ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಪ್ರಯುಕ್ತ ಆಗಸ್ಟ್ 15 ರಂದು ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ತಿರಂಗಾ ನಡಿಗೆಗೆ ಅದ್ಧೂರಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
ರಾಜ್ಯದ ಎಲ್ಲ ಕಡೆಯಿಂದ ತಂಡಗಳಾಗಿ ನಡಿಗೆಯಲ್ಲಿ ಪಾಲ್ಗೊಳ್ಳಲು ಆಗಮಿಸಲಿದ್ದು ಎರಡು ಲಕ್ಷ ಮಂದಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ನೀರಿಕ್ಷೆಯಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶುಕ್ರವಾರ ತಿರಂಗಾ ನಡಿಗೆ ಸಿದ್ಧತಾ ಕಾರ್ಯ ಪರಿಶೀಲಿಸಿ ಮುಖಂಡರ ಜತೆ ಸಮಾಲೋಚನೆ ನಡೆಸಿದರು.
ನಂತರ ಮಾತನಾಡಿದ ಅವರು, ಎರಡು ಲಕ್ಷ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ನ್ಯಾಷನಲ್ ಕಾಲೇಜು ಮೈದಾನದವರೆಗೆ ಮೆರವಣಿಗೆ ನಡೆಸಲಿದ್ದಾರೆ. ರಾಜಧಾನಿಯಲ್ಲಿ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ತಿಳಿಸಿದರು.
ಈಗಾಗಲೇ 62,394 ಮಂದಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ದಿನಕ್ಕೆ 10 ಸಾವಿರ ಮಂದಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ನೋಂದಣಿ ಮಾಡಿಕೊಂಡವರನ್ನು ದೂರವಾಣಿ ಮೂಲಕ ಸಂಪರ್ಕಿಸುತ್ತಿದ್ದೇವೆ. ಅವರಿಗೆ ಕಿಟ್, ರಾಷ್ಟ್ರಧ್ವಜ, ಟೀ ಶರ್ಟ್ ನೀಡುತ್ತಿದ್ದೇವೆ ಎಂದು ಹೇಳಿದ್ದರು.
ಆ.10ರವರೆಗೆ ನೋಂದಣಿ ಮಾಡಿಕೊಂಡಿದ್ದ 42 ಸಾವಿರ ಜನರ ಪೈಕಿ 32 ಸಾವಿರ ಜನ 35 ವರ್ಷಕ್ಕಿಂತ ಕಡಿಮೆ ವಯೋಮಾನದವರು. ಯುವ ಜನರಿಗೆ ಈ ವಿಚಾರ ಮುಟ್ಟಬೇಕು ಎಂಬುದು ನಮ್ಮ ಆಶಯ. ನೋಂದಣಿ ಮಾಡಿಕೊಂಡವರ ಪೈಕಿ ಶೇ.75 ಮಂದಿ ಯುವ ಸಮೂಹವೇ ಆಗಿದೆ ಎಂದು ತಿಳಿಸಿದರು.
ಇದು ಪಕ್ಷಾತೀತ ಕಾರ್ಯಕ್ರಮವಾಗಿದ್ದು, ಎಲ್ಲ ರಾಜಕೀಯ ಪಕ್ಷದ ನಾಯಕರಿಗೂ ಬಹಿರಂಗ ಆಹ್ವಾನ ನೀಡುತ್ತೇನೆ. ಎಲ್ಲ ಕಲಾವಿದರಿಗೆ ಆಹ್ವಾನ ಕಳುಹಿಸಿದ್ದೇವೆ.ಜನರನ್ನು ಕರೆತರಲು ನಾವು ಯಾರಿಗೂ ಟಾರ್ಗೆಟ್ ನೀಡಿಲ್ಲ. ಎಲ್ಲರಿಗೂ ಆಹ್ವಾನ ನೀಡಿದ್ದೇವೆ. ಸ್ವಇಚ್ಛೆಯಿಂದ ಬರುವವರು ಬರಬಹುದು ಎಂದು ತಿಳಿಸಿದರು.