ನೆಲಮಂಗಲ: ನಗರಸಭೆ ವ್ಯಾಪ್ತಿಯ ಭಕ್ತನ ಪಾಳ್ಯ ರಸ್ತೆಯಲ್ಲಿರುವ ನಗರಸಭೆ ಸಿಎ ಜಾಗದಲ್ಲಿನ ಮರಗಳನ್ನು ಖಾಸಗಿ ಶಾಲೆಯ ವ್ಯಕ್ತಿಗಳು ಕಟಾವು ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದ ಹಿನ್ನೆಲೆ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಭಕ್ತನಪಾಳ್ಯ ರಸ್ತೆಯಲ್ಲಿ ಈ ಹಿಂದೆ ನಡೆಸಲಾಗುತ್ತಿದ್ದ ರತನ್ ಮೆಮೋರಿಯಲ್ ಸ್ಕೂಲ್ ಜಾಗವು ರತನ್ ಟ್ರಸ್ಟ್‌ಗೆ 30 ವರ್ಷಗಳ ಕಾಲ ಕರಾರು ಮಾಡಿಕೊಂಡು ನಡೆಸುತ್ತಿದ್ದರು, ಈಗಾಗೇ ಸಮಯ ಮುಗಿದು ನಗರಸಭೆಗೆ ಜಾಗ ಸೇರಿದ್ದು, ಶಾಲೆಯನ್ನು ಸಹ ಬಂದ್ ಮಾಡಿದ್ದಾರೆ. ಆದರೆ, ಶಾಲೆಯ ಕೆಲವರು ಸಿಎ ಜಾಗದಲ್ಲಿರುವ ದೊಡ್ಡಗಾತ್ರದ ಆಲದ ಮರಗಳನ್ನು ಅನುಮತಿ ಇಲ್ಲದೇ ಕಟಾವು ಮಾಡುತ್ತಿದ್ದು, ಇದರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳುವುದನ್ನು ಬಿಟ್ಟು ಶಾಮೀಲಾಗಿರುವಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಮರ ಕಟಾವು ಮಾಡಿರುವ ವಿಚಾರದಲ್ಲಿ ನೆಲಮಂಗಲ ಅರಣ್ಯ ಇಲಾಖೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಆರಂಭವಾಗಿದೆ.
ದಾಖಲು: ಮೂರ್‍ನಾಲ್ಕು ಆಲದ ಮರಗಳನ್ನು ಕಟಾವು ಮಾಡಿರುವ ವಿಚಾರವಾಗಿ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದು, ನಗರಸಭೆಗೆ ಸೇರಿದ ಸಿಎ ಜಾಗವೇ ಅಥವಾ ಖಾಸಗಿಯವರ ಶಾಲೆಯ ಜಾಗವೇ ಎಂಬುದಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ತನಿಖೆ ನಡೆಸಲು ಮುಂದಾಗಿದ್ದಾರೆ.
ಶಾಮೀಲು ಶಂಕೆ: ವಾಜರಹಳ್ಳಿ ಪಂಚಾಯಿತಿ ವ್ಯಾಪ್ತಿಯ ಸಿಎ ಜಾಗವನ್ನು ರತನ್ ಶಾಲೆಗೆ 30ವರ್ಷಕ್ಕೆ ವಾಯಿದೆ ಕರಾರಿಗೆ ನೀಡಲಾಗಿದ್ದು, ಸಂಪೂರ್ಣ ದಾಖಲೆಗಳನ್ನು ನಗರಸಭೆಗೆ ಸೇರ್ಪಡೆಯಾದ ನಂತರ ಗ್ರಾಮ ಪಂಚಾಯಿತಿಯಿಂದ ದಾಖಲಾತಿಗಳನ್ನು ನಗರಸಭೆಗೆ ನೀಡಲಾಗಿದೆ, ಆದರೆ ನಗರಸಭೆ ಅಧಿಕಾರಿಗಳು ದಾಖಲಾತಿ ಹುಡುಕಬೇಕು, ಅದರ ಬಗ್ಗೆ ಮಾಹಿತಿ ಗೊತ್ತಿಲ್ಲ, ಫೈಲ್ ಎಲ್ಲಿದೆ ನೋಡಿಲ್ಲ ಎಂಬ ಕಾರಣಗಳನ್ನು ಹೇಳಿ ಸರಕಾರಿ ಜಾಗ ಖಾಸಗಿ ವ್ಯಕ್ತಿಗಳ ಪಾಲಾಗುವಂತೆ ವರ್ತನೆ ಮಾಡುವ ಜತೆ ಮರಗಳನ್ನು ಕಡಿದು ಪರಿಸರ ನಾಶಕ್ಕೆ ಪ್ರೇರಣೆ ನೀಡಿದ್ದಾರೆ ಎಂದು ಗ್ರಾಪಂ ಮಾಜಿ ಸದಸ್ಯ ರಾಮಕೃಷ್ಣ, ನಗರಸಭೆ ಸದಸ್ಯ ಅಂಜನಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.
ಅನುಮತಿ ಇಲ್ಲದೆ ಮರ ಕಟಾವು ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಅಧಿಕಾರಿಗಳು ಪರಿಶೀಲನೆ ಮಾಡಿ ಪ್ರಕರಣ ದಾಖಲು ಮಾಡಲಾಗಿದೆ. ನಗರಸಭೆಯವರು ದಾಖಲೆಯನ್ನು ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಮರ ಕಟಾವು ಮಾಡಿರುವುದು ತಪ್ಪು.
-ಶ್ರೀಧರ್, ವಲಯ ಅರಣ್ಯಾಧಿಕಾರಿ, ನೆಲಮಂಗಲ