ಬೆಂಗಳೂರು: ಸಾಮಾಜಿಕ ಜಾಲತಾಣ ಯುಟ್ಯೂಬ್ ನಲ್ಲಿ ವೀಕ್ಷಕರನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಮೂಲಕ ಒಳ ಪ್ರವೇಶಿ ರನ್‌ವೇ ಹಾಗೂ ಏರ್‌ಪೋರ್ಟ್‌ನ ವಿವಿಧೆಡೆ ವಿಡಿಯೋ ಮಾಡಿ ಭದ್ರತೆ ಚ್ಯುತಿ ತಂದಿದ್ದ ಯುಟ್ಯೂಬರ್‌ನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ.
ಯಲಹಂಕ ನಿವಾಸಿ ವಿಕಾಸ್‌ಗೌಡ (34) ಬಂಧಿತ ಯುಟ್ಯೂಬರ್.
ಆತನಿಂದ ಕ್ಯಾಮೆರಾ ಹಾಗೂ ವಿಡಿಯೋಗೆ ಬಳಸಿಕೊಂಡಿದ್ದ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನಿಂದ ಚೆನ್ನೈಗೆ ತೆರಳಲು ವಿಮಾನದ ಟಿಕೆಟ್ ಪಡೆದುಕೊಂಡಿದ್ದ ವಿಕಾಸ್‌ಗೌಡ, ಏ.7ರಂದು ಮಧ್ಯಾಹ್ನ 12.06ಕ್ಕೆ ವಿಮಾನ ನಿಲ್ದಾಣದ ಟರ್ಮಿನಲ್ -2ನಲ್ಲಿ ಸೆಕ್ಯೂರಿಟಿ ಚೆಕ್ ಮುಗಿಸಿಕೊಂಡು ಒಳ ಪ್ರವೇಶಿಸಿದ್ದಾನೆ.
ಬಳಿಕ ವಿಮಾನ ನಿಲ್ದಾಣದಲ್ಲಿ ವಿಡಿಯೋ ಶೂಟಿಂಗ್ ಮಾಡುವ ಉದ್ದೇಶದಿಂದ ಬೋರ್ಡಿಂಗ್ ಆಗದೇ ವಿಮಾನ ನಿಲ್ದಾಣದ ರನ್ ವೇ ಹಾಗೂ ವಿವಿಧೆಡೆ ಅತಿಕ್ರಮ ಪ್ರವೇಶ ಮಾಡಿ ಮೊಬೈಲ್ ಮೂಲಕ ವಿಡಿಯೋ ಮಾಡಿದ್ದಾನೆ. ವಿಡಿಯೋ ಮಾಡುವಾಗ ಲೈವ್‌ನಲ್ಲಿ ಒಂದು ದಿನ ವಿಮಾನ ನಿಲ್ದಾಣದಲ್ಲಿಯೇ ಇರುವುದಾಗಿ ಸಾರ್ವಜನಿ ಕರಿಗೆ ಸುಳ್ಳು ಹೇಳಿದ್ದ. ಈ ಮೂಲಕ ಸಾರ್ವಜನಿಕರಲ್ಲಿ ವಿಮಾನ ನಿಲ್ದಾಣದಲ್ಲಿ ಭದ್ರತೆ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಿದ್ದ.
ಈ ವಿಡಿಯೋವನ್ನು ಆರೋಪಿ ಏ.12ರಂದು ತನ್ನ @vikasgowda1 ಎಂಬ ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಅದನ್ನು ಗಮನಿಸಿದ ಏರ್‌ಪೋರ್ಟ್‌ನ ಸಿಐಎಸ್‌ಎಫ್ ಅಧಿಕಾರಿ ಮುರಳಿ ಲಾಲ್ ಮೀನಾ ಎಂಬುವರು ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಈ ಕುರಿತು ಮಾಹಿತಿ ನೀಡಿದ ಈಶಾನ್ಯವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್, ಏರ್‌ಪೋರ್ಟ್‌ನಲ್ಲಿ ವಿಡಿಯೋ ಮಾಡುವುದು ಅಪರಾಧ. ಒಂದು ವೇಳೆ ವಿಡಿಯೋ ಮಾಡಲು ನಿಲ್ದಾಣದ ಅಥಾರಿಟಿ ಅನುಮತಿ ಪಡೆಯ ಬೇಕು. ಟೆಕೆಟ್ ಪಡೆದುಕೊಂಡು ನಿಲ್ದಾಣ ಪ್ರವೇಶಿಸಿದ ಆರೋಪಿ, ನಿಲ್ದಾಣದ ಎಲ್ಲೆಡೆ ವಿಡಿಯೋ ಮಾಡುತ್ತ ಒಂದು ದಿನ ನಿಲ್ದಾಣದಲ್ಲಿ ಇದ್ದೆ ಎಂದು ಸುಳ್ಳು ಹೇಳಿದ್ದಾನೆ. ಇದು ನಿಲ್ದಾಣದ ಭದ್ರತೆಯ ಪ್ರಶ್ನೆಯಾಗುತ್ತದೆ. ಹೀಗಾಗಿ ಆರೋಪಿಯನ್ನು ಬಂಧಿಸಲಾಗಿದೆ. ಇನ್ನು ವಿಡಿಯೋವನ್ನು ತನ್ನ ಪ್ರಚಾರಕ್ಕೆ ಮಾಡಿಕೊಂಡಿದ್ದನಾ ಅಥವಾ ಬೇರೆ ಉದ್ದೇಶಕ್ಕೆ ಬಳಸಿಕೊಂಡಿದ್ದಾನೆಯೇ ಎಂಬ ಬಗ್ಗೆ ವಿಚಾರಣೆ ನಡೆಯ್ತುತಿದೆ. ಸದ್ಯ ಆರೋಪಿ ವಿಡಿಯೋವನ್ನು ಯುಟ್ಯೂಬ್‌ನಿಂದ ಡಿಲೀಟ್ ಮಾಡಿದ್ದಾನೆ. ಹೀಗಾಗಿ ಯುಟ್ಯೂಬ್‌ಗ ಪತ್ರದ ಮೂಲದ ಆರೋಪಿ ಡಿಲೀಟ್ ಮಾಡಿರುವ ವಿಡಿಯೋ ನೀಡುವಂತೆ ಕೋರಲಾಗಿದೆ ಎಂದು ಹೇಳಿದರು.