Advertisement

100 ಕೋಟಿ ಡೋಸ್‌: ಪಾರಂಪರಿಕ ತಾಣಗಳಲ್ಲಿ ತ್ರಿವರ್ಣ ಬೆಳಕಿನ ಚಿತ್ತಾರ

11:23 AM Oct 22, 2021 | Team Udayavani |

ಹೊಸದಿಲ್ಲಿ: 100 ಕೋಟಿ ಡೋಸ್‌ಗಳ ಸಾಧನೆ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆಯಡಿ ಬರುವ ಕರ್ನಾಟಕದ ಹಂಪಿ ಸೇರಿದಂತೆ ದೇಶದ 100 ಪಾರಂಪರಿಕ ತಾಣಗಳಲ್ಲಿ ಗುರುವಾರ ರಾತ್ರಿ ತ್ರಿವರ್ಣ ಧ್ವಜದ ಬಣ್ಣಗಳ ದೀಪಾಲಂಕಾರ ಮಾಡಲಾಗಿತ್ತು.

Advertisement

ತ್ರಿವರ್ಣ ದೀಪಾಲಂಕಾರ ಮಾಡಿದ 100 ಸ್ಮಾರಕಗಳಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಾದ ಕೆಂಪು ಕೋಟೆ, ಹುಮಾಯೂನ್ ಸಮಾಧಿ ಮತ್ತು ದೆಹಲಿಯ ಕುತುಬ್ ಮಿನಾರ್, ಉತ್ತರ ಪ್ರದೇಶದ ಆಗ್ರಾ ಕೋಟೆ ಮತ್ತು ಫತೇಪುರ್ ಸಿಕ್ರಿ, ಒಡಿಶಾದ ಕೋನಾರ್ಕ್ ದೇವಾಲಯ, ತಮಿಳುನಾಡಿನ ಮಮಲ್ಲಪುರಂರಥ ದೇವಾಲಯಗಳು, ಗೋವಾದ ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಚರ್ಚ್, ಖಜುರಾಹೋ, ರಾಜಸ್ಥಾನದ ಚಿತ್ತೋರ್ ಮತ್ತು ಕುಂಭಲ್ಗಢ್ ಕೋಟೆಗಳು, ಬಿಹಾರದ ಪ್ರಾಚೀನ ನಳಂದ ವಿಶ್ವವಿದ್ಯಾಲಯದ ಉತ್ಖನನ ಅವಶೇಷಗಳು ಮತ್ತು ಗುಜರಾತಿನ ಧೋಲವೀರ ಮುಂತಾದವು (ಇತ್ತೀಚೆಗೆ ವಿಶ್ವ ಪರಂಪರೆಯ ಸ್ಥಾನಮಾನವನ್ನು ನೀಡಲಾಗಿದೆ) ಸೇರಿವೆ.

ಇದನ್ನೂ ಓದಿ:ಯಾರು ಹೊಣೆ? ಆಟೋ ಬಾಡಿಗೆ 100 ರೂ., ತೆತ್ತ ದಂಡ 6000 ರೂ.: ಆಟೋ ಚಾಲಕನ ನತದೃಷ್ಟ ಕಥೆಯಿದು

ಕೋವಿಡ್ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ಎದುರಿಸಲು ತಮ್ಮ ಕರ್ತ್ಯವ್ಯದ ಎಲ್ಲೆಯನ್ನು ಮೀರಿ ದೇಶಕ್ಕೆ ನೆರವು ನೀಡಿದ ಮತ್ತು ಮಾನವ ಕುಲಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಕೊರೊನಾ ಯೋಧರಾದ ಲಸಿಕೆ ಹಾಕುವವರು, ನೈರ್ಮಲ್ಯ ಸಿಬ್ಬಂದಿ, ಅರೆವೈದ್ಯಕೀಯ ಸಿಬ್ಬಂದಿ, ಸಹಾಯಕ ಕಾರ್ಮಿಕರು, ಪೊಲೀಸ್ ಸಿಬ್ಬಂದಿ ಮುಂತಾದವರಿಗೆ ಕೃತಜ್ಞತೆಯ ಸಂಕೇತವಾಗಿ 100 ಸ್ಮಾರಕಗಳಿಗೆ ತ್ರಿವರ್ಣದ ದೀಪಾಲಂಕಾರ ಮಾಡಲಾಗಿದೆ. ಭಾರತವು 100 ಕೋಟಿ ಲಸಿಕೆ ಹೆಗ್ಗುರುತು ಸಾಧಿಸಿದ ಹಿನ್ನೆಲೆಯಲ್ಲಿ 2021ರ ಅಕ್ಟೋಬರ್ 21ರ ರಾತ್ರಿ ಇಡೀ ಈ ದೀಪಾಲಂಕಾರ ನಡೆಯಿತು.

Advertisement

ವೈರಸ್ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಮತ್ತು ಮೂರನೇ ಅಲೆಯನ್ನು ತಡೆಯುವಲ್ಲಿ ಲಸಿಕೆಯು ಪ್ರಮುಖ ಪಾತ್ರ ವಹಿಸಿದೆ. 100 ಕೋಟಿ ಕೋವಿಡ್ ಲಸಿಕೆ ಡೋಸ್‌ಗಳನ್ನು ನೀಡುವ ಮೂಲಕ ಚೀನಾದ ಬಳಿಕ ಒಂದು ಶತಕೋಟಿ ಡೋಸ್ ಕ್ಲಬ್‌ಗೆ ಸೇರಿದ ಏಕೈಕ ದೇಶವಾಗಿ ಭಾರತ ಹೊರಹೊಮ್ಮಿದೆ.

Advertisement

Udayavani is now on Telegram. Click here to join our channel and stay updated with the latest news.

Next