ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಸುಶ್ಮಿತಾ ದೇವ್ ಅವರ ಮೇಲೆ ದಾಳಿಯಾಗಿದೆ. ಸುಶ್ಮಿತಾ ದೇವ್ ಅವರ ಕಾರನ್ನು ಧ್ವಂಸ ಮಾಡಿದ ಘಟನೆ ತ್ರಿಪುರದಲ್ಲಿ ಶುಕ್ರವಾರ ನಡೆದಿದೆ.
ಸುಶ್ಮಿತಾ ದೇವ್ ಅವರಿಗೆ ರಾಜಕೀಯ ಪ್ರಚಾರದಲ್ಲಿ ಸಹಾಯ ಮಾಡುತ್ತಿದ್ದ ಖಾಸಗಿ ಸಂಸ್ಥೆಯ ಉದ್ಯೋಗಿಗಳು ಕೂಡಾ ದಾಳಿಯಲ್ಲಿ ಗಾಯಗೊಂಡಿದ್ದಾರೆ. ತ್ರಿಪುರಾದಲ್ಲಿ ತೃಣಮೂಲ ಕಾಂಗ್ರೆಸ್ ಚಟುವಟಿಕೆಗಳ ಮೇಲ್ವಿಚಾರಣೆ ಮಾಡುತ್ತಿರುವ ಸುಶ್ಮಿತಾ ದೇವ್, ದಾಳಿಯ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಆರೋಪಿಸಿದರು.
ದಾಳಿ ನಡೆದಾಗ ಭಾರತೀಯ ರಾಜಕೀಯ ಕ್ರಿಯಾ ಸಮಿತಿ ಅಥವಾ ಐ-ಪಿಎಸಿ, ರಾಜಕೀಯ ಸಾರ್ವಜನಿಕ ಸಂಪರ್ಕ ಮತ್ತು ಸಲಹಾ ಸಂಸ್ಥೆಯ ಉದ್ಯೋಗಿಗಳೊಂದಿಗೆ ದೇವ್ ಇದ್ದರು.
ಇದನ್ನೂ ಓದಿ:ಚಾರ್ ಧಾಮ್ ಯಾತ್ರೆ : 2 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳ ಭೇಟಿ
” ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಅಮತಾಲಿ ಬಜಾರ್ ನಲ್ಲಿ ಮಧ್ಯಾಹ್ನ 1:30 ರ ಸುಮಾರಿಗೆ ಸುಶ್ಮಿತಾ ದೇವ್ ಮತ್ತು ಟಿಎಂಸಿಯ 10 ಇತರ ಪಕ್ಷದ ಕಾರ್ಯಕರ್ತರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ದುಷ್ಕರ್ಮಿಗಳು ವಾಹನಗಳನ್ನು ಧ್ವಂಸ ಮಾಡಿದರು, ಟಿಎಂಸಿಯ ಕಾರ್ಯಕರ್ತರ ಮೇಲೆ ದೈಹಿಕ ಹಲ್ಲೆ ಮಾಡಿದರು” ಎಂದು ತೃಣಮೂಲ ಕಾಂಗ್ರೆಸ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದೆ.
ಈ ವೇಳೆ ಪಕ್ಷದ ಬೆಂಬಲಿಗರಿಗೆ ಸೇರಿದ ಮೊಬೈಲ್ ಫೋನ್ ಗಳು ಕಳ್ಳತನವಾಗಿದೆ. ಈ ವಿಷಯದ ಬಗ್ಗೆ ತುರ್ತಾಗಿ ವಿಚಾರಣೆಗೆ ಒಳಪಡಿಸಿ ಮತ್ತು ಅಪರಾಧಿಗಳನ್ನು ಬಂಧಿಸಬೇಕು” ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ.