ಎಚ್.ಡಿ.ಕೋಟೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ಅರಣ್ಯ ಪ್ರದೇಶದಲ್ಲಿ ಬೆಲೆಬಾಳುವ ಬೀಟೆ, ತೇಗದ ಮರಗಳನ್ನು ಕಡಿದ ಆರೋಪದಡಿಯಲ್ಲಿ ಮೇಟಿಕುಪ್ಪೆ ಅರಣ್ಯ ಇಲಾಖೆ ಆಧಿಕಾರಿಗಳು ಆದಿವಾಸಿ ಯುವಕನನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ತಾಲೂಕಿನ ಮೇಟಿಕುಪ್ಪೆ ಹಾಡಿಯ ದಾಸ ಬಂಧಿತ. ಈತ ತನ್ನ ಸಹಚರರೊಂದಿಗೆ ಮೇಟಿಕುಪ್ಪೆ ವನ್ಯಜೀವಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೆಲೆಬಾಳುವ ಬೀಟೆ ಮತ್ತು ತೇಗದ ಮರಗಳನ್ನು ಕಡಿದಿದ್ದಾರೆ ಅನ್ನುವ ಆರೋಪ ಮತ್ತು ಅನುಮಾನದಡಿಯಲ್ಲಿ ಶುಕ್ರವಾರ ರಾತ್ರಿ ಆರೋಪಿ ದಾಸನನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
ಬಂಧಿತನನ್ನು ಮೇಟಿಕುಪ್ಪೆ ಅರಣ್ಯ ಇಲಾಖೆ ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಿದ ಸಂದರ್ಭ ದಲ್ಲಿ ಆರೋಪಿ ತನ್ನ ಸಹಚರರೊಂದಿಗೆ ಅರಣ್ಯದಲ್ಲಿದ ಮರಗಳನ್ನು ಕಡಿದಿರುವುದಾಗಿ ಒಪ್ಪಿಕೊಂಡು ತಾನೇ ಮರಗಳನ್ನು ಕಡಿದಿದ್ದ ಸ್ಥಳಕ್ಕೆ ಕರೆದೊಯ್ದಿದ್ದಾ ರೆಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಬಂಧಿತ ಮತ್ತು ಆತನ ಹೇಳಿಕೆಯಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸುವುದಾಗಿ ತಿಳಿಸಿದ್ದಾರೆ. ಮೇಟಿಕುಪ್ಪೆ ವಲಯ ಅರಣ್ಯಾಧಿಕಾರಿ ಹರ್ಷಿತ್, ಸಿಬ್ಬಂದಿ ತ್ಯಾಗರಾಜು, ಸಾಗರ್, ಶಿವಕುಮಾರ್, ನಿರಂಜನ್, ಆನಂದ್, ಸಿದ್ದೇಶ, ಬೊಮ್ಮ ಇದ್ದರು.
ಆದಿವಾಸಿ ಮಹಿಳೆಯರ ಮೇಲೆ ಹಲ್ಲೆ ಆರೋಪ: ಶುಕ್ರವಾರ ಹತ್ತಿ ಬಿಡಿಸುವ ಕೂಲಿ ಕೆಲಸ ಮುಗಿಸಿಕೊಂಡು ದಾಸ ಮತ್ತು ಆತನ ಪತ್ನಿ ಸೇರಿದಂತೆ ಹಾಡಿಯ ಮಹಿಳೆಯರೊಂದಿಗೆ ಮನೆಗೆ ತೆರಳುತ್ತಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ಏಕಾಏಕಿ ದಾಸನನ್ನು ಬಂಧಿಸುವಲ್ಲಿ ಮುಂದಾದರು. ಇದನ್ನು ಪ್ರಶ್ನಿಸಿದಾಗ ಮಹಿಳೆಯರು ಅನ್ನುವುದನ್ನೂ ಮರೆತು ನಮ್ಮ ಮೇಲೆ ಹಲ್ಲೆ ನಡೆಸಿ ಜಮೀನಿನಲ್ಲಿ ಭಯ ಹುಟ್ಟಿಸಿ ಕೊನೆಗೂ ದಾಸನನ್ನು ಅರಣ್ಯ ಇಲಾಖೆ ಕಚೇರಿಗೆ ಕರೆದೊಯ್ದರು ಎಂದು ಆದಿವಾಸಿ ಮಹಿಳೆಯರು ಆರೋಪಿಸಿದ್ದಾರೆ.
ಅರಣ್ಯದಲ್ಲಿ ದಾಸ ಸೇರಿದಂತೆ ಇತರರು ಮರ ಹನನ ಮಾಡಿದ್ದಾರೆ ಅನ್ನುವ ಆರೋಪ ಮತ್ತು ಅನುಮಾನ ಇತ್ತು. ಈತನನ್ನು ಬಂಧಿಸಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆತನೇ ತಪ್ಪೊಪ್ಪಿಕೊಂಡು ಮರಗಳನ್ನು ಕತ್ತರಿಸಿದ ಸ್ಥಳ ತೋರಿಸಿದ್ದಾರೆ. ಆರೋಪಿಯನ್ನು ಬಂಧಿಸಿದ್ದರಿಂದ ಆದಿವಾಸಿಗರು ಹಲ್ಲೆ ನಡೆಸಿದ್ದಾರೆಂದು ಸುಳ್ಳು ಆರೋಪ ಮಾಡುತ್ತಿದ್ದಾರೆ.
–ಹರ್ಷಿತ್, ವಲಯ ಅರಣ್ಯಾಧಿಕಾರಿ