ನವದೆಹಲಿ: ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ರಾಜ್ಯಸಭಾ ಸದಸ್ಯ ಡೆರೆಕ್ ಒಬ್ರೆಯಾನ್ ಅವರನ್ನು ಅಶಿಸ್ತಿನ ನಡವಳಿಕೆ ಹಿನ್ನೆಲೆಯಲ್ಲಿ ಮುಂಗಾರು ಅಧಿವೇಶನದ ಉಳಿದ ಅವಧಿಯ ಕಲಾಪಲ್ಲಿ ಪಾಲ್ಗೊಳ್ಳದಂತೆ ಅಮಾನತು ಮಾಡಿರುವ ಘಟನೆ ಮಂಗಳವಾರ (ಆಗಸ್ಟ್ 08) ನಡೆದಿದೆ.
ಇದನ್ನೂ ಓದಿ:ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿ; ಮತ್ತೆ 170 ಡಿಎಲ್ ಅಮಾನತಿಗೆ ಪ್ರಸ್ತಾವನೆ
ಸೋಮವಾರ(ಆ.07)ವೂ ಕೂಡಾ ದೆಹಲಿ ಮಸೂದೆ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಅನುಚಿತವಾಗಿ ವರ್ತಿಸಿದ್ದ ಟಿಎಂಸಿ ರಾಜ್ಯಸಭಾ ಸಂಸದ ಡೆರೆಕ್ ಅವರನ್ನು ಅಮಾನತು ಮಾಡುವುದಾಗಿ ಸಭಾಧ್ಯಕ್ಷ ಜಗದೀಪ್ ಧನ್ಕರ್ ಎಚ್ಚರಿಕೆ ನೀಡಿದ್ದರು.
ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವ ವಿಚಾರದಲ್ಲಿ ಚರ್ಚೆ ನಡೆಸಲು ಅವಕಾಶ ನೀಡಬೇಕೆಂದು ವಿಪಕ್ಷಗಳು ಧ್ವನಿ ಎತ್ತಿದ ಸಂದರ್ಭದಲ್ಲಿ ಟಿಎಂಸಿ ರಾಜ್ಯಸಭಾ ಸದಸ್ಯ ಮಣಿಪುರ ವಿಷಯದ ಕುರಿತು ಚರ್ಚಿಸಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಸಭಾಧ್ಯಕ್ಷರು ಅವಕಾಶ ನೀಡುವುದಾಗಿ ಹೇಳಿದಾಗಲೂ ಡೆರೆಕ್ ಆಕ್ರೋಶದಿಂದ ಮಾತನಾಡಲು ಆರಂಭಿಸಿದ್ದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪಿಯೂಶ್ ಗೋಯಲ್, ಟಿಎಂಸಿ ಸದಸ್ಯ ಡೆರೆಕ್ ಒಬ್ರೆಯಾನ್ ಅವರನ್ನು ಕಲಾಪದಿಂದ ಅಮಾನತುಗೊಳಿಸುವಂತೆ ಗೊತ್ತುವಳಿ ಮಂಡಿಸಿದ್ದು, ಅದನ್ನು ಸಭಾಧ್ಯಕ್ಷ ಜಗದೀಪ್ ದನ್ಕರ್ ಪರಿಗಣಿಸುವುದಾಗಿ ತಿಳಿಸಿ, ಮುಂಗಾರು ಅಧಿವೇಶನದ ಇನ್ನುಳಿದ ಕಲಾಪದಲ್ಲಿ ಒಬ್ರೆಯಾನ್ ಭಾಗವಹಿಸದಂತೆ ಅಮಾನತುಗೊಳಿಸಲಾಗಿದೆ ಎಂದು ಘೋಷಿಸಿದ್ದರು.
ಮುಂಗಾರು ಅಧಿವೇಶನದ ಕಲಾಪದಲ್ಲಿ ಒಬ್ರೆಯಾನ್ ಅವರು ಸಭಾಪತಿಗೆ ಅಗೌರವ ತೋರಿದ್ದು, ಸಭಾ ನಡವಳಿಕೆ ಮೀರಿ ವರ್ತಿಸಿರುವ ಅವರನ್ನು ಅಮಾನತು ಮಾಡುವ ಪ್ರಸ್ತಾಪವನ್ನು ಅಂಗೀಕರಿಸಬೇಕೆಂದು ಗೋಯಲ್ ಮನವಿ ಮಾಡಿಕೊಂಡಿದ್ದರು.