ಗೋಪೇಶ್ವರ, ಉತ್ತರಾಖಂಡ : ಗಢವಾಲ್ ಹಿಮಾಲಯದಲ್ಲಿನ ಬದರೀನಾಥ್‌ಕ್ಕೆ ಯಾತ್ರಿಕರನ್ನು ಒಯ್ತುತ್ತಿದ್ದ ಬಸ್ಸಿಗೆ ಟ್ರಕ್ ಢಿಕ್ಕಿಯಾದ ಪರಿಣಾಮವಾಗಿ ಬಸ್ಸು ರಸ್ತೆಯಿಂದ ಸ್ಕಿಡ್ ಆಗಿ 90 ಅಡಿ ಆಳದ ಕಣಿವೆಗೆ ಉರುಳಿ ಬೀಳುವುದನ್ನು ಅದೃಷ್ಟವಾಶತ್ ಮರವೊಂದು ತಡೆದ ಕಾರಣ ರಾಜಸ್ಥಾನದ 22 ಯಾತ್ರಿಕರು ಪವಾಡಸದೃಶವಾಗಿ ಪಾರಾದ ಘಟನೆ ನಡೆದಿದೆ.
ಐಟಿಬಿಪಿ ಮತ್ತು ಪೊಲೀಸ್ ದಳದ ಸಿಬಂದಿಗಳು ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿ ಯಾತ್ರಿಕರನ್ನು ಮೇಲೆತ್ತುವ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಐಟಿಬಿಪಿ ಕಮಾಂಡೆಂಟ್ (ಗೋಚಾರ್) ಗಿರೀಶ್ ಚಂದ್ರ ಪುರೋಹಿತ್ ವರದಿಗಾರರಿಗೆ ತಿಳಿಸಿದ್ದಾರೆ.
ಬದರೀನಾಥ್ ಹೈವೇಯಲ್ಲಿ ಗೋಚಾರ್ ಎಂಬಲ್ಲಿಗೆ ಸಮೀಪ ಈ ಘಟನೆ ಇಂದು ಬೆಳಗ್ಗೆ ನಡೆದಿದೆ.
ಎದುರುಗಡೆಯಿಂದ ಬರುತ್ತಿದ್ದ ಟ್ರಕ್, ಬಸ್ಸಿಗೆ ಢಿಕ್ಕಿ ಹೊಡೆದಾಗ ಬಸ್ಸು ರಸ್ತೆಯಿಂದ ಸ್ಕಿಡ್ ಆಗಿ 90 ಅಡಿ ಆಳದ ಕಣಿವೆಗೆ ಉರುಳಿ ಅಪಾಯಕ್ಕೆ ಗುರಿಯಾಗಿತ್ತು. ಆಗ ಇಳಿಜಾರಿನಲ್ಲಿದ್ದ ಬೃಹತ್ ಮರವೊಂದು ಬಸ್ಸನ್ನು ತಡೆಯಿತು. ಹಾಗಾಗಿ ಪ್ರಯಾಣಿಕರು ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾದರು ಎಂದು ಇಂಡೋ ಟಿಬೆಟಾನ್ ಬಾರ್ಡರ್ ಪೊಲೀಸ್ ದಳದ ಅಧಿಕಾರಿ ಹೇಳಿದರು.
ಗಾಯಗೊಂಡಿರುವ ಪ್ರಯಾಣಿಕರನ್ನು ಒಡನೆಯೇ ಐಟಿಬಿಪಿ ಆಸ್ಪತ್ರೆಗೆ ಒಯ್ಯಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಇನ್ನೊಂದು ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಪುರೋಹಿತ್ ಹೇಳಿದರು.