Advertisement

ಗಿಡ-ಮರಗಳಿಲ್ಲದ ನಾಡು ನರಕಸದೃಶ: ಮುರುಘಾ ಶರಣರು

11:16 AM Feb 07, 2019 | |

ಚಿತ್ರದುರ್ಗ: ಮರಗಳಿಗೆ ಮಾನವ ಬೇಕಿಲ್ಲ, ಆದರೆ ಮರಗಳು ಮನುಷ್ಯರಿಗೆ ವರವಾಗಿವೆ. ಮರವಿಲ್ಲದ ನಾಡು ನರಕ ಸದೃಶವಾದುದು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಇಲ್ಲಿನ ಮುರುಘಾ ಮಠದ ಬಸವ ಕೇಂದ್ರ ಹಾಗೂ ಎಸ್‌ಜೆಎಂ ಆಂಗ್ಲ ಮಾಧ್ಯಮ ಶಾಲೆ ಸಹಯೋಗದಲ್ಲಿ ನಡೆದ ‘ಶರಣಸಂಗಮ’ ಕಾರ್ಯಕ್ರಮದಲ್ಲಿ ‘ಪೆರಿಯಾರ್‌ ಚಿಂತನೆ’ ಕೃತಿ ಲೋಕಾರ್ಪಣೆ ಮಾಡಿ ‘ಜಾಗತಿಕ ತಾಪಮಾನ ಮತ್ತು ಜನಜೀವನ’ ವಿಷಯದ ಕುರಿತು ಶರಣರು ಮಾತನಾಡಿದರು.

ಜಗತ್ತು ಹೆಚ್ಚಿನ ಉಷ್ಣತೆಗೆ ಒಳಗಾಗಿ ಅಪಾಯದ ಕಡೆಗೆ ವಾಲುತ್ತಿದೆ. ಪ್ರಕೃತಿಮಾತೆ ನಮ್ಮನ್ನು ರಕ್ಷಿಸುತ್ತಾಳೆ. ಪ್ರಕೃತಿ ಎಂದರೆ ಪಂಚಭೂತಗಳು. ಮಾನವ ಭೂಮಿಯನ್ನು ಹಾಳು ಮಾಡುತ್ತಿದ್ದಾನೆ. ಅಂತರ್ಜಲಕ್ಕೆ ಕೈಹಾಕುತ್ತಿದ್ದಾನೆ. ಮಕ್ಕಳ ಸಂತಾನದ ಜೊತೆಗೆ ವೃಕ್ಷ ಸಂತಾನವೂ ಬೇಕು. ಗಿಡ ಮರಗಳು ಇಲ್ಲದೇ ಹೋದರೆ ಮಾನವ ತುಂಬ ಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಭಿವೃದ್ಧಿ ಹೆಸರಿನಲ್ಲಿ ನಗರಗಳ ವಿಸ್ತರಣೆ ಆಗುತ್ತಿದೆ. ಇದರಿಂದಾಗಿ ಅರಣ್ಯ ಸಂಪತ್ತು ಅತ್ಯಲ್ಪವಾಗಿದೆ. ವಾತಾವರಣದಲ್ಲಿ ಅತಿಯಾದ ಕಾರ್ಬನ್‌ ಡೈಯಾಕ್ಸೈಡ್‌ನಿಂದಾಗಿ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದೆ. ಇದು ಅಪಾಯಕಾರಿ ಲಕ್ಷಣ. ಆದ್ದರಿಂದ ಪ್ರಕೃತಿ ಪ್ರೀತಿ ಬೆಳೆಸಿಕೊಳ್ಳಬೇಕಿದೆ. ನಮಗೆ ಜಲ ಹಾಗೂ ವನಸಂಪತ್ತು ಬೇಕು. ಹೊರ ರಾಷ್ಟ್ರಗಳು ಪ್ರಕೃತಿ ಬಗ್ಗೆ ವಿಶೇಷ ಕಾಳಜಿ ತೋರಿಸುತ್ತಿವೆ. ಹಾಗೆಯೇ ಸ್ವಚ್ಛತೆ ಮತ್ತು ಪರಿಸರವನ್ನು ಕಾಪಾಡುವ ಜವಾಬ್ದಾರಿ ಎಲ್ಲರದಾಗಿದೆ ಎಂದು ತಿಳಿಸಿದರು.

ಪೆರಿಯಾರ್‌ ಪ್ರಕಾರ ಮೊದಲು ಮಾನವ, ಆನಂತರ ದೇವರು. ಮಾನವ ದೇವರನ್ನು ಸೃಷ್ಟಿ ಮಾಡಿದ ಎಂದು ಹೇಳಿದ್ದಾರೆ. ಬಸವಣ್ಣನವರು ಕೂಡ ದೇವರಿಗಿಂತ ಕಾಯಕವೇ ಮುಖ್ಯ ಎಂದು ಪ್ರತಿಪಾದಿಸಿದ್ದರು ಎಂದರು.

Advertisement

ವಿಷಯಾವಲೋಕನ ಮಾಡಿದ ನಿವೃತ್ತ ಪ್ರಾಂಶುಪಾಲ ಪ್ರೊ| ಎಚ್. ಲಿಂಗಪ್ಪ, ಭೂಮಿಯ ಮೇಲಿರುವ ಸಂಪತ್ತನ್ನು ಬಳಕೆ ಮಾಡಿಕೊಳ್ಳುವವನು ಮಾನವ. ಆದರೆ ಅದರ ಉಪಯೋಗ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ. ಬರಡಾಗಿರುವ ಭೂಮಿಯನ್ನು ಫಲವತ್ತುಗೊಳಿಸಬೇಕಿದೆ. ಇಂದು ಪ್ರಾಣಿಗಳು ಅಳಿವಿನಂಚಿಗೆ ಸರಿಯುತ್ತಿವೆ. ವಾಯುಮಾಲಿನ್ಯ, ಜಲಮಾಲಿನ್ಯವಾಗುತ್ತಿದೆ. ಅತಿಯಾದ ವಾಹನಗಳಿಂದಾಗಿ ಹೊಗೆ ಪ್ರಮಾಣ ಜಾಸ್ತಿಯಾಗಿ ಜನರ ಮೇಲೆ, ವಾತಾವರಣದ ಮೇಲೆ ಪ್ರಭಾವ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನಮ್ಮಲ್ಲಿ ಅರಣ್ಯ ಪ್ರಮಾಣ ಕಡಿಮೆಯಾಗುತ್ತಿದ್ದು, ಪರಿಸರವನ್ನು ನಾಶ ಮಾಡುವ ಜೀವಿ ಎಂದರೆ ಮಾನವ. ದುರಾಸೆಯಿಂದ ಬುದ್ಧ, ಬಸವ, ಅಂಬೇಡ್ಕರ್‌ ಮೊದಲಾದವರು ಬಹಳ ದೂರ ಇದ್ದರು. ಕಳೆದ ಮೂರ್‍ನಾಲ್ಕು ದಶಕಗಳಿಂದ ಭೂಮಿಯ ತಾಪಮಾನ ಜಾಸ್ತಿಯಾಗುತ್ತಿದೆ. ಔಷಧೋಪಕರಣಗಳು, ಕೈಗಾರಿಕೀಕರಣ, ತ್ಯಾಜ್ಯ ವಸ್ತು ಮೊದಲಾದವು ತಾಪಮಾನ ಬದಲಾವಣೆಗೆ ಮುಖ್ಯ ಕಾರಣ. ಪೆರಿಯಾರ್‌ ಬ್ರಾಹ್ಮಣತ್ವವನ್ನು ವಿರೋಧಿಸಿದರು. ಕೊನೆಯವರೆಗೂ ಬಡವರ ಅಭ್ಯುದಯಕ್ಕಾಗಿ ಶ್ರಮಿಸಿದರು. ಪೆರಿಯಾರ್‌ಗೆ ಪೆರಿಯಾರ್‌ ಅವರೇ ಸರಿಸಾಟಿ ಎಂದು ಬಣ್ಣಿಸಿದರು.ಎಸ್‌ಜೆಎಂ ವಿದ್ಯಾಪೀಠದ ಕಾರ್ಯನಿರ್ವಹಣಾ ನಿರ್ದೇಶಕ ಡಾ| ಜಿ.ಎನ್‌. ಮಲ್ಲಿಕಾರ್ಜುನಪ್ಪ, ಎಸ್‌ಜೆಎಂ ಆಂಗ್ಲಮಾಧ್ಯಮ ಶಾಲೆ ಮುಖ್ಯಾಧ್ಯಾಪಕಿ ಪರಂಜ್ಯೋತಿ, ಪ್ರೊ| ಶಿವಲಿಂಗಪ್ಪ, ಡಾ| ಮಂಜಣ್ಣ, ಪ್ರೊ| ಪರಮೇಶ್ವರಪ್ಪ ಇದ್ದರು. ಬಿ. ನಿರ್ಮಲಾ ಪ್ರಾರ್ಥಿಸಿದರು. ಸೃಜನ ಸ್ವಾಗತಿಸಿದರು. ನವ್ಯ ನಿರೂಪಿಸಿದರು. ಪ್ರೀತಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next