ಬೆಂಗಳೂರು: ನಗರದ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು, ಎನ್ವಯರ್ನ್ಮೆಂಟ್ ಟ್ರಸ್ಟ್ ಸಹಯೋಗದಲ್ಲಿ ಆಸ್ಪತ್ರೆ ಆವರಣದಲ್ಲಿ ‘ಟ್ರೀ ಪಾರ್ಕ್’ ನಿರ್ಮಾಣ ಯೋಜನೆ ಕೈಗೊಂಡಿದ್ದು, ಈ ಹಿನ್ನೆಲೆ ಗುರುವಾರ ಬೇವು, ಮಾವು, ಹಲಸು, ಸಪೋಟ, ನೇರಳೆ, ಸಂಪಿಗೆ ಸೇರಿದಂತೆ ಹೂ-ಹಣ್ಣುಗಳ ಹಾಗೂ ಔಷಧೀಯಗುಣವುಳ್ಳ ನೂರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.
ಈ ವೇಳೆ ಮಾತನಾಡಿದ ಡಾ.ಎ.ಎನ್. ಯಲ್ಲಪ್ಪರೆಡ್ಡಿ, ಬೆಂಗಳೂರು ಕಾಂಕ್ರೀಟ್ ಕಾಡಾಗುತ್ತಿದ್ದು, ಭವಿಷ್ಯದ ದೃಷ್ಟಿಯಿಂದ ನಗರವನ್ನು ಹಸಿರಾಗಿಸುವ ಅಗತ್ಯವಿದೆ. ಹೀಗಾಗಿ, ಕಿದ್ವಾಯಿ ಆಸ್ಪತ್ರೆ ಆವರಣದಲ್ಲಿ ನೂರಾರು ಸಸಿಗಳನ್ನು ನೆಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸಸಿ ನೆಡುವ ಮೂಲಕ ಬೃಹತ್ ಉದ್ಯಾನ ನಿರ್ಮಿಸಲಾಗುವುದು ಎಂದು ಹೇಳಿದರು.
ಆಸ್ಪತ್ರೆ ನಿರ್ದೇಶಕ ಡಾ.ಸಿ.ರಾಮಚಂದ್ರ ಮಾತನಾಡಿ, ಕಿದ್ವಾಯಿ ಆಸ್ಪತ್ರೆ ಆವರಣದಲ್ಲಿ ಬಹಳಷ್ಟು ಕಟ್ಟಡಗಳು ತಲೆ ಎತ್ತಿದ್ದು, ಹಸಿರು ಕಣ್ಮರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಹತ್ತು ಎಕರೆ ಜಾಗದಲ್ಲಿ ಬೃಹತ್ ಟ್ರೀ ಪಾರ್ಕ್ ನಿರ್ಮಿಸಲು ಚಿಂತನೆ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಸುಮಾರು ಐದು ಸಾವಿರ ಸಿಸಗಳನ್ನು ನೆಡುವ ಮೂಲಕ ಆಸ್ಪತ್ರೆ ಆವರಣವನ್ನು ಸಂಪೂರ್ಣ ಹಸಿರುಮಯವಾಗಿಸಿ ರೋಗಿಗಳಿಗೆ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಲಾಗುವುದು. ನಮ್ಮ ಈ ಕಾರ್ಯಕ್ಕೆ ಇನ್ಫೋಸಿಸ್ ಸೇರಿದಂತೆ ನಾನಾ ಸಂಘ ಸಂಸ್ಥೆಗಳು ಕೈಜೋಡಿಸುವುದಾಗಿ ಭರವಸೆ ನೀಡಿವೆ ಎಂದರು.
Advertisement
ಕಾರ್ಯಕ್ರಮಕ್ಕೆ ಟ್ರಸ್ಟ್ ಅಧ್ಯಕ್ಷ ಹಾಗೂ ಪರಿಸರವಾದಿ ಡಾ.ಎ.ಎನ್.ಯಲ್ಲಪ್ಪರೆಡ್ಡಿ, ಕಾರ್ಯದರ್ಶಿ ರವೀಂದ್ರನಾಥ್, ಆಸ್ಪತ್ರೆಯ ನಿರ್ದೇಶಕ ಡಾ.ಸಿ.ರಾಮಚಂದ್ರ ಅವರು ಸಸಿಗಳನ್ನು ನಡೆವ ಮೂಲಕ ಯೋಜನೆಗೆ ಚಾಲನೆ ನೀಡಿದರು.