ಇಂದೋರ್: “ನನಗೆ ಅನ್ಯಾಯವಾಗಿದೆ. ಯಾವುದೇ ತಪ್ಪು ಮಾಡದ ನನ್ನನ್ನು ಎರಡು ವರ್ಷ ಜೈಲಿನಲ್ಲಿ ಇರಿಸಿದಕ್ಕಾಗಿ ಹತ್ತು ಸಾವಿರ ಕೋಟಿ ರೂ. ಪರಿಹಾರ ಕೊಡಬೇಕು’. ಹೀಗೆಂದು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿ ನಂತರ ಖುಲಾಸೆಗೊಂಡಿರುವ ವ್ಯಕ್ತಿಯೊಬ್ಬರು ಮಧ್ಯಪ್ರದೇಶ ಸರ್ಕಾರದ ವಿರುದ್ಧ ದಾವೆ ಹೂಡಿದ್ದಾರೆ.
“666 ದಿನಗಳು ಜೈಲಿನಲ್ಲಿ ಇದ್ದ ಕಾರಣ ದೈವಿಕವಾಗಿ ಮಾನವರಿಗೆ ನೀಡಲಾಗಿರುವ ಲೈಂಗಿಕ ಸುಖ ಅನುಭವಿಸುವ ದಿನಗಳು ನಷ್ಟವಾಗಿದೆ. ಜೈಲಿನಲ್ಲಿ ಕಠಿಣ ದಿನಗಳನ್ನು ಅನುವಿಸಿದ್ದೇನೆ. ಹೀಗಾಗಿ 10,006.2 ಕೋಟಿ ರೂ. ಪರಿಕಾರ ಕೊಡಬೇಕು,’ ಎಂದು ಮಧ್ಯಪ್ರದೇಶದ ರತ್ಲಾಂ ಜಿಲ್ಲೆಯ ಬುಡಕಟ್ಟು ಜನಾಂಗದ ಕಾಂತಿಲಾಲ್ ಭೀಲ್(35) ಎಂಬುವವರು ಮನವಿ ಸಲ್ಲಿಸಿದ್ದಾರೆ.
“ಆರು ಜನರಿರುವ ನಮ್ಮ ಕುಟುಂಬದಲ್ಲಿ ಆದಾಯ ತರುವವನು ನಾನೇ ಆಗಿದ್ದೆ. ನಾನು ಜೈಲಿಗೆ ಹೋದ ಕಾರಣ ಕುಟುಂಬ ತೀವ್ರ ಸಂಕಷ್ಟ ಅನುಭವಿಸಿತು. ಜೈಲಿನಲ್ಲಿ ನನಗೆ ಒಳ ಉಡುಪುಗಳು ಒದಗಿಸಲು ಸಹ ನಮ್ಮ ಕುಟುಂಬಕ್ಕೆ ಶಕ್ತವಾಗಿಲ್ಲ. ಸರಿಯಾದ ಬಟ್ಟೆಗಳಿಲ್ಲದೇ ಚಳಿ-ಗಾಳಿಯಲ್ಲಿ ಜೈಲಿನಲ್ಲಿ ಕಠಿಣ ದಿನಗಳನ್ನು ಕಳೆದಿದ್ದೇನೆ,’ ಎಂದು ಕಾಂತಿಲಾಲ್ ವಿವರಿಸಿದ್ದಾರೆ.
“ವಕೀಲರು ಯಾವುದೇ ಹಣ ಪಡೆಯದೇ ಇದುವರೆಗೂ ನನ್ನ ಪರ ವಾದಿಸಿದ್ದಾರೆ. ಈಗ ಅವರಿಗೆ ಶುಲ್ಕ ನೀಡಬೇಕಿದೆ. ನನ್ನ ವಿರುದ್ಧ ಸುಳ್ಳು ಮತ್ತು ಮಾನಹಾನಕಾರಿ ಆರೋಪಗಳಿಂದ ನನ್ನ ಮತ್ತು ಕುಟುಂಬದ ಬದುಕು ಮತ್ತು ವೃತ್ತಿಜೀವನ ಹಾಳಾಗಿದೆ. ನಿರಪರಾಧಿಯಾದ ನನ್ನನ್ನು ಜೈಲಿನಲ್ಲಿ ಇರಿಸಿದ್ದಕ್ಕಾಗಿ ಪರಿಹಾರ ನೀಡಬೇಕಿದೆ,’ ಎಂದು ಕೋರಿದ್ದಾರೆ.
ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣವೊಂದರಲ್ಲಿ 2018ರ ಜು.20ರಂದು ಕಾಂತಿಲಾಲ್ ವಿರುದ್ಧ ಪ್ರಕರಣ ದಾಖಲಾಗಿತ್ತು.