Advertisement

ರಸ್ತೆ ಅಗಲೀಕರಣಕ್ಕೆ ಮರಗಳ ಮಾರಣಹೋಮ!

11:46 AM Feb 16, 2019 | |

ಕಡೂರು: ಕಡೂರು-ಚಿಕ್ಕಮಗಳೂರು ನಡುವೆ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಸುಮಾರು 3500ಕ್ಕೂ ಅಧಿಕ ಕಾಡು ಜಾತಿಯ ಮರಗಳನ್ನು ಕಡಿಯಲಾಗುತ್ತಿದ್ದು, ಇದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

ಕಡೂರು ಪಟ್ಟಣದ ಕನಕ ವೃತ್ತದಿಂದ ಚಿಕ್ಕಮಗಳೂರು ಹಾಯ್ದು ಮೂಡಿಗೆರೆ ರಸ್ತೆಯಲ್ಲಿ ಬರುವ ಮೂಗ್ತಿಹಳ್ಳಿವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ ಮರಗಳನ್ನು ಕಡಿಯಲಾಗುತ್ತಿದೆ. ಈ ರಸ್ತೆ ನಿರ್ಮಾಣಕ್ಕಾಗಿ ಕಡೂರಿನಿಂದ ಚಿಕ್ಕಮಗಳೂರಿನ ಸಖರಾಯಪಟ್ಟಣವರೆಗೆ
ಸಾವಿರಾರು ಮರಗಳು ಈಗಾಗಲೇ ನೆಲಕ್ಕುರುಳಿವೆ. ನೂರಾರು ವರ್ಷದಿಂದ ರಸ್ತೆ ಬದಿಯಲ್ಲಿ ನೆರಳು ನೀಡುತ್ತಿರುವ ಹಲವಾರು ಕಾಡು ಜಾತಿಯ ಮರಗಳನ್ನು ಈಗ ರಸ್ತೆ ವಿಸ್ತರಣೆ ನೆಪದಲ್ಲಿ ಕಡಿಯಬೇಕಾದ ಅನಿವಾರ್ಯತೆ ಎದುರಾಗಿದೆ. ವಿಶೇಷವಾಗಿ ಕಡೂರು ತಾಲೂಕಿನ ಲಕ್ಷ್ಮೀಪುರದಿಂದ ಸಖರಾಯಪಟ್ಟಣ ಹಳೇಹಟ್ಟಿ ಕ್ರಾಸ್‌ವರೆಗೆ ಮತ್ತು ಉದ್ದೇಬೋರನಹಳ್ಳಿಯಿಂದ ಲಕ್ಯಾ ಕ್ರಾಸ್‌ವರೆಗೆ ಭಾರೀ ಸಂಖ್ಯೆಯಲ್ಲಿ ಮರಗಳಿವೆ.

ಇದೀಗ ರಸ್ತೆ ನಿರ್ಮಾಣದ ಹಿನ್ನೆಲೆಯಲ್ಲಿ ಜೆಸಿಬಿ ಯಂತ್ರದ ಮೂಲಕ ವಿಸ್ತರಣೆ ಗಡಿ ಗುರುತು ಮಾಡಲಾಗಿದೆ. ನಂತರ ಮರಗಳನ್ನು ತೆರವು ಮಾಡಬೇಕಾಗಿದೆ. ಆದರೆ ಅದಕ್ಕೂ ಮೊದಲು ಮೋರಿ ಮತ್ತು ಸಣ್ಣ ಸೇತುವೆಗಳನ್ನು ಹೆದ್ದಾರಿ ಇಲಾಖೆ ನಿರ್ಮಿಸುವ ಇಂಗಿತವಿದೆ ಎಂದು
ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

 ಚಿಕ್ಕಮಗಳೂರು-ಕಡೂರು ನಡುವೆ ವಾಹನಗಳ ಸಂಚಾರ ದಟ್ಟಣೆ ಇದ್ದರೂ, ಮರಗಳನ್ನು ಕಡಿಯುವಷ್ಟರ ಮಟ್ಟಿಗೆ ಹೆಚ್ಚಾಗಿಲ್ಲ. ಈಗಿರುವ ರಸ್ತೆಯನ್ನೇ ಅಕ್ಕ-ಪಕ್ಕ ವಿಸ್ತರಣೆ ಮಾಡಿ ಮರಗಳನ್ನೂ ಉಳಿಸಿಕೊಂಡು ರಸ್ತೆಯನ್ನು ಮತ್ತಷ್ಟು ಸದೃಢವಾಗಿ ನಿರ್ಮಿಸಬಹುದು. ಇದರಿಂದ ಸಂಚಾರಕ್ಕೂ ಯಾವುದೇ ಸಮಸ್ಯೆ ಆಗುವುದಿಲ್ಲ ಎನ್ನುವುದು ಜನರ ಅಭಿಪ್ರಾಯ.

ಸದ್ಯದಲ್ಲೇ ನೆಲ್ಯಾಡಿ-ಚಿತ್ರದುರ್ಗ ಚತುಷ್ಪಥ ರಸ್ತೆ ಆರಂಭವಾಗುವುದರಿಂದ ಆ ಮಾರ್ಗದಲ್ಲಿಯೇ ಚಿಕ್ಕಮಗಳೂರು, ಮೂಡಿಗರೆ, ಸಖರಾಯಪಟ್ಟಣ
ಮತ್ತಿತರ ಪಟ್ಟಣಗಳು ಬರುತ್ತವೆ. ಆಗ ವಾಹನಗಳ ದಟ್ಟಣೆ ಹೆಚ್ಚಾಗಿದ್ದರೂ ಹೊಸ ಚತುಷ್ಪಥ ರಸ್ತೆ ನಿರ್ಮಾಣವಾಗುವುದರಿಂದ ಮರಗಳನ್ನು ಕಡಿದೆ
ತೀರುತ್ತಾರೆ. ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಅವರ ಕೆಲಸ ಅವರು ಮಾಡಿಕೊಳ್ಳಲಿ ಎಂಬುದು ಕೆಲವು ಜನರ ಮಾತು. ಒಟ್ಟಿನಲ್ಲಿ ಅಭಿವೃದ್ಧಿ ಹೆಸರಿನಲ್ಲಿ
ಪರಿಸರ ನಾಶವಾಗುವುದು ಸರ್ವೇ ಸಾಮಾನ್ಯವಾಗಿದೆ.

Advertisement

ಪರಿಸರಕ್ಕೆ ಪೂರಕವಾದ ಅಭಿವೃದ್ಧಿ ಕೈಗೊಳ್ಳುವ ಇಚ್ಛಾಶಕ್ತಿ ನಮ್ಮ ರಾಜಕಾರಣಿಗಳು, ಅಧಿಕಾರಿಗಳಿಗೆ ಇಲ್ಲ. ನಮಗೇಕೆ ಬೇಕು ಬೇಡದ ಉಸಾಬರಿ ಎನ್ನುವಂತಹ ಮನಃಸ್ಥಿತಿ ಜನರದ್ದಾಗಿದೆ.

ರಸ್ತೆ ವಿಸ್ತರಣೆಗಾಗಿ ಅಕ್ಕ-ಪಕ್ಕದ ಕಾಡು ಜಾತಿಯ ಮರಗಳನ್ನು ಕಡಿತಲೆ ಮಾಡಿಕೊಡಲು ಹೆದ್ದಾರಿ ಇಲಾಖೆ ಕೋರಿಕೆ ಸಲ್ಲಿಸಿದೆ. ಇದು ಚಿಕ್ಕಮಗಳೂರು
ಮತ್ತು ಕಡೂರು ಎರಡು ವಲಯಗಳ ಜಂಟಿ ಕಾರ್ಯಾಚರಣೆ ಆಗಿದೆ. ಆದ್ದರಿಂದ ಈಗಾಗಲೇ ಇಲಾಖೆ ಒಂದು ಹಂತದ ಸರ್ವೇ ಮುಗಿಸಿ ಹೆದ್ದಾರಿ ಇಲಾಖೆಗೆ ಕಡತ ಕಳುಹಿಸಲಾಗಿದೆ. ಹೆದ್ದಾರಿ ಇಲಾಖೆಯು ಈಗಾಗಲೇ ಕಡೂರು ಸಖರಾಯಪಟ್ಟಣ ಮಧ್ಯೆ ಸರ್ವೆ ನಡೆಸಿ ವಿವಿಧ ಜಾತಿಗೆ ಸೇರಿದ 1137 ಮರಗಳನ್ನು ಗುರುತಿಸಿ ಹೆದ್ದಾರಿ ಇಲಾಖೆಗೆ ಮಾಹಿತಿ ನೀಡಿದ್ದೇವು. ಅರಣ್ಯ ಇಲಾಖೆಯ ನಿಯಮಗಳನ್ನು ಹೆದ್ದಾರಿ ಇಲಾಖೆ ಪಾಲಿಸಲು ಒಪ್ಪಿಕೊಂಡಿದ್ದು, ಕೂಡಲೇ ಒಂದು ಮರಕ್ಕೆ 10 ಗಿಡ ಬೆಳೆಸುವ ದೃಷ್ಟಿಯಿಂದ 1.6 ಕೋಟಿ ರೂ. ಅರಣ್ಯ ಇಲಾಖೆಗೆ ನೀಡಿದೆ. ನಂತರ ಮರಗಳನ್ನು
ಕಡಿತಲೆಗೆ ಅವಕಾಶ ನೀಡಿದ್ದೇವೆ
ಪಾಲಾಕ್ಷಪ್ಪ , ಕಡೂರು ವಲಯ ಅರಣ್ಯಾಧಿಕಾರಿ 

ತಾವು ಚಿಕ್ಕಂದಿನಿಂದಲೂ ಈ ರಸ್ತೆ ಗಮನಿಸಿಕೊಂಡು ಬಂದಿದ್ದೇನೆ. ಬ್ರಿಟೀಷರ ಕಾಲದಲ್ಲಿ ಸಿಮೆಂಟ್‌ ರಸ್ತೆಯಾಗಿ ನಿರ್ಮಾಣಗೊಂಡಿದ್ದ ಈ ರಸ್ತೆಯನ್ನು
ಕಾಲಕ್ರಮೇಣ ಜನಪ್ರತಿನಿಧಿ ಗಳು ಟಾರ್‌ ರಸ್ತೆಯನ್ನಾಗಿ ಬದಲಾಯಿಸಿದ್ದಾರೆ. ಸಖರಾಯಪಟ್ಟಣದಿಂದ ಬಿಸಲೇಹಳ್ಳಿ ಗೇಟ್‌ವರೆಗೆ ಎರಡೂ ಬದಿ ನೂರಾರು ಮರಗಳು ಇದ್ದು, ರಸ್ತೆ ಹಗಲಲ್ಲೇ ಕತ್ತಲೆಯಲ್ಲಿದ್ದಂತೆ ಭಾಸವಾಗುತ್ತಿತ್ತು. ಈಗ ನಮ್ಮ ಕಣ್ಣ ಮುಂದೆ ಮರಗಳ ಮಾರಣಹೋಮ ನಡೆಯುತ್ತಿದೆ. ಅಭಿವೃದ್ಧಿ ಮಾಡಲಿ. ಅದರೆ ಸಂಬಂಧಿ ಸಿದ ಇಲಾಖೆಯವರು ಪುನಃ ಮರಗಳನ್ನು ಬೆಳೆಸಲಿ ಎಂದರು.
ರಾಜಪ್ಪ , ಬುಕ್ಕಸಾಗರ ಗ್ರಾಮಸ್ಥ 

„ಎ.ಜೆ.ಪ್ರಕಾಶಮೂರ್ತಿ, ಕಡೂರು

Advertisement

Udayavani is now on Telegram. Click here to join our channel and stay updated with the latest news.

Next