ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್)ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ವಿಶೇಷ ಗೌರವ ಸಲ್ಲಿಸಲು ಮುಂದಾಗಿದೆ.
ಪುನೀತ್ ರಾಜ್‌ಕುಮಾರ್ ಅಭಿಯನದ ಕೊನೆಯ ಚಿತ್ರ “ಗಂಧದಗುಡಿ’ ಶುಕ್ರವಾರ ಬಿಡುಗಡೆ ಆಗಿದ್ದು ಆ ಹಿನ್ನೆಲೆಯಲ್ಲಿ ಕೆಎಂಎಫ್ ತನ್ನ ಹಾಲಿನ ಪ್ಯಾಕೆಟ್ ಮೇಲೆ ಗಂಧದ ಗುಡಿ ಸಿನಿಮಾದ ಹೆಸರು ಮುದ್ರಿಸಿ ಪ್ರಚಾರ ನೀಡುತ್ತಿದೆ. ಆ ಮೂಲಕ ಅಪ್ಪುಗೆ ವಿಶೇಷ ಗೌರವ ಸಲ್ಲಿಸಿದೆ. ಹಾಲಿನ ಪ್ಯಾಕೆಟ್ ಮೇಲೆ “ಗಂಧದಗುಡಿ – ಜರ್ನಿ ಆಫ್ ಎ ಟ್ರೂ ಹೀರೋ’ ಎಂದು ಆಂಗ್ಲ ಭಾಷೆಯಲ್ಲಿ ಬರೆಯಲಾಗಿದೆ. ಮುಂದಿನ 15 ದಿನಗಳ ಕಾಲ ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಗಂಧದ ಗುಡಿ ಚಿತ್ರದ ಶೀರ್ಷಿಕೆ ಇರಲಿದೆ.
ಈ ಹಿಂದೆ ಪುನೀತ್ ರಾಜ್ ಕುಮಾರ್ ಅವರು ಕೆಎಂಎಫ್ ಉತ್ಪನ್ನಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಹೀಗಾಗಿ ಕೆಎಂಎಫ್ ಈ ಮೂಲಕ ವಿಶೇಷವಾಗಿ ಗೌರವ ಸಲ್ಲಿಸಲು ಮುಂದಾಗಿದೆ ಎಂದು ಕೆಎಂಎಫ್ ನ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಹೇಳಿದ್ದಾರೆ.
ಕೆಎಂಎಫ್ ಉತ್ಪನ್ನಗಳ ಬಗ್ಗೆ ಪುನೀತ್ ಅವರು ವಿಶೇಷವಾದ ಪ್ರೀತಿ ಮತ್ತು ಅಭಿಮಾನ ಹೊಂದಿದ್ದರು. ಆ ಹಿನ್ನೆಲೆಯಲ್ಲಿಯೇ ಅವರು ಕೆಎಂಎಫ್ ಉತ್ಪನ್ನಗಳ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದರು. ಇದೀಗ ಗಂಧದಗುಡಿ ಅವರ ಕೊನೆಯ ಚಿತ್ರವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ನೆನಪಿಸಿಕೊಳ್ಳುವ ಕೆಲಸ ಇದಾಗಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಡಾ.ರಾಜ್‌ಕುಮಾರ್ ಅವರು ಕೂಡ ನಂದಿನಿ ಹಾಲಿನ ಉತ್ಪನ್ನಗಳ ಬಳಕೆಗೆ ಕರೆ ನೀಡಿದ್ದರು. ರೈತರಿಗೆ ಒಳಿತಾಗುವ ಕೆಲಸ ಮಾಡಲು ಹಂಬಲಿಸಿದ್ದರು. ಆ ಬಳಿಕ ಪುನೀತ್ ಅವರು ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿದ್ದರು. ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಹಕಾರದಿಂದಾಗಿ ಈ ಕೆಲಸ ನಡೆದಿದೆ. ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಸಲ್ಲಿಸಲು ಹದಿನೈದು ದಿನ ನಂದಿನಿ ಪ್ಯಾಕೆಟ್‌ಗಳ ಮೇಲೆ ಗಂಧದ ಗುಡಿ ಚಿತ್ರದ ಶೀರ್ಷಿಕೆ ಇರಲಿದೆ ಎಂದು ತಿಳಿಸಿದ್ದಾರೆ.