ದೇವನಹಳ್ಳಿ: ತಾಲೂಕು ವ್ಯಾಪ್ತಿಯಲ್ಲಿ ಸುರಿದ ಬಿರುಗಾಳಿ ಮತ್ತು ಆಲಿಕಲ್ಲು ಮಳೆಯಿಂದಾಗಿ ಮಾವಿನ ಮರ, ಹಲಸು, ದ್ರಾಕ್ಷಿ, ಬಾಳೆಗಿಡಗಳು ಹಾಗೂ ಇತರೆ ತರಕಾರಿಬೆಳೆ ಹಾನಿಗೀಡಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಘಟನೆ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಚೀಮಾಚನಹಳ್ಳಿ, ಬಾಲೇಪುರ ಗ್ರಾಮಗಳ ಸುತ್ತಮುತ್ತಲು ನಡೆದಿದೆ.
ಕಾಯಿಗಳು ಧರೆಗೆ: ಬುಧವಾರ ಮಧ್ಯಾಹ್ನ ವಿಪರೀತ ಗಾಳಿ ಆಲಿಕಲ್ಲು ಮಳೆಯಿಂದ ಹಲವಾರು ಮರಗಳು ಧರೆಗುರುಳಿದ್ದು, ದ್ರಾಕ್ಷಿ ಬಾಳೆ ಬೆಳೆಗಳು ಹಾಳಾಗಿವೆ. ಬಾಲೇಪುರ, ಚೀಮಾಚನಹಳ್ಳಿ ಗ್ರಾಮಗಳ ಸುತ್ತಮುತ್ತ ಸುಮಾರು 50 ಎಕರೆ ದ್ರಾಕ್ಷಿ ಬೆಳೆ ಹಾಗೂ ಬಾಳೆ ಸೇರಿದಂತೆ ತರಕಾರಿ ಬೆಳೆಗಳು ಹಾಳಾಗಿವೆ. ಹಲಸು, ಮಾವಿನ ಮರಗಳ ಕಾಯಿಗಳು ಧರೆಗೆ ಉರುಳಿವೆ.
ಅನಾಹುತ: ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ಬಾಲೇಪುರದ ಆಂಜಿನಪ್ಪ ಮಾತನಾಡಿ, ಬಾಲೇಪುರ ಗ್ರಾಮದಲ್ಲಿ ರೈತರಾದ ಮಂಜುನಾಥ್, ಚಂದ್ರಪ್ಪ, ಸೀನಪ್ಪ, ರಮೇಶ್, ನಾಗರಾಜ್, ಈರಣ್ಣ ಅವರ ತೋಟಗಳಲ್ಲಿ ಸುಮಾರು 20 ದಿನದಲ್ಲಿ ಕಟಾವಿಗೆ ಬರುತ್ತಿದ್ದ ದ್ರಾಕ್ಷಿ ಬೆಳೆ ನಷ್ಟ ಸಂಭವಿಸಿದೆ. ರೈತರು ತಾವು ಬೆಳೆದ ಬೆಳೆ ಕೈಗೆ ಬರುವ ವೇಳೆ ಪ್ರಕೃತಿ ವಿಕೋಪದಿಂದ ಇಂತಹ ಅನಾಹುತಕ್ಕೆ ಕಾರಣವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಆಗಿದೆ. ಕಡಿಮೆ ನೀರಿನಲ್ಲಿಯೇ ರೈತರು ತೋಟಗಾರಿಕೆ ಮತ್ತು ಕೃಷಿ ಮಾಡುತ್ತಿದ್ದಾರೆ ಎಂದರು.
ಪರಿಹಾರ ನೀಡಿ: ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ತಿಳಿಸಿದರೆ ನಾವು ಚುನಾವಣಾ ಬಿಸಿ ಇರುವುದರಿಂದ ವೀಕ್ಷಕರಾಗಿ ನೇಮಕ ಮಾಡಿರುತ್ತಾರೆ. ನಾಳೆ ಸ್ಥಳಕ್ಕೆ ಬಂದು ಪರಿಶೀಲಿಸುತ್ತೇವೆ ಎಂದು ಹೇಳುತ್ತಾರೆ. ಇದನ್ನು ಪರಿಶೀಲಿಸಿ ರೈತರಿಗೆ ನಷ್ಟವಾಗಿರುವುದನ್ನು ಸರ್ಕಾರದ ಮುಖಾಂತರ ಪರಿಹಾರ ಧನ ಕೊಡಿಸಬೇಕು ಎಂದು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಮಳೆ ಖುಷಿ ತಂದಿಲ್ಲ: ಚೀಮಾಚನಹಳ್ಳಿ ರೈತ ಕೆಂಪಣ್ಣ ಮಾತನಾಡಿ, ಸುಮಾರು ಎರಡೂವರೆ ಎಕರೆ ಬಾಳೇತೋಟ ಗೊನೆ ಹಾಕುವ ಸ್ಥಿತಿಯಲ್ಲಿದ್ದು, ಮಳೆ ಗಾಳಿಗೆ ಅರ್ಧಕ್ಕೆ ಮುರಿದು ಧರೆಗುರುಳಿವೆ. ಇದರಿಂದ ಸುಮಾರು ಲಕ್ಷಾಂತರ ರೂ. ಬಂಡವಾಳ ನಷ್ಟವಾಗಿದೆ. ದ್ರಾಕ್ಷಿ ಬೆಳೆ ಆಲಿಕಲ್ಲಿ ಮಳೆಯಿಂದ ದ್ರಾಕ್ಷಿ ಹಣ್ಣುಗೆ ಹಾನಿಯಾಗಿದೆ.
ಗಾಳಿಗೆ ಕಾಯಿಗಳು ನೆಲಕ್ಕೆ ಬಿದ್ದಿದೆ. ಇದಕ್ಕೆ ಲಕ್ಷಾಂತರ ರೂ. ಬಂಡವಾಳ ಹಾಕಲಾಗಿದೆ. ರೈತರು ಹಲವಾರು ಆಸೆಗಳನ್ನು ಇಟ್ಟುಕೊಂಡು ಬೆಳೆ ಬೆಳೆಯಲು ಮುಂದಾಗುತ್ತಾರೆ. ಭರಣಿ ಮಳೆಯಿಂದ ರೈತರಿಗೆ ಅವಾಂತರ ಸೃಷ್ಟಿಯಾಗಿದೆ. ಒಂದು ರೀತಿಯಲ್ಲಿ ಭರಣಿ ಮಳೆ ಆಗಿದೆ ಎಂದು ಖುಷಿಪಟ್ಟರೆ ಇನ್ನೊಂದು ಕಡೆ ಬೆಳೆ ನಷ್ಟವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.