Advertisement

ನೆರೆಗೆ ನೆಲೆ ಕಳೆದುಕೊಂಡ ಹಾಡಿಗರ ಯಾತನೆ

09:34 PM Aug 15, 2019 | Team Udayavani |

ಹುಣಸೂರು: ಮನೆ-ಗುಡಿಸಲಿನೊಳಗೆ ಚಿಮ್ಮುವ ವಸ್ತಿ(ಶೀತ) ನೀರು, ಮೇಲ್ಛಾವಣಿಯಿಂದ ಸೋರುವ ಮಳೆ ನೀರು, ಶೀತಮಯ ನೆಲದಿಂದ ಮಲಗಲಾಗದೆ ಪರದಾಡುತ್ತಿರುವ ಕಾಡುಕುಡಿಗಳು… ಮಹಾಮಳೆ ಹಾಗೂ ಲಕ್ಷ್ಮೀಣತೀರ್ಥ ನದಿಯ ಪ್ರವಾಹದಿಂದ ಹಾಡಿಗಳಲ್ಲಿ ಇಂತಹ ಹೃದಯವಿದ್ರಾವಕ ದೃಶ್ಯಗಳು ಕಂಡು ಬರುತ್ತಿವೆ.

Advertisement

ನಾಗರಹೊಳೆ ಉದ್ಯಾನ, ಲಕ್ಷ್ಮಣತೀರ್ಥ ನದಿಯಂಚಿನ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ನೇರಳಕುಪ್ಪೆ ಗ್ರಾಪಂನ ಬಿಲ್ಲೇನಹೊಸಹಳ್ಳಿ (ಲಕ್ಷ್ಮಣಪುರ) ಗಿರಿಜನರು ನೆರೆಗೆ ತತ್ತರಿಸಿ ಹೋಗಿದ್ದಾರೆ. ಈ ಹಾಡಿಯಲ್ಲಿ 24 ಕುಟುಂಬಗಳು ವಾಸಿಸುತ್ತಿದ್ದರೆ, ನಾಲ್ಕೈದು ಕುಟುಂಬಗಳು ತಮ್ಮ ಜಮೀನಿನಲ್ಲಿ ಶೆಡ್‌ ನಿರ್ಮಿಸಿಕೊಂಡು ವಾಸಿಸುತ್ತಿದ್ದು, ಪ್ರವಾಹದಿಂದ ಎಲ್ಲಾ ಕುಟುಂಬಗಳ ಬದುಕು ಬೀದಿಗೆ ಬಿದ್ದಿದೆ.

ಮನೆಯೊಳಗೆ ವಸ್ತಿ ನೀರು: ಅಪಾರ ಮಳೆಯಿಂದ ಮನೆಯೊಳಗಿನ ನೆಲದಲ್ಲಿ ಬುಗ್ಗೆಯಂತೆ ನೀರು ಚಿಮ್ಮುತ್ತಿತ್ತು. ಇದೀಗ ನೀರು ಚಿಮ್ಮುವಿಕೆ ಕಡಿಮೆಯಾಗಿದ್ದರೂ ವಸ್ತಿ ಕಡಿಮೆಯಾಗಿಲ್ಲ, ನೆಲವೆಲ್ಲಾ ಶೀತ ಹಿಡಿದಿದೆ. ಮಲಗುವುದು, ಅಡುಗೆ ಮಾಡುವುದು, ಮಕ್ಕಳ ಲಾಲನೆ-ಪಾಲನೆ, ಗರ್ಭಿಣಿ-ಬಾಣಂತಿಯರ ಪಾಡು ಹೇಳತೀರದಾಗಿದೆ. ನೀರು ಇಂಗಿಸಲು ಮನೆಮುಂದೆ ತೆಗೆದಿರುವ ಚಿಕ್ಕ ಹೊಂಡದಲ್ಲಿ ಶೇಖರವಾಗುತ್ತಿದೆ.

ಕೊಚ್ಚಿ ಹೋದ ಗುಡಿಸಲು: ಹಾಡಿಗೆ ಹೊಂದಿಕೊಂಡಂತಿರುವ ತಮ್ಮ ಜಮೀನುಗಳಲ್ಲೇ ನಿರ್ಮಿಸಿಕೊಂಡಿದ್ದ ಶಿವು-ಮಂಗಳ ದಂಪತಿಯ ಮನೆ ಗೋಡೆ ಸಂಪೂರ್ಣ ಕುಸಿದಿದ್ದರೆ, ಇದರ ಸಮೀಪದಲ್ಲೇ ಹಾಡಿಯ ಗೋಪಾಲ, ಹಾಗಲ, ಶಿವಣ್ಣ ನಿರ್ಮಿಸಿಕೊಂಡಿದ್ದ ಗುಡಿಸಲುಗಳು, ಅದರೊಳಗಿದ್ದ ಪಡಿತರ, ಜೋಳ, ಹತ್ತಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದೆ. ಮಧ್ಯರಾತ್ರಿಯೇ ಓಡೋಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಸಂತಸ್ತರಾಗಿರುವ ಇಡೀ ಹಾಡಿಯ ಎಲ್ಲಾ ಕುಟುಂಬಗಳು ಇದೀಗ ಬಿಲ್ಲೇನಹೊಸಹಳ್ಳಿಯ ಪರಿಹಾರ ಕೇಂದ್ರದಲ್ಲಿ ಆಶ್ರಯಪಡೆದಿದ್ದು, ಮುಂದಿನ ಜೀವನ ಹೇಗೆಂಬ ಚಿಂತೆಯಲ್ಲಿದ್ದಾರೆ.

ಶಿಥಿಲಾವಸ್ಥೆಯ ಮನೆಗಳು: ಈ ಹಿಂದೆ ಸರ್ಕಾರ ನಿರ್ಮಿಸಿಕೊಟ್ಟಿರುವ ಮನೆಗಳ ಮೇಲ್ಛಾವಣಿ ಕಿತ್ತು ಹೋಗಿದೆ. ಕಲಾ°ರ್‌ ಶೀಟ್‌ಗಳು ಒಡೆದಿವೆ. ಹಲವರು ಪ್ಲಾಸ್ಟಿಕ್‌ ಹೊದಿಕೆ ಹಾಕಿದ್ದಾರೆ. ಹೀಗಾಗಿ ಮಳೆ ಬಂದರೆ ನೀರು ಮನೆಯೊಳಗೆ ಸುರಿಯುತ್ತಿದ್ದು, ದಿನವಿಡೀ ಮನೆ ಸಂರಕ್ಷಣೆಯಲ್ಲೇ ಇರುವಂತಾಗಿ, ಕೂಲಿ ಕೆಲಸಕ್ಕೆ ಕಲ್ಲು ಬಿದ್ದಿದೆ.

Advertisement

ರಸ್ತೆಯೋ ಕೆಸರು ಗದ್ದೆಯೋ: ಈ ಹಾಡಿಯೊಳಗಿನ ಚರಂಡಿ ಇಲ್ಲದ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಅಸಹ್ಯ ಹುಟ್ಟಿಸುವ ಈ ಕೆಸರು ರಸ್ತೆಯಲ್ಲೇ ಗಿರಿಜನರು ಓಡಾಡುತ್ತಿರುವುದು ಅದರಲ್ಲೂ ಮಕ್ಕಳು ಆಟವಾಡುತ್ತಿರುವ ದೃಶ್ಯ ಎಂಥವರನ್ನೂ ಮರುಗುವಂತೆ ಮಾಡಿದೆ. ಇದರಿಂದ ಹಾಡಿಯ ಮಂದಿಗೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.

ಪ್ರತಿ ಕುಟುಂಬದಲ್ಲೂ ಯಾತನೆ: ಹಾಡಿಯ ಸುರೇಶ್‌ ಮನೆಯೊಂದರಲ್ಲೇ ಮೂರು ಕುಟುಂಬಗಳ ಆರು ಮಕ್ಕಳು ಸೇರಿದಂತೆ ಒಟ್ಟು 13 ಮಂದಿ ವಾಸಿಸುತ್ತಿದ್ದರೆ, ಸರೋಜ ಎಂಬುವವರ ಮನೆಯಲ್ಲಿ ಮೂವರು ಪುಟ್ಟ ಮಕ್ಕಳು ಸೇರಿದಂತೆ 10 ಮಂದಿ ವಾಸವಿದ್ದಾರೆ. ಹೀಗೆ ಎಲ್ಲಾ ಕುಟುಂಬಗಳು ಯೋಗ್ಯವಲ್ಲದ ಮನೆಗಳಲ್ಲಿ ವಾಸಿಸುತ್ತಿದ್ದರೆ ನಿತ್ಯ ಕೂಲಿಯನ್ನೇ ಅವಲಂಬಿಸಿ ಬದುಕಿನ ಬಂಡಿ ಸಾಗಿಸಬೇಕಾದ ಇವರೆಲ್ಲ ಈಗ ಪರಿಹಾರ ಕೇಂದ್ರದಲ್ಲಿದ್ದಾರೆ.

ಹಾಡಿಯ ಮನೆಗಳಲ್ಲಿ ವಾಸಿಸಲು ಆಗುತ್ತಿಲ್ಲ, ಜೀವನ ಸಾಗಿಸುವುದೇ ಕಷ್ಟವಾಗಿದೆ. ಸರ್ಕಾರದ ಯೋಗ್ಯವಾದ ಮನೆ ನಿರ್ಮಿಸಿ, ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಹಾಡಿ ನಿವಾಸಿ ಸುರೇಶ್‌, ರಾಣಿ ಮತ್ತಿತರರು ಆಗ್ರಹಿಸಿದ್ದಾರೆ.

ಹಾಡಿಯ ಹಾನಿಗೊಳಗಾದ ಮನೆಗಳ ದುರಸ್ತಿಗೆ ಸೂಕ್ತ ಪರಿಹಾರ ನೀಡಲಾಗುವುದು. ಇದೀಗ ಸಂತ್ರಸ್ತರಿಗೆ ಪರಿಹಾರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದ್ದು, ಎಲ್ಲಾ ರೀತಿಯ ಪರಿಹಾರ ನೀಡಲಾಗುವುದು.
-ಬಸವರಾಜು. ತಹಶೀಲ್ದಾರ್‌

ಬಲ್ಲೇನಗಳ್ಳಿಯ ಹಾಡಿಯ ಅಗತ್ಯವುಳ್ಳವರಿಗೆ ಹೊಸ ಮನೆ ನಿರ್ಮಿಕೊಡುವ ಹಾಗೂ ಹಾಡಿಯ ರಸ್ತೆ-ಚರಂಡಿ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು.
-ಗಿರೀಶ್‌, ತಾಪಂ ಇಒ

* ಸಂಪತ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next