ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯ ಪೀರನವಾಡಿಯಲ್ಲಿ ಪ್ರತಿಷ್ಠಾಪನೆ ಆಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಕನ್ನಡ ಒಕ್ಕೂಟದ ವತಿಯಿಂದ ಶನಿವಾರ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಬೆಂಗಳೂರಿನಿಂದ ಆಗಮಿಸಿರುವ ಒಕ್ಕೂಟದ ರಾಜ್ಯಾಧ್ಯಕ್ಷ ಪ್ರೀತಮ್ ಕೆ.ಎಸ್. ನೇತೃತ್ವದಲ್ಲಿ ಕಾರ್ಯಕರ್ತರು ರಾಯಣ್ಣನ ಪ್ರತಿಮೆಗೆ ಗೌರವ ಸಲ್ಲಿಸಿದರು. ಸಂಗೊಳ್ಳಿ ರಾಯಣ್ಣ, ವೀರರಾಣಿ ಕಿತ್ತೂರು ಚನ್ನಮ್ಮ ಪರ ಘೋಷಣೆ ಕೂಗಿದರು.
ವಿವಾದ ಮತ್ತು ಗೊಂದಲಗಳ ಮಧ್ಯೆ ಕನ್ನಡ ಸಂಘಟನೆಯವರು ಪ್ರತಿಷ್ಠಾಪಿಸಿರುವ ದೇಶ ಪ್ರೇಮಿ, ಕನ್ನಡದ ಅಸ್ಮಿತೆಯ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಗೌರ ಸಲ್ಲಿಸಿರುವುದು ಹೆಮ್ನೆಯ ವಿಷಯ. ಆಗಸ್ಟ್ 15ರಂದು ರಾಯಣ್ಣನ ಅಭಿಮಾನಿಗಳು ಪ್ರತಿಷ್ಠಾಪನೆ ಮಾಡಿದ ಮೂರ್ತಿಯನ್ನು ತೆರವುಗೊಳಿಸಿದ್ದು ಮಹಾಪುರುಷನಿಗೆ ಅವಮಾನ ಮಾಡಿದಂತಾಗಿತ್ತು. ಮತ್ತೆ ಅದೇ ಸ್ಥಳದಲ್ಲಿ ರಾಯಣ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಗೌರವ ಸಲ್ಲಿಸಲಾಗಿದೆ ಎಂದು ರಾಜ್ಯಾಧ್ಯಕ್ಷ ಪ್ರೀತಮ್ ಕೆ ಎಸ್. ಹೇಳಿದರು.
ಪೀರನವಾಡಿಯಲ್ಲಿ ರಾಯಣ್ಣನ ಮೂರ್ತಿ ಇರುವ ವೃತ್ತಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ಎಂದು ಹೆಸರಿಡಬೇಕು, ಕರವೇ ಕಾರ್ಯಕರ್ತರ ಮೇಲೆ ದಾಖಲಾಗಿರುವ ಕೇಸ್ ವಾಪಸ್ ಪಡೆಯಬೇಕು ಮತ್ತು ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನ ಬೃಹತ್ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ರಾಜ್ಯಾಧ್ಯಕ್ಷ ಪ್ರೀತಮ್ ಕೆ.ಎಸ್. ಆಗ್ರಹಿಸಿದರು.