ಅಫಜಲಪುರ: ಭೀಮಾ ನದಿ ಪಾತ್ರದಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮ ಮರಳು ದಂಧೆ ನಡೆದಿದೆ ಎಂಬ ಖಚಿತ ಮಾಹಿತಿ ಆಧಾರದ ಮೇಲೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ನೇತೃತ್ವದ ತಂಡ ರವಿವಾರ ದಾಳಿ ಮಾಡಿದ್ದು, ಅಕ್ರಮ ಮರಳು ಸಂಗ್ರಹಕ್ಕೆ ಅನುಕೂಲ ಮಾಡಿಕೊಟ್ಟ ರೈತರ ಜಮೀನುಗಳನ್ನು ಮುಟ್ಟುಗೋಲು ಹಾಕುವುದಾಗಿ ಹೇಳಿದ್ದಾರೆ.
ತಾಲೂಕಿನ ಬಂದರವಾಡ ನದಿ ಪಾತ್ರ, ಶೇಷಗಿರಿವಾಡಿ ಹಾಗೂ ಮಣೂರಿನಲ್ಲಿ ಅಕ್ರಮ ಮರಳು ಸಂಗ್ರಹಿಸಿದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಅಕ್ರಮ ಮರಳು ದಂಧೆ ವಿಶಾಲವಾಗಿ ಬೆಳೆದಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ನಿಟ್ಟಿನಲ್ಲಿ ದಾಳಿ ಮಾಡಲಾಗಿದೆ. ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ನದಿಯಿಂದ ಮರಳನ್ನು ಎತ್ತಿ ರೈತರ ಹೊಲಗಳಲ್ಲಿ ಸಂಗ್ರಹಿಸಲಾಗಿದೆ.
ರೈತರು ಅಕ್ರಮ ಮರಳು ಸಂಗ್ರಹಿಸಲು ಹೊಲಗಳನ್ನು ಬಿಟ್ಟು ಕೊಟ್ಟ ತಪ್ಪಿಗೆ ಅವರ ಹೊಲಗಳನ್ನು ಸರ್ಕಾರದ ಸುಪರ್ದಿಗೆ ಪಡೆಯಲಾಗುತ್ತಿದೆ. ಅಲ್ಲದೆ ಮರಳು ವಾಹನಗಳು ಹೋಗಲು ದಾರಿ ಮಾಡಿಕೊಟ್ಟ ರೈತರ ಹೊಲಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಚಿಂತಿಸಲಾಗಿದೆ. ಅಕ್ರಮ ದಂಧೆ ನಡೆಸುವವರಿಗಂತೂ ಭಾರಿ ಶಿಕ್ಷೆಕಾದಿದೆ. ಅಕ್ರಮ ಮರಳು ದಂಧೆಯಲ್ಲಿ ಯಾವುದೇ ಇಲಾಖೆ ಅಧಿಕಾರಿಗಳು ಸಹ ಶಾಮಿಲಾಗಿದ್ದರೆ ಅಂತವರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಬಂದರವಾಡ ಗ್ರಾಮದಲ್ಲಿ ಭೀಮಾ ನದಿಯಲ್ಲಿಯೇ ಮೂರು ಕಡೆಯಲ್ಲಿ
ಮರಳಿನ ರಾಶಿ ಹಾಕಲಾಗಿದೆ.
ಮಣ್ಣೂರ ಗ್ರಾಮದಲ್ಲಂತೂ ಒಟ್ಟು 13 ಸರ್ವೆ ನಂಬರಿನ ಹೊಲಗಳಲ್ಲಿ ಅಂದಾಜು 2500 ಮೆಟ್ರಿಕ್ ಟನ್ ಮರಳು
ಸಂಗ್ರಹಿಸಿಡ ಲಾಗಿದೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಅಕ್ರಮ ಮರಳು ದಂಧೆ ತಡೆಯಲು ಕಂದಾಯ,
ಪೊಲೀಸ್, ಜಿಲ್ಲಾ ಧಿಕಾರಿಗಳ ಇಲಾಖೆ ಜಂಟಿಯಾಗಿ ತಂಡ ರಚನೆ ಮಾಡಲಾಗುತ್ತಿದೆ. ಯಾವುದೇ ಅಕ್ರಮಕ್ಕೆ ಆಸ್ಪದ ನೀಡದೆ ನದಿ ಪಾತ್ರ ಉಳಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.
ಎಸ್‌ಪಿ ಎನ್. ಶಶಿಕುಮಾರ, ಸಹಾಯಕ ಆಯುಕ್ತ ಉಮೇಶಚಂದ್ರ, ತಹಶೀಲ್ದಾರ್ ಇಸ್ಮಾಯಿಲ್ ಮುಲ್ಕಿಸಿಪಾಯಿ, ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್‌ಐಗಳಾದ ಸಂತೋಷ ರಾಠೊಡ, ಎಸ್.ಎಸ್. ದೊಡ್ಮನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಿಜ್ಞಾನಿಗಳಾದ ಚೊಕ್ಕಾ ರೆಡ್ಡಿ, ಶಬ್ಬಿರ್ ಹಾಗೂ ಅಧಿಕಾರಿ ರಾಜು ಗೋಪಣೆ ಇದ್ದರು.