ಮಡಿಕೇರಿ: ಕೊಡಗು ಜಿಲ್ಲೆಯ ಬುಡಕಟ್ಟು ಕೃಷಿಕರು, ಅರಣ್ಯವಾಸಿಗಳು ಹಾಗೂ ದಲಿತರಿಗೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿ, ಮಡಿಕೇರಿ ತಾಲೂಕು ಬುಡಕಟ್ಟು ಕೃಷಿಕರ ಸಂಘ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಗಾಂಧಿ ಮೈದಾನದಲ್ಲಿ ಗಾಂಧೀ ಮಂಟಪದ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಸರಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಘೋಷಣೆಗಳನ್ನು ಕೂಗಿದರು.
ಈ ಸಂದರ್ಭ ಮಾತನಾಡಿದ ಸಂಘದ ತಾಲ್ಲೂಕು ಅಧ್ಯಕ್ಷ ಕುಡಿಯರ ಮುತ್ತಪ್ಪ, ಜಿಲ್ಲಾಡಳಿತ ಹಾಡಿಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿಲ್ಲ. ಈ ಹಿಂದೆ ಗಿರಿಜನರಿಗೆ ನೀಡುತ್ತಿದ್ದ ಪೌಷ್ಠಿಕ ಆಹಾರದಲ್ಲಿ ಶೇ. ಅರ್ಧದಷ್ಟನ್ನು ಕಡಿತಗೊಳಿಸಲಾಗಿದ್ದು, ಸಿಗುವ ಅರ್ಧ ಪೌಷ್ಠಿಕ ಆಹಾರಗಳೂ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. 94 ಸಿ ಅಡಿಯಲ್ಲಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿ 2 ವರ್ಷ ಕಳೆದರೂ ಅರ್ಜಿಗಳ ಪರಿಶೀಲನೆಯನ್ನೂ ಮಾಡಿಲ್ಲ ಎಂದು ಆರೋಪಿಸಿದರು.
ಗಿರಿಜನರ ಕಾಲೋನಿಗಳಿಗೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಜಿಲ್ಲೆಗೆ 6 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಆದರೆ ಇಲ್ಲಿಯವರೆಗೆ ಒಂದು ಹಾಡಿಯಲ್ಲಿಯೂ ಕಾಮಗಾರಿ ಆರಂಭಿಸಿಲ್ಲ. ಈ ಹಿಂದೆ ಮಾಡಿರುವ ರಸ್ತೆ ಕಾಮಗಾರಿಗಳೂ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಟೀಕಿಸಿದರು.
ಗಾಳಿಬೀಡು, ಸಂಪಾಜೆ, ಜೋಡು ಪಾಲ, ಮದೆನಾಡು, ಬೆಟ್ಟತ್ತೂರು ಮತ್ತಿತರ ಗ್ರಾಮಗಳನ್ನು ಸರಕಾರ ವಾಸಕ್ಕೆ ಯೋಗ್ಯವಲ್ಲದ ಪ್ರದೇಶವೆಂದು ಪರಿಗಣಿಸಿದೆ. ಆದರೆ ಈ ಭಾಗದ ಜನರಿಗೆ ಯೋಗ್ಯ ಇರುವ ಕಡೆ ಮನೆ ಮಂಜೂರು ಮಾಡದೆ ತಾರತಮ್ಯ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಹಾಡಿಗಳಿಗೆ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು, ಬುಡಕಟ್ಟು ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯಲ್ಲಿ ಕಡ್ಡಾಯವಾಗಿ ಉದ್ಯೋಗ ನೀಡಬೇಕು ಸೇರಿದಂತೆ ಎಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ಮುತ್ತಪ್ಪ ಎಚ್ಚರಿಕೆ ನೀಡಿದರು.
ಬುಡಕಟ್ಟು ಕೃಷಿಕರ ಸಂಘದ ಕಾರ್ಯದರ್ಶಿ ಎ.ಕೆ. ಸೋಮಯ್ಯ, ಕಕ್ಕಬ್ಬೆ ಗ್ರಾ. ಪಂ. ಸದಸ್ಯರಾದ ಬೊಜಕ್ಕಿ, ಭಾಗಮಂಡಲ ಲ್ಯಾಮ್ ಸಹಕಾರ ಸಂಘದ ಉಪಾಧ್ಯಕ್ಷರಾದ ಕೆ.ಎಮ್. ಕಾವೇರಮ್ಮ, ಕರ್ನಾಟಕ ಬುಡಕಟ್ಟು ವಿದ್ಯಾರ್ಥಿಗಳ ವೇದಿಕೆಯ ಸಂಚಾಲಕ ಭರತ್ ಚಂದ್ರ ದೇವಯ್ಯ, ಕಕ್ಕಬ್ಬೆ-ಯುವಕಪಾಡಿ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ಕೆ.ಎಂ.ಕಾವೇರಪ್ಪ, ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ರತ್ನಾಕರ, ಕಾರ್ಯದರ್ಶಿ ಕರುಂಬಯ್ಯ, ಕೆ.ಎಂ.ಅಮ್ಮಣ್ಣ, ಅರ್ಜುನ್ ಪಾಲ್ಗೊಂಡಿದ್ದರು.