ಬೆಟ್ಟವನ್ನು ಹತ್ತಲು ಬರುವುದಿಲ್ಲ ಎಂದುಕೊಂಡಿದ್ದ ನನಗೆ ಟ್ರಕ್ಕಿಂಗ್‌ನ ಮೋಡಿ ಹುಟ್ಟಿದ್ದು ಹೇಗೆ ಎಂಬುದೇ ಗೊತ್ತಿಲ್ಲ. ಕೊನೆ ಕ್ಷಣದವರೆಗೂ ಹೋಗಬೇಕಾ- ಹೋಗಬಾರದಾ.. ಚಿಕ್ಕಬೆಟ್ಟ ಆಗಿರುತ್ತಾ, ಇಲ್ಲ ದೊಡ್ಡ ಬೆಟ್ಟನಾ, ಶೂಸ್ ಹಾಕಿಕೊಳ್ಳೊದಾ ಅಥವಾ ಸ್ಲಿಪ್ಪರ್ ಹಾಕಿಕೊಂಡು ಹೋಗಲಾ, ಯಾವ ಬಟ್ಟೆ ಹಾಕಿಕೊಳ್ಳಲಿ. ಅಬ್ಬಬ್ಟಾ! ಒಂದ ಎರಡ ನೂರಾರು ಪ್ರಶ್ನೆಗಳು ನನ್ನ ತಲೆಯಲ್ಲಿ ಒಂದೇ ಸಲ ದಾಳಿ ಮಾಡಿದವು. ಅಂತೂ ಇಂತೂ ಹೇಗೋ ನಾನು ನನ್ನ ಇಬ್ಬರು ಗೆಳತಿಯರು ಟ್ರಕ್ಕಿಂಗ್ ಹೋಗಲು ತೀರ್ಮಾನ ಮಾಡಿದೆವು. ಆದರೆ ಎಲ್ಲಿಗೆ ಹೋಗೋದು ? ಮುಖ್ಯಪ್ರಶ್ನೆ ಅದೇ ಅಲ್ವಾ, ಕೆಲವು ಸ್ನೇಹಿತರ ಸಹಾಯದ ಮೇರೆಗೆ ನಮಗೆ ಸಿಕ್ಕ ಸ್ಥಳದ ಹೆಸರು ಸಾವನದುರ್ಗ. ಹೆಸರು ಕೇಳ್ಳೋಕೆ ಸ್ವಲ್ಪ ವಿಚಿತ್ರ.
ಸಾವುಗಳಿಂದಲೇ ಆ ಬೆಟ್ಟ ಫೇಮಸ್. ಟಿಪ್ಪು ಸುಲ್ತಾನನ ಆಳ್ವಿಕೆಯ ಸಮಯದಲ್ಲಿ ಯಾರಾದರೂ ಬಹಳ ಘೋರ ಅಪರಾಧ ಮಾಡಿದ ಅಪರಾಧಿಗಳಿಗೆ ಈ ಬೆಟ್ಟದ ತುದಿಗೆ ಕರೆದುಕೊಂಡು ಬಂದು ಕೆಳಗೆ ನೂಕುತ್ತಿದ್ದರು. ಈ ಶಿಕ್ಷೆಯ ಮೂಲ ಉದ್ದೇಶವೇ ಮರಳಿ ಈ ರೀತಿಯ ಅಪರಾಧಗಳನ್ನು ಯಾರು ಮಾಡಬಾರದು. ಇದು ಬಹಳ ಆಸಕ್ತಿಕಾರಿ ವಿಷಯ. ಇದನ್ನು ತಿಳಿದುಹೋಗಲೇಬೇಕು ಎಂದು ರವಿವಾರ ಬೆಳಗ್ಗೆ ಸುಮಾರು ಐದು ಗಂಟೆಗೆ ನಾವು ತುಮಕೂರು ಬಿಟ್ಟಿದ್ದು. ಗಾಡಿ ವ್ಯವಸ್ಥೆ ಇದ್ದಿದ್ದರಿಂದ ನಮಗೆ ಯಾವುದೇ ತೊಂದರೆ ಕಾಣಿಸಿಕೊಳ್ಳಲಿಲ್ಲ, ರಾಮನಗರದಿಂದ 35 ಕಿ. ಮೀ. ಹಾಗೂ ಮಾಗಡಿಯಿಂದ 11 ಕಿ.ಮೀ. ದೂರ ಇರುವ ಏಕಶಿಲಾ ಬೆಟ್ಟ.
ಸುಮಾರು ಏಳುವರೆಗೆ ಸಾವನದುರ್ಗಕ್ಕೆ ತಲುಪಿದೆವು. ಮೊದಲಬಾರಿ ಬೆಟ್ಟವನ್ನು ನೋಡಿದ್ದು. ನೋಡಿದ ತತ್‌ಕ್ಷಣ ಹೇ.. ಬಹಳ ಚಿಕ್ಕದೇ ಅಂತ ಮನಸ್ಸಿಗೆ ಬಂತು. ಬೆಟ್ಟದ ಕೆಳಗೆ ಇದ್ದಂತಹ ಲಕ್ಷ್ಮೀ ನರಸಿಂಹಸ್ವಾಮಿಯ ದೇವಾಲಯಕ್ಕೆ ಭೇಟಿ ನೀಡಿ ಪ್ರಯಾಣ ಪ್ರಾರಂಭಿಸಿದೆವು. ಈ ಬೆಟ್ಟದ ಎತ್ತರ 1,435 ಅಡಿ. ನನ್ನ ಗೆಳತಿಯರಿಬ್ಬರು ಜಿಗಿದುಕೊಂಡು ಬೆಟ್ಟ ಹತ್ತುತ್ತಿದ್ದರೆ ನನ್ನ ಕೈಯಲ್ಲಿ ಇದು ಸ್ವಲ್ಪ ಕಷ್ಟ ಕೆಲಸವೇ ಆಗಿತ್ತು. ಮನಸ್ಸನ್ನು ಗಟ್ಟಿ ಮಾಡಿ ಮುಂದೆ ಸಾಗಿದೆ. ನಿಜವಾಗಿಯು ಅದು ಸಾವಿನ ದುರ್ಗವೇ ಸರಿ. ಆದರೂ ಛಲಬಿಡದೆ ಹತ್ತಲು ಶುರುಮಾಡಿದೆ. ಸ್ವಲ್ಪ ಬೆಟ್ಟದ ಮೇಲೆ ಹೋದಂತೆ ಸುತ್ತಲಿನ ಮನಮೋಹಕ ದೃಶ್ಯ ನನ್ನ ಕಣ್ಣಿನ ಕೆಮರಾದಲ್ಲಿ ಸೆರೆಯಾಯಿತು. ಅಲ್ಲಲ್ಲಿ ಮಂಟಪಗಳು, ನೀರಿಗಾಗಿ ಮಾಡಿದಂತಹ ಸಣ್ಣಸಣ್ಣ ಕೊಳಗಳ ರೀತಿಯ ಹಳ್ಳಗಳು ಕಾಣಸಿಗುತ್ತಿದ್ದವು. ಆ ಬೆಟ್ಟದಲ್ಲಿ ಯಾವುದೇ ರೀತಿಯ ಮೆಟ್ಟಿಲುಗಳಾಗಲಿ, ಹಿಡಿದುಕೊಳ್ಳಲು ಕಂಬಿಗಳಾಗಲಿ ಇರಲಿಲ್ಲ. ಬೆಟ್ಟ ಹತ್ತುವ ಸಮಯದಲ್ಲಿ ಎಲ್ಲಿ ನಾನು ಕಾಲು ಜಾರಿ ಕೆಳಗೆ ಬೀಳುತ್ತೇನೆ ಎನ್ನುವ ಭಯ ಕಾಡುತ್ತಿತ್ತು. ಆದರೂ ಛಲ ಬಿಡದೆ ನನ್ನ ಪ್ರಯಾಣ ಮುಂದುವರಿಸಿದೆ. ನಂಗೆ ಈ ಬೆಟ್ಟದಲ್ಲಿ ಸಿಕ್ಕಂತಹ ಬಹುದೊಡ್ಡ ಅನುಮಾನದ ವಿಷಯವೇನೆಂದರೆ ಬೆಟ್ಟದ ಮೇಲೆ ಸಣ್ಣದಾಗಿ ನೀರು ಹರಿಯುವ ದೃಶ್ಯ. ಬೆಟ್ಟದ ಸುಮಾರು ಭಾಗದಲ್ಲಿ ನಾನು ಇದನ್ನು ಕಂಡೆ. ಆದರೆ ಇದಕ್ಕೆ ನಂಗೆ ಸಿಕ್ಕ ಉತ್ತರ ಮಾತ್ರ ಶೂನ್ಯ. ಬೆಟ್ಟಗಳ ಮಧ್ಯೆ ತೊರೆ, ಅಲ್ಲಲ್ಲಿ ಸಿಗುವ ಮಣ್ಣಿನ ಗುಡ್ಡಗಳನ್ನು ಹತ್ತುತ್ತಾ, ಅಪರಿಚಿತರ ಸಹಾಯ ಪಡೆಯುತ್ತಾ ಕೊನೆಗೂ ಬೆಟ್ಟದ ತುದಿಗೆ ಮುಟ್ಟಿದೆವು, ದೂರದಲ್ಲಿ ಹರಿಯುತ್ತಿದ್ದ ಮಂಚನಬೆಲೆಯ ಡ್ಯಾಂನ ಹಿಂಭಾಗದ ನೀರು ಎಲ್ಲವೂ ಒಂದು ಕ್ಷಣ ನನ್ನ ಆಯಾಸ, ನಿಶ್ಯಕ್ತಿ ಎಲ್ಲವನ್ನು ಮರೆಸಿತ್ತು. ಅದಕ್ಕೆ ಹೇಳುವುದು ಪ್ರಕೃತಿಯು ವಿಸ್ಮಯದ ನಿರ್ಮಾಣವೆಂದು. ಜೀವನದಲ್ಲಿ ಯಾವುದು ಅಸಾಧ್ಯವಲ್ಲ. ಪ್ರಯತ್ನ ಪಟ್ಟರೆ ಎಲ್ಲವೂ ಸಾಧ್ಯ ಎಂಬುವುದಕ್ಕೆ ಇದೆ ಸಾಕ್ಷಿ.
ಸುಮಾ ನಾರಾಯಣ್
ಶ್ರೀ ಸಿದ್ಧಾರ್ಥ ಮಾ.ಅ. ಕೇಂದ್ರ ತುಮಕೂರು