ಸಂಗೀತ ಪರಿಷತ್ ಮಂಗಳೂರು(ರಿ) ಸಂಸ್ಥೆ ಭಾರತೀಯ ವಿದ್ಯಾಭವನ ಮತ್ತು ರಾಮಕೃಷ್ಣ ಮಠದ ಸಹಯೋಗದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳ ಮತ್ತು ದಾಸವರೇಣ್ಯರ “ಆರಾಧನೋತ್ಸವ’ವನ್ನು ಇತ್ತೀಚೆಗೆ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಏರ್ಪಡಿಸಿತು. ಪ್ರತಿಭಾನ್ವಿತ ಕಲಾವಿದ ಕೆ.ವಿ ಕೃಷ್ಣ ಪ್ರಸಾದ್ ಅವರ ಕಛೇರಿಯೊಂದಿಗೆ ಪೂಜ್ಯರ ಆರಾಧನೆ ಆರಂಭವಾಯಿತು. ಗಂಭೀರ ಶಾರೀರ, ಸಂಪ್ರದಾಯ ಬದ್ಧ ಚೌಕಟ್ಟಿನಲ್ಲಿ ತ್ರಿಮೂರ್ತಿಗಳ ಮತ್ತು ದಾಸವರೇಣ್ಯರ ಕೃತಿಗಳ ಪ್ರಸ್ತುತಿ ಈ ಕಛೇರಿಯ ವಿಶೇಷತೆ. ಸಾವೇರಿ ವರ್ಣದೊಂದಿಗೆ ಕಛೇರಿ ಆರಂಭಿಸಿದ ಕಲಾವಿದ ಸೌರಾಷ್ಟ್ರ ರಾಗದ ಮುತ್ತುಸ್ವಾಮಿ ದೀಕ್ಷಿತರ ಸೂರ್ಯದೇವ ಸ್ತುತಿ ಸೂರ್ಯಮೂರ್ತೆಯನ್ನು ಸ್ವರ ಕಲ್ಪನೆಗಳೊಂದಿಗೆ ಪ್ರಸ್ತುತಪಡಿಸಿದರು. ತ್ಯಾಗರಾಜರ ಕೀರನಾವಳಿ ರಾಗದ ಎಟಿಯೋಚನಾಲು ಸೇಸೆಯನ್ನು ಸೊಗಸಾಗಿ ನಿರೂಪಿಸಿ ತ್ಯಾಗರಾಜರ ಯದುಕುಲಕಾಂಭೋಜಿಯ ಆಲಾಪನೆಯೊಂದಿಗೆ ಹೆಕ್ಕರಿಕಗಾರಾರ ಹೇ ರಾಮಚಂದ್ರವನ್ನು ಹೃದಯಂಗಮವಾಗಿ ನಿರೂಪಿಸಿದರು. ಭಾವ ಪ್ರಧಾನವಾದ ಆಲಾಪನೆಯೊಂದಿಗೆ ತ್ಯಾಗರಾಜರ ಇನ್ನೊಂದು ಕೃತಿ ಶ್ರೀರಂಜನಿಯ ಸೊಗಸುಗಾ ಮೃದಂಗ ತಾಳಮುವನ್ನು ಅಂದವಾದ ಸಂಗತಿಗಳಿಂದ ನಿರೂಪಿಸಿದರು. ಲಘು ಆಲಾಪನೆಯೊಂದಿಗೆ ಪುರಂದರದಾಸರ ರಚನೆ ಪುರ್ವಿಯ ಸ್ನಾನವ ಮಡಿರೊ ಜ್ಞಾನ ತೀರ್ಥದಲಿ ಅನ್ನು ಹಾಡಿದ ಕೃಷ್ಣಪ್ರಸಾದ್ ಪ್ರಧಾನರಾಗವಾಗಿ ತೋಡಿಯ ಶ್ಯಾಮಾ ಶಾಸ್ತ್ರಿಗಳ ಮಂದ್ರಸ್ಥಾಯಿಯ ಸ್ವರಜತಿ ರಚನೆ ರಾವೇ ಹಿಮಗಿರಿ ಕುಮಾರಿ ಕಂಚಿ ಕಾಮಾಕ್ಷಿಯಲ್ಲಿನ ವಿದ್ವತ್‌ಪೂರ್ಣ ಆಲಾಪನೆ, ನೆರವಲ್, ಮನ ಸೆಳೆದ ಸ್ವರ ಮಾಲಿಕೆ ಗಳು ಪ್ರೇಕ್ಷಕರಿಗೆ ಕಲಾವಿದನ ಸಾಧನೆಯ ಪರಿಚಯ ಮಾಡಿಸಿದವು. ಸಿಂಧು ಭೈರವಿಯ ವಾದಿರಾಜರ ರಚನೆ ಗೋವಿಂದ ಗೋಪಾಲದ ಮೂಲಕ ಕಚೇರಿ ಮುಕ್ತಾಯವಾಯಿತು. ಆಯ್ಕೆ ಮಾಡಿಕೊಡ ತ್ರಿಮೂರ್ತಿಗಳ ಕೃತಿಗಳು, ಅವುಗಳ ಪ್ರಸ್ತುತಿ ಘನ ಕಲಾವಿದರನ್ನು ನೆನಪಿಸಿಕೊಳ್ಳುವಂತಿತ್ತು. ಉಜ್ವಲ ಭವಿಷ್ಯ ಹೊಂದಿರುವ ಯುವ ಕಲಾವಿದನ ಸಂಪ್ರದಾಯಬದ್ಧ ಈ ಆರಾಧನೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ವಯಲಿನ್ ಪಕ್ಕವಾದ್ಯದಲ್ಲಿ ವಯಾಲ ರಾಜೇಂದ್ರನ್ ಗಾಯಕನನ್ನು ಉತ್ತಮವಾಗಿ ಅನುಕರಿಸಿದರು. ಪಾಲಕ್ಕಾಡ್ ಕೆ ಜಯಕೃಷ್ಣನ್ ಮೃದಂಗದಲ್ಲಿ ಸಹಕರಿಸಿದರು.
ಅಪರಾಹ್ನದ ಕಛೇರಿಯನ್ನು ನಡೆಸಿಕೊಟ್ಟವರು ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರತಿಭಾನ್ವಿತ ಕಲಾವಿದೆ ಪುತ್ತೂರಿನ ಸುಚಿತ್ರಾ ಹೊಳ್ಳ. ಖಮಾಸ್ ರಾಗದ ಮಾತೆ ಮಲಯಧ್ವಜದ ಮೂಲಕ ಕಛೇರಿ ಆರಂಭಿಸಿ ಲಘು ಆಲಾಪನೆಯೊಂದಿಗೆ ಹಂಸಧ್ವನಿಯ ಗಜವದನಾ ಬೇಡುವೆಯನ್ನು ಸಮರ್ಥವಾಗಿ ನಿರೂಪಿಸಿದರು. ಜನರಂಜನಿಯ ವಿಡಜಾಲವನ್ನು ಮನೋಜ್ಞವಾಗಿ ಪ್ರಸ್ತುತಪಡಿಸಿ ಶ್ರೋತೃಗಳ ಮನಗೆದ್ದರು. ಪ್ರಧಾನ ರಾಗವಾದ ಕಾಮವರ್ಧಿನಿಯ ಶಂಭೋ ಮಹಾದೇವದಲ್ಲಿ ಭಾವಪ್ರಧಾನವಾದ ಆಲಾಪನೆ, ನೆರವಲ್ ಮತ್ತು ಸುಂದರ ಸ್ವರ ಪ್ರಸ್ತಾರಳಿಂದ ತಾನೋರ್ವ ಉತ್ತಮ ಗಾಯಕಿ ಎಂದು ನಿರೂಪಿಸಿದರು. ವಾಗಧೀಶ್ವರಿಯ ರಾಗಂ-ತಾನಂ-ಪಲ್ಲವಿ ವಿಮಲೇ ಕರಕಮಲೇಯನ್ನು ತಿಷ ತ್ರಿಪುಟ ತಾಳ ಮಿಶ್ರ ನಡೆಯಲ್ಲಿ ಪ್ರಸ್ತುತ ಪಡಿಸಿ ತನ್ನ ಸಾಮರ್ಥಯವನ್ನು ರಸಿಕರ ಮುಂದಿಟ್ಟರು. ಗಮಕಕ್ಕೆ ಒತ್ತು ನೀಡಿದ ಸ್ವರ ಕಲ್ಪನೆಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಬೃಂದಾವನ ಸಾರಂಗದ ರಂಗ ಬಂದ ಮತ್ತು ಶಿವರಂಜನಿಯ ತಿಲ್ಲಾನವನ್ನು ಹಾಡಿ ಕಛೇರಿ ಮುಕ್ತಾಯಗೊಳಿಸಿದರು. ಹಾಡುಗಾರಿಕೆಯಲ್ಲಿ ಈಗಾಗಲೇ ಪಳಗಿರುವ ಸುಚಿತ್ರಾ ಅವರು ಇನ್ನಷ್ಟು ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡಲ್ಲಿ ಗಾಯನ ಇನ್ನೂ ಉತ್ತಮವಾಗಿ ಹೊರಹೊಮ್ಮಬಹುದು. ಪಿಟೀಲಿನಲ್ಲಿ ಗಣರಾಜ ಕಾರ್ಲೆ, ಮೃದಂಗದಲ್ಲಿ ಡಾ| ನಾರಾಯಣ ಪ್ರಕಾಶ್ ಮತ್ತು ಮೋರ್ಸಿಂಗನಲ್ಲಿ ಬಾಲಕೃಷ್ಣ ಹೊಸಮನೆ ಸಹಕರಿಸಿದರು.
ಸಂಜೆ ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಮ್ ಅವರು ತಮ್ಮ ಶಿಷ್ಯರೊಂದಿಗೆ ಪಂಚರತ್ನ ಗೋಷ್ಠಿ ಗಾಯನ ನಡೆಸಿಕೊಟ್ಟರು. ದಿನವಿಡೀ ಕಾರ್ಯಕ್ರಮ ಸಂಘಟಿಸಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹರ ಆರಾಧನೆಯನ್ನು ಸೂಕ್ತ ರೀತಿಯಲ್ಲಿ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಸಂಗೀತ ಪರಿಷತ್ ಅಭಿನಂದನಾರ್ಹರು
ಕೃತಿ