ಸುಳ್ಯ: ನಮ್ಮದು ಫ್ಲೈಯಿಂಗ್ ಫ಼ಾಲ್ಕನ್ಸ್ ಎಂಬ ಗೆಳೆಯರ ಗುಂಪು. ಪ್ರತಿ ವರ್ಷ ಬೈಕ್ ನಲ್ಲಿ ದೂರ ದೂರದ ಊರಿಗೆ ರೈಡ್ ಹೋಗಿ ಅಲ್ಲಿಯ ಸ್ಥಳದ ಚೆಲುವನ್ನು ಕಣ್ಣು ತುಂಬಿಕೊಂಡು ಬರುತ್ತಿದ್ದೆವು. ಒಂದು ದಿನ ನಮ್ಮ ಸಣ್ಣ ತಂಡ ನೇಪಾಳದ ಕಡೆ ಬೈಕಿನಲ್ಲಿ ಪ್ರವಾಸ ಹೋಗಲು ಯೋಜನೆ ರೂಪಿಸಿತು.
ಮಾತ್ರವಲ್ಲದೆ ಕೂಡಲೇ ಕಾರ್ಯಪ್ರವೃತ್ತರಾಗಿ, ನೇಪಾಳದ ಸುಂದರ ಪ್ರವಾಸಿ ತಾಣಗಳನ್ನು ಹುಡುಕಿ, ಅಂದಾಜು ವೆಚ್ಚಗಳನ್ನು ಲೆಕ್ಕಿಸಿ, 10 ದಿನದ ಪ್ರವಾಸ ಎಂದು ನಿಗದಿ ಆಯಿತು. ಎಲ್ಲಾ ತಯಾರಿ ನಡೆಸಿ ನಮ್ಮ ನಾಲ್ಕು ಜನರ ತಂಡ 2 ಬೈಕಿನಲ್ಲಿ ಹೊರಟೇ ಬಿಟ್ಟಿದ್ದೆವು.
ಮೊದಲಿಗೆ ಬೆಂಗಳೂರಿನಿಂದ ಲಕ್ನೋಗೆ ವಿಮಾನದಲ್ಲಿ, ಲಕ್ನೋದಿಂದ ಗೊರಖ್ ಪುರಕ್ಕೆ ರೈಲಿನಲ್ಲಿ ಪ್ರಯಾಣಿಸಿದೆವು. ಅಂದ ಹಾಗೇ ನಮ್ಮ ಬೈಕುಗಳನ್ನು ನಾವು ಮೊದಲೇ ನಿಯೋಜಿಸಿದಂತೆ ರೈಲಿನಲ್ಲಿ ಕಳುಹಿಸಿ ಕೊಟ್ಟಿದ್ದೆವು. ನಂತರ ಬೈಕಿನಲ್ಲಿ ಪ್ರಯಾಣಿಸಿ ನೇಪಾಳ ಗಡಿ ಪ್ರದೇಶ ಸೋನಾಲಿ ತಲುಪಿದೆವು. ಅದು ಗೊರಖ್ ಪುರದಿಂದ 100km ದೂರ. ಭಾರತೀಯರಿಗೆ ನೇಪಾಳ ಪ್ರವೇಶಿಸಲು ಯಾವುದೇ ನಿರ್ಬಂಧಗಳು ಇಲ್ಲ. (ವಾಪಾಸು ಬರುವಾಗ ಭಾರತದ ಗಡಿಯಲ್ಲಿ ನಮ್ಮ ಲಗೇಜ್ ಚೆಕ್ಕಿಂಗ್ ನಡೆದಿತ್ತು)
ನೇಪಾಳದಲ್ಲಿ ಭಾರತದ ವಾಹನಗಳಿಗೆ ಅನುಮತಿಪತ್ರ ಬೇಕು, ನಮ್ಮದು ದ್ವಿಚಕ್ರ ವಾಹವಾದ್ದರಿಂದ ಭಾರತದ ರೂ. ಗಳಲ್ಲಿ ದಿನಕ್ಕೆ 70ರೂ ತೆತ್ತು ಮುನ್ನಡೆದೆವು. ಹೋಗುವ ದಾರಿ ಅಷ್ಟೇನು ವ್ಯವಸ್ಥಿತವಾಗಿಲ್ಲವಾದರೂ, ಗಂಟೆಗೆ 30-35 km ಕ್ರಮಿಸಿ ಪೊಖಾರ ಎಂಬಲ್ಲಿಗೆ ತಲುಪಿದ್ದೇವು. .ಅಲ್ಲಿನ ವಾತಾವರಣ, ರಸ್ತೆ, ಸ್ವಚ್ಚತೆ ಪ್ರವಾಸಿಗರನ್ನು ಆಕರ್ಷಿಸುವಂತಿತ್ತು.
ನೇಪಾಳ ಸಣ್ಣ ದೇಶ, ಇಲ್ಲಿನ ಹೆಚ್ಚಿನ ಜನಾಂಗವು ಹಿಂದೂ ಸಂಸ್ಕೃತಿಯನ್ನು ಅನುಸರಿಸುವವರಾಗಿದ್ದು, ಇವರ ಆರಾಧ್ಯ ದೈವ ಶಿವ. ಅಂತೆಯೇ ಇಲ್ಲಿ ಪಶುಪತಿನಾಥ್ ಮತ್ತು ಮುಕ್ತಿ ನಾಥ್ ಎಂಬ ಪ್ರಸಿದ್ಧ ಹಿಂದೂ ದೇವಾಲಯಗಳಿವೆ. ಬೌದ್ಧ ಜನಾಂಗವು ಇಲ್ಲಿನ ಎರಡನೇ ಅತೀ ಹೆಚ್ಚು ಜನಾಂಗ. ಕಠ್ಮಂಡು ಇಲ್ಲಿನ ರಾಜಧಾನಿ.
ಮಾರ್ಚ್ ಚಳಿಗಾಲದ ಕೊನೆಯ ತಿಂಗಳು. ನಾವಿಲ್ಲಿ 2°c ಯಿಂದ 15°c ತಾಪಮಾನದ ಅನುಭವ ಪಡೆದೆವು. ಇಲ್ಲಿನ ಜನರಿಗೆ ಆದಾಯದ ಮೂಲ ಕೃಷಿ ಮತ್ತು ಪ್ರವಾಸೋದ್ಯಮ. ನೇಪಾಳದಲ್ಲಿ ನಮಗೆ ಅಚ್ಚರಿ ಎನಿಸಿದ ಸಂಗತಿ ಎಂದರೆ ಇಲ್ಲಿ 47 ವಿಮಾನ ನಿಲ್ದಾಣಗಳಿದ್ದವು. ಅದರಲ್ಲಿ ಒಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಅದು ಕಠ್ಮಂಡುವಿನಲ್ಲಿದೆ.
ಇಲ್ಲಿನ ಗುಡ್ಡ ಪ್ರದೇಶಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಕೇಬಲ್ ಕಾರ್ ಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಚಂದ್ರಗಿರಿ ಬೆಟ್ಟವು ಅತ್ಯಂತ ಎತ್ತರವಾದುದಾಗಿದ್ದು ಸರಿಸುಮಾರು 2551m ಇದೆ. ಇದರಲ್ಲಿ ಕೇಬಲ್ ಕಾರ್ 2.4 km ಚಲಿಸುತ್ತದೆ. ನಮ್ಮನ್ನು 8 ರಿಂದ 10 ನಿಮಿಷದಲ್ಲಿ 3500 ಫೀಟ್ ಎತರಕ್ಕೆ ಕೊಂಡೊಯ್ಯುತ್ತದೆ. ಚಂದ್ರಗಿರಿ ಬೆಟ್ಟದಿಂದ ಕಾಣುವ ವಿಹಂಗಮ ನೋಟ ಅದ್ಭುತವಾಗಿದೆ.
ನೇಪಾಳದ ಹಲವೆಡೆ ಹಿಮಾಲಯಕ್ಕೆ ಚಾರಣ ಕೂಡ ಹೋಗಬಹುದು. ಭರತ್ಪುರ & ಪಟಾನ್ ಎಂಬಲ್ಲಿ ತುಂಬಾ ಅರಮನೆಗಳಿವೆ. ಇಲ್ಲಿನ ಅನೇಕ ಅರಮನೆಗಳು 2015 ರಲ್ಲಿ ಆದ ಭೂಕಂಪಕ್ಕೆ ಹಾನಿಗೊಳಗಾಗಿದೆ.ಮತ್ತು ಅದನ್ನೀಗ ಚೀನಾ ದೇಶದ ಪಾಲುದಾರಿಕೆಯಲ್ಲಿ ಮರು ನಿರ್ಮಿಸಲಾಗುತ್ತಿದೆ. ಇಲ್ಲಿ ಒಂದು ನಿಗದಿತ ಪಂಗಡದಿಂದ ಒಬ್ಬಳು 10 ವರುಷದ ಒಳಗಿನ ಹೆಣ್ಣು ಮಗುವನ್ನು ಕುಮಾರಿ ಎಂದು ಪರಿಗಣಿಸಿ ಜೀವಂತವಾಗಿರುವ ದೇವತೆ ಎಂದು ಪೂಜಿಸಲಾಗುತ್ತದೆ ಮತ್ತು ಅವಳು ಕುಮಾರಿ ಘರ್ ( ಸಣ್ಣ ಅರಮನೆ)ಲ್ಲಿ ವಾಸವಿರುತ್ತಾಳೆ.
ಮುಂದೆ ನಾವು ನಾಗರಕೋಟ್ಗೆ ಪಯಣ ಬೆಳೆಸಿದೆವು. ಅದೊಂದು ಗುಡ್ಡ ಪ್ರದೇಶ. ಇಲ್ಲಿಗೆ ಭಕ್ತಾಪುರ ಎಂಬಲ್ಲಿಂದ 3 ಗಂಟೆಯ ಪ್ರಯಾಣ. ಇಲ್ಲಿ ಹಿಮಾಲಯದ 360°ಯ ವಿಸ್ತಾರ ನೋಟ ಕಾಣ ಸಿಗುವುದು. ಅಲ್ಲಿಂದ ಚಿತ್ವಾನ ರಾಷ್ಟ್ರೀಯ ಉದ್ಯಾನವನ್ನು ನೋಡಿಕೊಂಡು ಲುಂಬಿನಿ ತಲುಪಿದೆವು. ಲುಂಬಿನಿ ಸೊನಾಲಿ ಗಡಿ ಪ್ರದೇಶಕ್ಕೆ ಹತ್ತಿರವಿರುವ ಸ್ಥಳ. ಇದು ಬುದ್ಧನ ಜನ್ಮಸ್ಥಳ ವೆಂದು ಪ್ರಸಿದ್ಧಿ.
ಇಲ್ಲಿ ಪ್ರಪಂಚದಲ್ಲಿರುವ ಎಲ್ಲಾ ಕಡೆಯ ಬುದ್ಧನ ವಾಸ್ತುಶಿಲ್ಪದ ಪ್ರಕಾರದ ದೇವಾಲಯಗಳನ್ನು ನಿರ್ಮಿಸಿದ್ದಾರೆ. ನೇಪಾಳದಲ್ಲಿ ಉಳಿದುಕೊಳ್ಳಲು ಅನೇಕ ರೀತಿಯ ಕಡಿಮೆ ದರದಿಂದ (500INR) ಹೆಚ್ಚಿನ ದರದ ಹೋಟೆಲ್ ಗಳು ಲಭ್ಯವಿದೆ. ಇವುಗಳನ್ನ ಆನ್ ಲೈನ್ ಮೂಲಕವೂ ಕಾಯ್ದಿರಿಸಬಹುದು.
ನಮಗೆ ಇಲ್ಲಿ ಭಾರತೀಯ ಶೈಲಿಯ ಮತ್ತು ಶುದ್ಧ ಸಸ್ಯಾಹಾರಿ ಉಪಹಾರ ಮಂದಿರಗಳು ಕೂಡ ಕೆಲವೆಡೆ ದೊರೆತಿದೆ. ಒಂದು ಒಳ್ಳೆಯ ಹೋಟೆಲಿನಲ್ಲಿ ಹೊಟ್ಟೆ ತುಂಬಾ ಊಟಕ್ಕೆ 200-300 NC ( INR 125-188) ವೆಚ್ಚವಾಗುತ್ತದೆ. ಇಲ್ಲಿ ಮೋಮೋಸ್, ಸೆಲ್ ರೊಟ್ಟಿ (ನಮ್ಮೂರಿನ ಕೋಡ್ ಬಳೆಯಂತೆ ಕಾಣಲ್ಪಡುವ ಗಾತ್ರದಲ್ಲಿ ದೊಡ್ಡದಾಗಿದ್ದು ಸಜ್ಜಿಗೆ ರವೆಯಿಂದ ಮಾಡಲ್ಪಟ್ಟಿರುತ್ತದೆ) ಸಿಹಿಯಾಗಿದ್ದು ಬೆಳಗಿನ ಉಪಹಾರಕ್ಕೆ ಚೆನ್ನಾಗಿರುತ್ತದೆ.
ಒಟ್ಟಿನಲ್ಲಿ ಒಂದೊಳ್ಳೆ ಪ್ರವಾಸವನ್ನು ಕೈಗೊಂಡು ಅಲ್ಲಿನ ಸಂಸ್ಕ್ರತಿ, ಜೀವನ ಶೈಲಿ, ಜೊತೆಗೆ ಹಿಮಾಲಯದ ಸೊಬಗನ್ನು ನೋಡಿ ಆನಂದಿಸಿದೆವು.
– ಜ್ಯೋತಿ ಶ್ರೀಕೃಷ್ಣ ಸುಳ್ಯ
– ಗಣೇಶ ಅರ್ಚನಾ ಬೆಂಗಳೂರು