್‌ ಮಹಿಳಾ-ವಿರೋಧಿ ನಿಲುವು ತಾಳಿದೆ. ಇದು ಬಹಳ ನೋವಿನ ಸಂಗತಿ.
ರವಿಶಂಕರ್‌ ಪ್ರಸಾದ್‌, ಕೇಂದ್ರ ಸಚಿವ
Advertisement

Udayavani is now on Telegram. Click here to join our channel and stay updated with the latest news.

Next