Advertisement

ಗಣಿಗಾರಿಕೆಗೆ ಮರಗಳ ಹನನ

06:11 PM Dec 20, 2019 | Suhan S |

ತುಮಕೂರು: ಎಲ್ಲೆಡೆ ಗಿಡ, ಮರ ಬೆಳೆಸಿ ಪರಿಸರ ಉಳಿಸಿ ಎನ್ನುವ ಘೋಷಣೆಯೊಂದಿಗೆ ಪರಿಸರ ಆಂದೋಲನಗಳು ನಡೆಯುವುದು ಒಂದೆಡೆಯಾದರೆ, ಮತ್ತೂಂದೆಡೆ ಮರಗಳ್ಳರು, ಗಣಿ ಗುತ್ತಿಗೆದಾರ ರಿಂದ ಜಿಲ್ಲಾದ್ಯಂತ ಮರಗಳ ಮಾರಣ ಹೋಮ ನಡೆಯುತ್ತಿದ್ದರೂ, ಅರಣ್ಯ ಇಲಾಖೆ ಅಧಿಕಾರಿಗಳು

Advertisement

ಮರಗಳ್ಳತನ ತಡೆಗಟ್ಟಲು ವಿಫ‌ಲರಾಗಿದ್ದಾರೆ. ಜಿಲ್ಲೆ ಬಹುತೇಕ ಬಯಲುಸೀಮೆಯ ಪ್ರದೇಶವಾಗಿದ್ದು, ಈ ಜಿಲ್ಲೆಯಲ್ಲಿ ಅರಣ್ಯ ಸಂಪತ್ತು ಕೆಲ ಪ್ರದೇಶಗಳಲ್ಲಿದ್ದರೂ ಜಿಲ್ಲೆಯಲ್ಲಿ ನಡೆಯುತ್ತಿರುವ ವ್ಯಾಪಕ ಗಣಿಗಾರಿಕೆಯಿಂದ ಮರ, ಗಿಡಗಳು ನಾಶವಾಗುತ್ತಲಿವೆ. ಇದರ ಜೊತೆಗೆ ಜಿಲ್ಲೆಯ ವಿವಿಧ ಕಡೆ ರಸ್ತೆ ಬದಿಯ ಮರಗಳು ಹಾಗೂ ಅರಣ್ಯಪ್ರದೇಶದಲ್ಲಿ ರಾಜಾರೋಷವಾಗಿ ಮರ ಕಡಿಯುವ ಮರಗಳ್ಳರ ಹಾವಳಿ ಹೆಚ್ಚುತ್ತಿದ್ದು, ಪರಿಸರ ಅಸಮತೋಲನ ಸೃಷ್ಟಿಸುತ್ತಿದ್ದಾರೆ.

ಮಾರಣ ಹೋಮ: ಜಿಲ್ಲೆಯ ವಿವಿಧ ಕಡೆಗಳಲ್ಲಿ ಮರ ರಾಜಾರೋಷವಾಗಿ ಕಡಿದು ಸಾಗಿಸುತ್ತಿರುವುದು ಸಾಮಾನ್ಯ ಎಂಬಂತಾಗಿದೆ. ನಗರಕ್ಕೆ ಸಮೀಪವಿರುವ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಇರುವ ಬೆಲೆ ಬಾಳುವ ಮರ ಗಿಡ ಕಾಡುಗಳ್ಳರ ಪಾಲಾಗುತ್ತಿದೆ. ಮಧುಗಿರಿ, ಶಿರಾ ಹಾಗೂ ತಾಲೂಕಿನ ಬುಕ್ಕಾಪಟ್ಟಣ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಮರಗಳ್ಳರು ಕಡಿದು ಸಾಗಿಸುತ್ತಿದ್ದಾರೆ. ಮರಗಳ್ಳರು ಮರ ಕಡಿದು ಸಾಗಿಸುವುದು ಒಂದೆಡೆಯಾದರೆ, ಗಿಡ-ಮರ ನೆಟ್ಟು ಪರಿಸರ ಉಳಿಸಿ ಎನ್ನುವ ಆಂದೋಲನ ಜಿಲ್ಲೆಯ ಎಲ್ಲಾ ಭಾಗಗಳಲ್ಲಿಯೂ ನಡೆಯುತ್ತಿದೆ.ಅರಣ್ಯ ಇಲಾಖೆ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಜನರಲ್ಲಿ ಅರಿವು ಮೂಡಿಸುತ್ತಿ ದ್ದರೂ ಯಾವುದೇ ಪರಿಣಾಮ ಬೀರಿದಂತಿಲ್ಲ.

ಗಣಿಗಾರಿಕೆ: ಜಿಲ್ಲೆಯಲ್ಲಿ ಗಣಿಗಾರಿಕೆ ವ್ಯಾಪಕವಾಗಿ ನಡೆದ ಪರಿಣಾಮ ಗೋಮಾಳ ಗುಡ್ಡಗಳಲ್ಲಿದ್ದ ಮರಗಿಡಗಳು ನಾಶವಾಗಿ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಚಿಕ್ಕನಾಯಕನ ಹಳ್ಳಿ, ಗುಬ್ಬಿ, ತಿಪಟೂರು ಪ್ರದೇಶಗಳಲ್ಲಿ ಅದಿರು ಗಣಿಗಾರಿಕೆ ವ್ಯಾಪಕವಾಗಿದೆ. ಕುಣಿಗಲ್‌ ಮತ್ತು ತುಮಕೂರು ಭಾಗಗಳಲ್ಲಿ ಕಲ್ಲು ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿರುವುದರಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಗೋಮಾಳ ಗುಡ್ಡಗಳಲ್ಲಿ ಬೆಳೆದು ನಿಂತಿದ್ದ ಗಿಡ-ಮರ ಗಣಿ ಉದ್ಯಮಿಗಳು ಯತೇತ್ಛವಾಗಿ ಕಡಿದು ಹಾಕುವ ಮೂಲಕ ಪರಿಸರ ನಾಶ ಮಾಡುತ್ತಿದ್ದಾರೆ. ಈ ರೀತಿ ಪರಿಸರದ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಯಿಂದಲೂ ಗಿಡ ಮರಗಳು ನಾಶವಾಗಿವೆ.

ಕಳ್ಳರ ಪಾಲು: ತುಮಕೂರು ತಾಲೂಕಿನ ಕೋರಾ ಹಾಗೂ ಸುತ್ತಮುತ್ತಲ ಕೆರೆ ಅಂಗಳಗಳಲ್ಲಿ ಬೆಳೆದಿದ್ದ ಮರ-ಗಿಡಗಳನ್ನು ಕಳ್ಳರ ಪಾಲಾಗಿದೆ. ಈ ಭಾಗದಲ್ಲಿ ಇಟ್ಟಿಗೆ ಗೂಡು ಹಾಕಿರುವವರು ಹಾಗೂ ಮರದ ಪೀಠೊಪಕರಣ ಮಾಡುವವರು ಈ ದಂಧೆಯಲ್ಲಿ ತೊಡಗಿದ್ದಾರೆ. ಈ ಭಾಗದ ನಾಗರಿಕರು ಹಲವು ಬಾರಿ ಅರಣ್ಯಧಿಕಾರಿಗಳಿಗೆ ದೂರು ನೀಡಿದ್ದರೂ ಅಧಿಕಾರಿಗಳು ಮೌನವಹಿಸಿದ್ದಾರೆ.

Advertisement

ಕಡಿಮೆಯಾಗುತ್ತಿದೆ ಮಳೆ ಪ್ರಮಾಣ: ಜಿಲ್ಲೆಯ ಎಲ್ಲಾ ಕಡೆ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ, ಮರಗಳ ನಾಶ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಪರಿಸರ ಅಸಮತೋಲನ ಉಂಟಾಗಿ ಕಳೆದ ಹಲವಾರು ವರ್ಷಗಳಿಂದಲೂ ಈ ಭಾಗದಲ್ಲಿ ಸುರಿಯುತ್ತಿರುವ ಮಳೆ ಪ್ರಮಾಣವೂ ಕಡಿಮೆಯಾಗತೊಡಗಿದೆ. ಈ ಹಿಂದೆ ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಅಧಿಕ ಮಳೆ ಬೀಳುತ್ತಿತ್ತು.

ಆದರೆ ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಮಳೆ ಬಾರದೆ ರೈತರು ಸಂಕಷ್ಟ ಅನುಭವಿಸಿ ಪ್ರತಿವರ್ಷವೂ ಬರಗಾಲ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಜಿಲ್ಲೆಯಲ್ಲಿ ಪರಿಸರದ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಂತಿಲ್ಲ. ಪರಿಸರದ ಮೇಲೆ ಮರ ಗಳ್ಳರಿಂದ ನಿರಂತರ ದಾಳಿ ನಡೆಯುತ್ತಿದ್ದರೂ, ಜಿಲ್ಲೆಯ ಅರಣ್ಯ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿ ಇರುವ ಮರಗಿಡಗಳನ್ನಾದರೂ ರಕ್ಷಿಸುವತ್ತ ಗಮನಹರಿಸಬೇಕಾಗಿದೆ.

 

-ಚಿ.ನಿ. ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next