ನವದೆಹಲಿ: ಕರ್ನಾಟಕ ಸೇರಿದಂತೆ 16 ರಾಜ್ಯಗಳಲ್ಲಿನ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಅರಣ್ಯ ಹಕ್ಕುಗಳ ಕಾಯ್ದೆಯಡಿ ಜನರ
ಹಕ್ಕುಗಳ ಪ್ರಸ್ತಾಪವನ್ನು ಸರ್ಕಾರ ಸೂಕ್ತವಾಗಿ ಕೋರ್ಟ್ ಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾದ್ದರಿಂದ ಕೋರ್ಟ್ ಈ ತೀರ್ಪು ನೀಡಿದೆ ಎನ್ನಲಾಗಿದೆ. ಇದರಿಂದಾಗಿ ದೇಶದಲ್ಲಿನ ಸುಮಾರು 10 ಲಕ್ಷ ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸುವ ಪರಿಸ್ಥಿತಿ ಬಂದೊದಗಿದೆ.
ಫೆಬ್ರವರಿ 13 ರಂದು ಈ ಆದೇಶ ಹೊರಡಿಸಲಾಗಿದ್ದು, ಫೆ. 20 ರಂದು ಲಿಖೀತ ಆದೇಶವನ್ನು ಬಿಡುಗಡೆ ಮಾಡಲಾಗಿದೆ. ಜುಲೈ 27ರ ವರೆಗೆ ಒಕ್ಕಲೆಬ್ಬಿಸಲು ಕಾಲಾವಕಾಶ ನೀಡಿ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ನವೀನ್ ಸಿನ್ಹಾ ಮತ್ತು ಇಂದಿರಾ ಬ್ಯಾನರ್ಜಿ ಈ ಆದೇಶ ಹೊರಡಿಸಿದ್ದಾರೆ.
ಮುಂದಿನ ವಿಚಾರಣೆಯನ್ನು ಕೋರ್ಟ್ ಜುಲೈ 27 ಕ್ಕೆ ನಿಗದಿಸಲಾಗಿದ್ದು, ಅಷ್ಟರೊಳಗೆ ಒಕ್ಕಲೆಬ್ಬಿಸದಿದ್ದರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದೂ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ. ಅರಣ್ಯವಾಸಿಗಳ ಹಕ್ಕುಗಳ ರಕ್ಷಣೆಗಾಗಿ ಅರಣ್ಯ ಹಕ್ಕುಗಳ ಕಾಯ್ದೆಯನ್ನು ಯುಪಿಎ 2006 ರಲ್ಲಿ ಜಾರಿಗೆ ತಂದಿತ್ತು. ಇದರ ವಿರುದ್ಧ ಬೆಂಗಳೂರು ಮೂಲದ ವೈಲ್ಡ್‌ಲೈಫ್ಫ ರ್ಸ್ಡ್ ಸೇರಿದಂತೆ ಹಲವು ಎನ್‌ಜಿಒಗಳು ಕೋರ್ಟ್ ಮೊರೆ ಹೋಗಿದ್ದವು.
ರಾಜ್ಯದಲ್ಲಿ 1.76 ಲಕ್ಷ ಬುಡಕಟ್ಟು ಜನರು ದೇಶಾದ್ಯಂತ 11 ಲಕ್ಷ 27 ಸಾವಿರ ಬುಡಕಟ್ಟು ಜನರಿದ್ದು, ಈ ಪೈಕಿ ಕರ್ನಾಟಕದಲ್ಲಿ ಎರಡನೇ ಅತಿ ಹೆಚ್ಚು ಅಮದರೆ 1.76 ಲಕ್ಷ ಅರಣ್ಯವಾಸಿಗಳಿದ್ದಾರೆ. ಅತಿ ಹೆಚ್ಚು ಅಂದರೆ, 3.54 ಲಕ್ಷ ಜನರು ಮಧ್ಯಪ್ರದೇಶದ ಅರಣ್ಯಗಳಲ್ಲಿ ವಾಸಿಸುತ್ತಿದ್ದಾರೆ. 2002 ರಲ್ಲೂ ಸುಪ್ರೀಂಕೋರ್ಟ್ ಆದೇಶದಿಂದಾಗಿ ಇದೇ ರೀತಿ ಒಕ್ಕಲೆಬ್ಬಿಸುವ ಕಾರ್ಯ ನಡೆದಿತ್ತು. ಆಗ ದೇಶಾದ್ಯಂತ ಸುಮಾರು 30 ಸಾವಿರ ಕುಟುಂಬ ಗಳನ್ನು ಒಕ್ಕಲೆಬ್ಬಿಸಲಾಗಿತ್ತು.