ವಿಜಯಪುರ: ಜಿಲ್ಲೆಯ ಅತಿ ಎತ್ತರ ಪ್ರದೇಶವಾದ ತಿಕೋಟಾ ಹೋಬಳಿಗೆ ನೀರಾವರಿ ಸೌಕರ್ಯ ಕಲ್ಪಿಸುವ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಪ್ರಾಯೋಗಿಕ ಚಾಲನೆ ಯಶಸ್ವಿಯಾಗಿದೆ. ಜಲ ಸಂಪನ್ಮೂಲ ಸಚಿವ ಡಾ| ಎಂ.ಬಿ.ಪಾಟೀಲರ ಕನಸಿನ ಕೂಸಾದ ಸದರಿ ಯೋಜನೆಯ ತಿಕೋಟಾ ನೀರು ವಿತರಣಾ ನಾಲೆಯ ಚೆಂಬರ್‌ಗೆ ನೀರು ಹರಿದು ಬಂದಿದ್ದು ರೈತರಲ್ಲಿ ಸಂತಸ ಮನೆ ಮಾಡಿದೆ.
ಕಳೆದ ಒಂದು ವಾರದಿಂದ ಕವಟಗಿ ಜಾಕ್‌ವೆಲ್‌ನಲ್ಲಿ ಪ್ರದೇಶದಲ್ಲೇ ಬೀಡು ಬಿಟ್ಟಿರುವ ಜಲ ಸಂಪನ್ಮೂಲ ಇಲಾಖೆ ಉನ್ನತ ಅಧಿಕಾರಿಗಳ ತಂಡದ ಪರಿಶ್ರಮದಿಂದಾಗಿ ಪರೀಕ್ಷಾರ್ಥ ಪ್ರಯೋಗದ ನೀರು ನಾಲೆಯಲ್ಲಿ ಹರಿಯಲು ಆರಂಭಿಸಿದೆ. ಶುಕ್ರವಾರ ಸಂಜೆ ಕವಟಗಿಯಿಂದ 22 ಕಿ.ಮೀ. ದೂರಕ್ಕೆ ಹರಿದು ಬಂದಿದ್ದ ಕೃಷ್ಣೆ 600 ಅಡಿ ಎತ್ತರದ ಗೋಠೆ ಡೆಲಿವರಿ ಚೆಂಬರ್-1 ತಲುಪಿದ್ದಾಳೆ. ನಂತರ ರಾತ್ರಿ ಏಕ ಕಾಲಕ್ಕೆ ಹೊನವಾಡ ಕೆರೆಗೆ, ತಿಕೋಟಾ ಡೆಲಿವರಿ ಚೆಂಬರ್-2ಗೆ ವಿದ್ಯುತ್ ಸಹಾಯವಿಲ್ಲದೇ ಗುರತ್ವಾರ್ಕಷಣ ಮೂಲಕ ನೀರು ಹರಿಯಲಾರಂಭಿಸಿದೆ. ಹೀಗಾಗಿ ರವಿವಾರ ಬೆಳಗ್ಗೆ 7ಕ್ಕೆ ತಿಕೋಟಾದ ಮುಖ್ಯ ಕಾಲುವೆಯಲ್ಲಿ ನೀರು ಹರಿಯಲು ಆರಂಭಿಸಿದೆ.
ದಶಕದ ಹಿಂದೆ ತಿಕೋಟಾದ ಬಿಎಲ್‌ಡಿಇ ಕಾಲೇಜಿನ ವಸತಿ ನಿಲಯದ ಉದ್ಘಾಟನೆಗೆ ಬಂದಿದ್ದ ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳು ಈ ಭಾಗದ ಭೂಮಿ ಫಲವತ್ತತೆಯಿಂದ ಕೂಡಿದ್ದು ನೀರಿಲ್ಲದೇ ಬರಡಾಗಿದೆ. ಈ ನೆಲಕ್ಕೆ ಒಂದು ಬೊಗಸೆ ನೀರು ಕೊಟ್ಟರೆ, ಈ ಭಾಗ ಅಮೆರಿಕಾದ ಕ್ಯಾಲಿಫೋರ್ನಿಯಾವನ್ನು ಮೀರಿಸುವ ಸಮೃದ್ಧತೆ ನೀಡಲಿದೆ. ಉತ್ಕೃಷ್ಟವಾದ ದ್ರಾಕ್ಷಿ, ದಾಳಿಂಬೆ ಬೆಳೆ ವಿಶ್ವಕ್ಕೆ ರಫ್ತಾಗುವ ಸಾಮರ್ಥ್ಯ ಪಡೆಯಲಿದೆ ಎಂದು ಆಶಯ ವ್ಯಕ್ತಪಡಿಸಿದ್ದರು.
ಸಿದ್ದೇಶ್ವರ ಶ್ರೀಗಳ ಆಶಯ ಈಡೇರಿಸಲು ಮುಂದಾದ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ| ಫ.ಗು. ಹಳಕಟ್ಟಿ ಎಂಜನಿಯರಿಂಗ್ ಕಾಲೇಜಿನಿಂದ ತುಬಚಿ-ಬಬಲೇಶ್ವರ ಯೋಜನೆ ರೂಪಿಸಿದ್ದ ಎಂ.ಬಿ. ಪಾಟೀಲ ಅವರು, ಜಲ ಸಂಪನ್ಮೂಲ ಸಚಿವರಾಗುತ್ತಿದ್ದಂತೆ ಕೃಷ್ಣಾ ನ್ಯಾಯಾಧಿಕರಣದಲ್ಲಿ ರಾಜ್ಯಕ್ಕೆ ಹಂಚಿಕೆಯಾದ ನೀರಿನಲ್ಲಿ 6.4 ಟಿಎಂಸಿ ನೀರೊದಗಿಸಿ, 3500 ಕೋಟಿ ರೂ. ಅನುದಾನದ ಬೃಹತ್ ಯೋಜನೆ ರೂಪಿಸಿದರು.
ಇದರಿಂದ ವಿಜಯಪುರ ಜಿಲ್ಲೆಯ ತಿಕೋಟಾ ಹೋಬಳಿ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಹೋಬಳಿ ಹಾಗೂ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ 5 ಹಳ್ಳಿಗಳ 1.30 ಲಕ್ಷ ಎಕರೆ ಪ್ರದೇಶಕ್ಕೆ ನೀರು ಕಾಣುವ ಭಾಗ್ಯ ಕಂಡಿದೆ. ಯೋಜನೆ ಆರಂಭಗೊಂಡ ಕೇವಲ 2 ವರ್ಷದಲ್ಲಿ ಯೋಜನೆಯ ಪೂರ್ಣ ಕಾಮಗಾಗಿ ಮುಕ್ತಾಯ ಕಂಡು ನಾಲೆಗಳಿಗೆ ನೀರು ಹರಿದಿರುವುದು ನಿಜಕ್ಕೂ ವಿಜಯಪುರ ಜಿಲ್ಲೆಯಲ್ಲಿ ದಾಖಲೆ ಎನಿಸಿದೆ.
ತಿಕೋಟಾ ಭಾಗದಲ್ಲಿ ನಾಲೆಗೆ ನೀರು ಹರಿದು ಬರುತ್ತಲೇ ಹೋಳಿ ಹಬ್ಬದ ಬಣ್ಣದಾಟದಲ್ಲಿ ತೊಡಗಿದ್ದ ರೈತರು, ರೈತರ ಮಕ್ಕಳು ಹರಿಯುವ ಕೃಷ್ಣೆಯಲ್ಲಿ ಮಿಂದೆದ್ದರು. ಬಳಿಕ ಗೋಠೆ, ಹೊನವಾಡ, ತಿಕೋಟಾ ಭಾಗದ ರೈತರು ನಾಲೆ ನೀರಿನಲ್ಲೇ ನಿಂತು ಬಣ್ಣದಾಟವಾಡಿ ಸಂಭ್ರಮಿಸಿದರು.
ಹಲವು ರೈತರು ಫೇಸ್‌ಬುಕ್ ಮೂಲಕ ನೇರ ಪ್ರಸಾರ ಬಿತ್ತರಿಸಿ ಸಂಭ್ರಮ ಹಂಚಿಕೊಂಡರು. ಸ್ಥಳದಲ್ಲಿದ್ದ ಜಲ ಸಂಪನ್ಮೂಲ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರೆ, ಕೆಲವು ರೈತರು ಬೆಂಗಳೂರಿನಲ್ಲಿರುವ ಸಚಿವ ಡಾ| ಎಂ.ಬಿ. ಪಾಟೀಲ ಅವರಿಗೆ ಸ್ಥಳದಿಂದಲೇ ವಿಡಿಯೋ ಕಾಲ್ ಮೂಲಕ ಅಭಿನಂದನೆ ಸಲ್ಲಿಸಿದರು.