Advertisement
ಉಡುಪಿಯ ಕಾಪು ಸಮೀಪದ ಉಳಿಯಾರು ಡಾ| ಉಪಾಧ್ಯಾಯರ ಹುಟ್ಟೂರು. ವಿದ್ಯೆ ಮತ್ತು ಆಸಕ್ತಿ ಇವುಗಳ ಆಧಾರದಿಂದ ಅವರು ಸುತ್ತಿದ ಊರು ಹಲವಾರು, ಮಾಡಿದ ವೃತ್ತಿ ವಿವಿಧ ರೂಪದವು, ಗಳಿಸಿಕೊಂಡ ಅನುಭವ ಅಪಾರ. ಎಲ್ಲೇ ವೃತ್ತಿಜೀವನ ನಡೆಸಿದರೂ ಅವರು ಭಾಷಾಭ್ಯಾಸದ ಕ್ಷೇತ್ರದಲ್ಲೇ ದುಡಿದರು. ಅವರ ಸಾಧನೆಗಳಿಗೆಲ್ಲ ಕಿರೀಟ ಪ್ರಾಯವಾದುದು ಅವರ ಪ್ರಧಾನ ಸಂಪಾದಕತ್ವದಲ್ಲಿ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಿಂದ ಪ್ರಕಟಗೊಂಡು ಪ್ರಸಿದ್ಧವಾದ ತುಳು ನಿಘಂಟು.
Related Articles
Advertisement
1979ರಲ್ಲಿ ಉಡುಪಿಯಲ್ಲಿ ತುಳು ನಿಘಂಟು ಯೋಜನೆ ಆರಂಭಗೊಂಡಾಗ. ಪ್ರೊ| ಕು.ಶಿ.ಹರಿದಾಸ ಭಟ್ಟರ ಅಪೇಕ್ಷೆಯಂತೆ ಆ ಯೋಜನೆಗೆ ಸೇರಿದ ಮೇಲೆ ಆ ಕಾರ್ಯವನ್ನು ಪೂರ್ತಿಗೊಳಿಸದೆ ವಿರಾಮ ಬಯಸಲಿಲ್ಲ. ಮುಖ್ಯವಾಗಿ ಕ್ಷೇತ್ರ ಕಾರ್ಯವನ್ನು ಆಧರಿಸಿದ ವಿಶ್ವ ಕೋಶೀಯ ಕ್ರಮದಲ್ಲಿ ರಚಿತವಾದ ತುಳು ಲೆಕ್ಸಿಕನ್ ಎಂಬುದು ಅದಾಗಲೇ ಪ್ರಸಿದ್ಧವಾದ ಮಲೆಯಾಳ ಲೆಕ್ಸಿಕನ್ ಮತ್ತು ತಮಿಳು ಲೆಕ್ಸಿಕನ್‌ಗಳಿಗಿಂತ ತುಂಬ ಮುಂದುವರಿದುದು ಮತ್ತು ಭಾಷಾಜ್ಞಾನ ಸಂಶೋಧನೆಗಳ ದೃಷ್ಟಿಯಿಂದ ಹೆಚ್ಚು ಪ್ರಯೋಜನಕರ ವೆಂದು ವಿದ್ವಾಂಸರಿಂದ ಹೊಗಳಲ್ಪಟ್ಟಿದೆ. ಹತ್ತೂಂಬತ್ತು ವರ್ಷಗಳ ಸತತ ಪ್ರಯತ್ನದಲ್ಲಿ ನಿಘಂಟುವಿನ ಆರು ಸಂಪುಟಗಳು ಹೊರ ಬಂದವು.
ತುಳು ನಿಘಂಟುವಿಗಾಗಿ ಕ್ಷೇತ್ರ ಕಾರ್ಯ ಮಾಡಿದ ಉಪಾಧ್ಯಾಯರು ತುಳುನಾಡಿನ ಜಾನಪದದ ಬಗೆಗೆ ಆಳವಾಗಿ ಅಧ್ಯಯನ ಮಾಡಿದರು. ಭೂತಾರಾಧನೆಯ ಬಗೆಗೆ ಇಂಗ್ಲಿಷಿನಲ್ಲಿ ಕೃತಿ ರಚಿಸಿದರು. ಭಾಷಾ ವಿಜ್ಞಾನ ಗೋಷ್ಠಿಗಳಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಿದರು. ತುಳು ಕಲಿಯುವ ವರಿಗಾಗಿ ತುಳು ಕೈ ಪಿಡಿ ಸಿದ್ಧಪಡಿಸಿದರು. ಸಂಕ್ಷಿಪ್ತ ತುಳು ಕೋಶವೊಂದನ್ನು ರಚಿಸಿದರು. ಇಂಗ್ಲಿಷ್, ಕನ್ನಡಗಳಲ್ಲಿ ಲೇಖನ ವ್ಯವಸಾಯವನ್ನು ಸತತವಾಗಿ ನಡೆಸಿದರು. ಇಷ್ಟೆಲ್ಲ ಅವಿಶ್ರಾಂತವಾದ ದುಡಿಮೆ ಮಾಡಿದ ಉಪಾಧ್ಯಾಯರದ್ದು ಸರಳ ವ್ಯಕ್ತಿತ್ವ. ಅಹಂಕಾರದ ಸೋಂಕೇ ಇಲ್ಲದೆ ನಯವಿನಯವಂತರಾದ ವಿದ್ವಾಂಸ ರವರು.
ಕಾಂತಾವರ ಕನ್ನಡ ಸಂಘವು ನಾಡಿಗೆ ನಮಸ್ಕಾರ ಮಾಲಿಕೆಯಲ್ಲಿ ಅವರ ಬಗೆಗೆ ಪುಸ್ತಕ ಪ್ರಕಟಿಸಿದೆ. ಉಪಾಧ್ಯಾಯ ದಂಪತಿಯ ಅಭಿನಂದನಾಗ್ರಂಥ “ಕೊಪ್ಪರಿಗೆ’ (2013)ಮೊಗಸಾಲೆ ಪ್ರಕಾಶನದಿಂದ ಹೊರಬಂದಿದೆ. ಅವರಿಗೆ ಈ ಗ್ರಂಥದ ಸಮರ್ಪಣೆ ಅಭಿನಂದನೆಯ ದಿನದಂದೇ ಶ್ರೀಮತಿ ಸುಶೀಲಾ ಉಪಾಧ್ಯಾಯರು ಅನಾರೋಗ್ಯ ಪೀಡಿತರಾಗಿ ಅಗಲಿದ ಮೇಲೆ ಒಂಟಿಯಾಗಿ ಜೀವಿಸಿದ ಉಪಾಧ್ಯಾಯರು ಶುಕ್ರವಾರ ನಮ್ಮನ್ನಗಲಿದ್ದಾರೆ. ಸತತ ಅಧ್ಯಯನಶೀಲತೆ ವಿನಯ ಅವರಿಂದ ನಾವು ಕಲಿಯಬೇಕಾದ ಗುಣಗಳು.
– ಡಾ| ಪಾದೆಕಲ್ಲು ವಿಷ್ಣು ಭಟ್ಟ