ಮಂಡ್ಯ ಜಿಲ್ಲೆಯ ಜೀವನಾಡಿಯಾಗಿರುವ ಕೃಷ್ಣರಾಜ ಸಾಗರ ಜಲಾಶಯದ ಸುತ್ತಮುತ್ತ ಗಣಿಗಾರಿಕೆ ನಡೆಸ ಬೇಕೋ, ಬೇಡವೋ ಎಂಬುದನ್ನು ನಿರ್ಧರಿಸಲು ಸರಕಾರ ಹಾಗೂ ಜಿಲ್ಲಾಡಳಿತ ಪ್ರಾಯೋಗಿಕ ಸ್ಫೋಟ ನಡೆಸಲು ಮುಂದಾಗಿದೆ. ಆದರೆ ಇದಕ್ಕೆ ರೈತಸಂಘ ತೀವ್ರ ವಿರೋಧ ವ್ಯಕ್ತಪಡಿಸಿದರೆ, ಗಣಿ ಮಾಲೀಕರು ಟ್ರಯಲ್ ಬ್ಲಾಸ್ಟ್ ಪರ ಬ್ಯಾಟಿಂಗ್ ಬೀಸುತ್ತಿದ್ದಾರೆ.
2018ರ ಸೆ.25ರಂದು ಕೆಆರ್‌ಎಸ್ ಜಲಾಶಯದ ಬಳಿ ಭಾರೀ ಸ್ಫೋಟದ ಸದ್ದು ಕೇಳಿ ಬಂದಿತ್ತು. ಸ್ಫೋಟದ ತೀವ್ರತೆ ಜಲಾಶಯದ ಬಳಿ ಇರುವ ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು. ಇದರ ಪರಿಶೀಲನೆ ನಡೆಸಿದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ಜಲಾಶಯದ 20 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗಣಿಗಾರಿಕೆ ನಡೆಸಬಾರದು. ಜಲಾ ಶಯಕ್ಕೆ ಸ್ಫೋಟಗಳಿಂದ ಅಪಾಯ ಎದುರಾಗಬಹುದು ಎಂದು ವರದಿಯಲ್ಲಿ ತಿಳಿಸಿತ್ತು. ಇದರಿಂದ ಜಿಲ್ಲಾಡಳಿತ ಅಂದಿನಿಂದ ತಾತ್ಕಾಲಿಕವಾಗಿ ಗಣಿಗಾರಿಕೆ ಮೇಲೆ ನಿಷೇಧ ಹೇರಿತ್ತು.
ನಿಷೇಧ ಹೇರಿದ ವಿರುದ್ಧ ಗಣಿ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಜತೆಗೆ ಸರಕಾರದ ಮೇಲೆ ಒತ್ತಡ ತಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ವರದಿ ವೈಜ್ಞಾನಿಕವಾಗಿಲ್ಲ. ಆದ್ದರಿಂದ ವಿಜ್ಞಾನಿಗಳಿಂದ ಕೆಆರ್‌ಎಸ್ ಬಳಿ ಪ್ರಾಯೋಗಿಕ ಸ್ಫೋಟ ನಡೆಸಿ ವೈಜ್ಞಾನಿಕ ವರದಿ ನೀಡಬೇಕು ಎಂದು ಆಗ್ರಹಿಸಿದ್ದರು. ಆ ಹಿನ್ನೆಲೆಯಲ್ಲಿ 2019ರಲ್ಲಿ ವಿಜ್ಞಾನಿಗಳ ತಂಡ ಟ್ರಯಲ್ ಬ್ಲಾಸ್ಟ್ ನಡೆಸಲು ಮುಂದಾದಾಗ ರೈತ ಸಂಘದ ಕಾರ್ಯಕರ್ತರು ತಡೆದು ವಾಪಸ್ ಕಳುಹಿಸಿದ್ದರು.
ಈಗ ಹೈಕೋರ್ಟ್ ಗಣಿಗಾರಿಕೆಗೆ ಹೇರಿದ್ದ ನಿಷೇಧವನ್ನು ತೆರವುಗೊಳಿಸಿದೆ. ಆದರೆ, ಗಣಿಗಾರಿಕೆಗೆ ಅವಕಾಶ ನೀಡಿಲ್ಲ. ಆದ್ದರಿಂದ ಗಣಿ ಮಾಲೀಕರು ಸರಕಾರದ ಮೇಲೆ ಗಣಿಗಾರಿಕೆಗೆ ಅವಕಾಶ ನೀಡಲು ಟ್ರಯಲ್ ಬ್ಲಾಸ್ಟ್ ನಡೆಸುವಂತೆ ಒತ್ತಡ ತಂದಿದ್ದರು. ಇದರಲ್ಲಿ ರಾಜಕೀಯ ಪ್ರಭಾವವೂ ಇದೆ. ಗಣಿಗಾರಿಕೆ ನಿಷೇಧ ಮಾಡುವಂತೆ ಹೋರಾಟ ನಡೆಸಿದ್ದ ಸಂಸದೆ ಸುಮಲತಾ ಕೂಡ ಟ್ರಯಲ್ ಬ್ಲಾಸ್ಟ್ ನಡೆಸುವಂತೆ ಒತ್ತಡ ಹಾಕಿದ್ದಾರೆ. ಅದರಂತೆ ಸೋಮವಾರ ಕೆಆರ್‌ಎಸ್ ಜಲಾಶಯದ ಬಳಿ ಹಾಗೂ ಬೇಬಿಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು ಜಾರ್ಖಂಡ್ ಮೂಲದ ವಿಜ್ಞಾನಿಗಳ ತಂಡ ಆಗಮಿಸಿ ಸರ್ವೆ ಕಾರ್ಯ ನಡೆಸಲು ಮುಂದಾದಾಗ ರೈತಸಂಘದ ಕಾರ್ಯಕರ್ತರು ತಡೆಯೊಡ್ಡಿದ್ದಾರೆ.
ಈ ಸಂದರ್ಭದಲ್ಲಿ ರೈತಸಂಘ ಹಾಗೂ ಗಣಿ ಮಾಲೀಕರ ನಡುವೆ ಮಾತಿನ ಚಕಮಕಿ, ಕೈ ಕೈ ಮಿಲಾಯಿಸುವ ಘಟನೆಗಳು ನಡೆದಿದೆ. ಕೆಆರ್‌ಎಸ್ ಜಲಾಶಯ ನಿರ್ಮಾಣಗೊಂಡು 80 ವರ್ಷಗಳೇ ಕಳೆಯುತ್ತಿದೆ. ಕೆಆರ್‌ಎಸ್ ನಿರ್ಮಾಣ ಮಾಡಲು ಗಾರೆ, ಸುಣ್ಣದ ಚುರ್ಕಿ, ಚಪ್ಪಡಿ ಕಲ್ಲು ಬಳಕೆ ಮಾಡಲಾಗಿದೆ. ಚಪ್ಪಡಿ ಕಲ್ಲುಗಳು ಒಂದಕ್ಕೊಂದು ಸಂಪರ್ಕ ಇರುವುದರಿಂದ ಗಣಿಗಾರಿಕೆ ನಡೆಸಿದರೆ ಜಲಾಶಯಕ್ಕೆ ಅಪಾಯವಾಗಲಿದೆ. ಅಲ್ಲದೆ, ಪ್ರಸ್ತುತ ಜಲಾಶಯ ತುಂಬಿರುವ ಸಂದರ್ಭದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಿದರೆ, ಜಲಾಶಯಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಇದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಆದರೆ ಜಿಲ್ಲಾಡಳಿತ ಹೇಳುವುದೇ ಬೇರೆ, ಹೈಕೋರ್ಟ್ ಗಣಿಗಾರಿಕೆ ನಿಷೇಧ ತೆರವುಗೊಳಿಸಿದೆ. ಆದ್ದರಿಂದ ಟ್ರಯಲ್ ಬ್ಲಾಸ್ಟ್ ನಡೆಸುವಂತೆ ಸೂಚಿಸಿದೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಒಪ್ಪದ ರೈತಸಂಘ ಹೈಕೋರ್ಟ್ ಆದೇಶದ ಪ್ರತಿ ನಮಗೆ ಕೊಡಿ, ಒಂದು ವಾರದ ಕಾಲಾವಕಾಶದೊಳಗೆ ಅದನ್ನು ತಜ್ಞರ ಬಳಿ ಚರ್ಚೆ ನಡೆಸಿ ತೀರ್ಪಿನ ಬಗ್ಗೆ ನಾವೂ ತಿಳಿದುಕೊಳ್ಳುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.
ಒಟ್ಟಾರೆ ಕೆಆರ್‌ಎಸ್ ಜಲಾಶಯದ ಸುತ್ತಮುತ್ತ ಗಣಿಗಾರಿಕೆ ನಡೆಸಬೇಕೋ, ಬೇಡವೋ ಎಂಬುದನ್ನು ತಿಳಿದುಕೊಳ್ಳಲು ಪ್ರಾಯೋಗಿಕ ಸ್ಫೋಟ ನಡೆಸುವ ಎರಡನೇ ಪ್ರಯತ್ನವೂ ವಿಫಲವಾಗಿದೆ.
ಪ್ರಮೋದಾದೇವಿ ಎಂಟ್ರಿ
ಒಂದೆಡೆ ರೈತಸಂಘದ ಕಾರ್ಯಕರ್ತರು ಸೋಮವಾರ ರಾತ್ರಿ ಜಿಲ್ಲಾ ಧಿಕಾರಿ ಕಚೇರಿ ಒಳಗೆಯೇ ಅಹೋರಾತ್ರಿ ಧರಣಿ ನಡೆಸಿದರೆ, ಮತ್ತೂಂದೆಡೆ ಮೈಸೂರಿನ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು, ಟ್ರಯಲ್ ಬ್ಲಾಸ್ಟ್ ನಡೆಸದಂತೆ ತಮ್ಮ ವಕೀಲರ ಮೂಲಕ ಆಕ್ಷೇಪಣೆ ಪತ್ರ ಸಲ್ಲಿಸಿದ್ದಾರೆ. ಸರ್ವೆ ನಂ 1ರ ಬೇಬಿಬೆಟ್ಟದ ಅಮೃತ್ ಮಹಲ್ ಕಾವಲ್‌ನ ಗಣಿಗಾರಿಕೆ ಸ್ಥಳಗಳಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು ಜಿಲ್ಲಾಡಳಿತ ಮುಂದಾಗಿತ್ತು. ಇದರ ವಿರುದ್ಧ ಆಕ್ಷೇಪಣೆ ಅರ್ಜಿ ಸಲ್ಲಿಸಿರುವ ಪ್ರಮೋದಾದೇವಿ ಒಡೆಯರ್ ಅವರು, ಸರ್ವೆ ನಂ 1 ನಮ್ಮ ರಾಜಮನೆತನಕ್ಕೆ ಸೇರಿದ ಜಮೀನಾಗಿದೆ. ಇಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು ನಮ್ಮ ಅನುಮತಿ ಪಡೆದಿಲ್ಲ. ಒಂದು ವೇಳೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
– ಎಚ್.ಶಿವರಾಜು