Advertisement
ಚಾರಣ ಪ್ರಿಯರ ಸ್ವರ್ಗ ಮಂಜೊಟ್ಟಿ ಎಂಬ ಪ್ರದೇಶದಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿರುವ ಗಡಾಯಿಕಲ್ಲಿನ ಬುಡಕ್ಕೆ ಬಂದು ತಲುಪಿದಾಗ ಸೂರ್ಯ ನೆತ್ತಿ ಮೇಲೆ ಇದ್ದ. ಅಲ್ಲಿದ್ದ ವಿಶಿಷ್ಟ ಶೈಲಿಯ ಸ್ವಾಗತ ಗೋಪುರ ನಮ್ಮನ್ನು ಕೈ ಮುಗಿದು ಸ್ವಾಗತಿಸುತ್ತಿರುವಂತೆ ಭಾಸವಾಗುತ್ತಿತ್ತು. ಈ ಶಿಲಾ ಪರ್ವತದ ವಿಶೇಷತೆಯೇನೆಂದರೆ, ಇದು ಪ್ರತೀ ದಿಕ್ಕಿನಲ್ಲೂ ವಿಭಿನ್ನ ಆಕಾರದಲ್ಲಿ ಗೋಚರಿಸುತ್ತದೆ!!
Related Articles
Advertisement
ಮುಂದುವರಿದು ಹೋದಂತೆ ಕಡಿದಾದ ಹಾದಿಗಳು ನಿಜವಾದ ಚಾರಣಿಗನಿಗೆ ಕಠಿನ ಪರೀಕ್ಷೆ ಒಡ್ಡುತ್ತವೆ. ಮಳೆಗಾಲದಲ್ಲಿ ಈ ಮೆಟ್ಟಿಲುಗಳು ಜಾರುವುದರಿಂದ ತೀರಾ ಎಚ್ಚರಿಕೆ ಅಗತ್ಯ. ಕೊನೆಯ ಘಟ್ಟದಲ್ಲಿ ಕೋಟೆಯ ಪ್ರವೇಶ ದ್ವಾರವು ನಮಗೆ ವಿರಮಿಸಲು ಪ್ರಶಸ್ತ ಸ್ಥಳವಾಗಿ ಕಂಡಿತು.
ಈ ಅಂತಿಮ ಹಂತವನ್ನು ದಾಟಿದ ಅನಂತರ ನಮಗೆ ನಿಜಕ್ಕೂ ಅದ್ಭುತ ಲೋಕದ ದರ್ಶನವಾಯಿತು.ಮೇಲೆ ಬೀಸುತ್ತಿದ್ದ ತಂಗಾಳಿ ಅಷ್ಟೂ ಆಯಾಸ ತೊಡೆದುಹಾಕಿತು. ಬೆಟ್ಟದ ಅಂಚಿಗೆ ಬಂದಾಗ ಸುತ್ತಲಿನ ಕುದುರೆಮುಖ ಪರ್ವತ ಶ್ರೇಣಿ ಹಾಗೂ ಆಸುಪಾಸಿನ ದೃಶ್ಯಾವಳಿಗಳನ್ನು ನೋಡಿದ ನಮಗೆ ಭೂಮಿ ತಾಯಿಯೇ ಹಸುರು ಹೊದ್ದು ನಿಂತಂತೆ ಭಾಸವಾಗುತ್ತಿತ್ತು! ಗಡಾಯಿಕಲ್ಲಿನ ಮೇಲೆ ಟಿಪ್ಪುವಿನ ಕಾಲದ ಕೋಟೆ, ಶಸ್ತ್ರಾಸ್ತ್ರ ಸಂಗ್ರಹ ಕೊಠಡಿ ಹಾಗೂ ಕೆರೆ ಗಮನ ಸೆಳೆಯುವಂತಿದ್ದು, ಅಲ್ಲಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡೆವು. ಜತೆಗೆ, ಕಡಿದಾದ ಬೃಹತ್ ಕಲ್ಲಿನ ಅಂಚು ರುದ್ರ ರಮಣೀಯವಾಗಿ ಗೋಚರಿಸುತ್ತದೆ. ಇಲ್ಲಿ ತರಹೇವಾರಿ ಫೋಟೋ ಕ್ಲಿಕ್ಕಿಸಿಕೊಂಡ ನಾವು, ನೂರಾರು ನೆನಪುಗಳೊಂದಿಗೆ ಮರಳಿ ಗೂಡು ಸೇರಿದೆವು. ▷ ಮಂಗಳೂರಿನಿಂದ 66 ಕಿ.ಮೀ.
▷ ಬೆಳ್ತಂಗಡಿಯಿಂದ 8 ಕಿ.ಮೀ.
▷ ಸ್ವಂತ ವಾಹನ ಅಥವಾ ಬಸ್ ಮೂಲಕ ತೆರಳಬಹುದು.
▷ ಅರಣ್ಯ ಪ್ರದೇಶವಾದ್ದರಿಂದ ಹತ್ತಿರದಲ್ಲಿ ಊಟ- ವಸತಿ ವ್ಯವಸ್ಥೆಯಿಲ್ಲ.
▷ ಮಳೆಗಾಲದಲ್ಲಿ ಕಲ್ಲು ಜಾರುವುದರಿಂದ ತೀರಾ ಜಾಗರೂಕರಾಗಿರುವುದು ಅಗತ್ಯ.
▷ ರಾತ್ರಿ ಕ್ಯಾಂಪ್ ಮಾಡಲು ಅವಕಾಶವಿಲ್ಲ. ಜತೆಗೆ ಫೈರ್ ಕ್ಯಾಂಪ್ ಅಥವಾ ಬೆಂಕಿ ಉರಿಸುವುದನ್ನು ನಿಷೇಧಿಸಲಾಗಿದೆ. ಸುದೀಪ್ ಶೆಟ್ಟಿ ಪೇರಮೊಗ್ರು, ಮಂಗಳಗಂಗೋತ್ರಿ