ಬೆಳ್ತಂಗಡಿ : ಬಿ.ಸಿ. ರೋಡ್-ಉಜಿರೆ ರಾ.ಹೆ.ಯ ಬೆಳ್ತಂಗಡಿ ಸಮೀಪದ ಹಳೆಕೋಟೆ ವಾಣಿ ವಿದ್ಯಾಸಂಸ್ಥೆಯ ಬಳಿ ಬೃಹತ್ ಗಾತ್ರದ ಮರವೊಂದು ಹೆದ್ದಾರಿಗೆ ಬಿದ್ದು, ಶುಕ್ರವಾರ ಬೆಳ್ಳಂಬೆಳಗ್ಗೆ ಸುಮಾರು ಮೂರು ತಾಸಿಗೂ ಅಧಿಕ ಸಮಯ ಸಂಚಾರ ಅಸ್ತವ್ಯಸ್ತಗೊಂಡಿತು. ಮರ ತೆರವುಗೊಳ್ಳುವ ತನಕ ವಾಹನಗಳು ಮುಂದಕ್ಕೆ ಚಲಿಸಲಾಗದೆ ಹೆದ್ದಾರಿಯ ಎರಡೂ ಬದಿಗಳಲ್ಲೂ ಸಾಲುಗಟ್ಟಿ ನಿಂತು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪರದಾಡುವಂತಾಯಿತು. ಬೆಳಗ್ಗೆ 7ರ ಸುಮಾರಿಗೆ ಘಟನೆ ಸಂಭವಿಸಿದ್ದು, 10.30ರ ವರೆಗೂ ವಾಹನಗಳು ಬ್ಲಾಕ್‌ನಲ್ಲಿ ಸಿಲುಕಿಕೊಂಡಿದ್ದವು.
ಬೆಳಗ್ಗಯೇ ಘಟನೆ ನಡೆದ ಪರಿಣಾಮ ಶಾಲಾ – ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಸಹಿತ ಕೆಲಸಕ್ಕೆ ತೆರಳುವವರು ಪರದಾಡುವಂತಾಯಿತು. ಹೆಚ್ಚಿನ ಮಂದಿ ಎರಡು ತಾಸು ಕಾಲ ಬಸ್ಸಿನಲ್ಲಿಯೇ ಬಾಕಿಯಾದರೆ, ಇನ್ನು ಕೆಲವರು ಬಸ್ಸಿಗೆ ಕಾದು ರಸ್ತೆ ಬದಿಯಲ್ಲಿ ನಿಂತಿದ್ದರು.
ಜತೆಗೆ ಶಾಲಾ ವಿದ್ಯಾ ರ್ಥಿಗಳನ್ನು ಹೊತ್ತೂಯ್ಯುವ ಶಾಲಾ ವಾಹನ ಗಳೂ ತಾಸುಗಟ್ಟಲೆ ರಸ್ತೆಯಲ್ಲಿ ನಿಂತಿದ್ದವು. ಹೀಗಾಗಿ ವಿದ್ಯಾರ್ಥಿಗಳು, ಶಿಕ್ಷಕರು ಶಾಲಾ – ಕಾಲೇಜುಗಳಿಗೆ ತೆರಳುವುದು ವಿಳಂಬವಾಯಿತು. ಜತೆಗೆ ಕೆಲಸಕ್ಕೆ ತೆರಳುವವರೂ ಕಚೇರಿಗೆ ತಲುಪುವುದು ತಡವಾಯಿತು. ಮರ ಬಿದ್ದಿದೆ ಎಂದು ಖಾಸಗಿ ಬಸ್ಸೊಂದು ರಸ್ತೆ ಬದಿಗೆ ತೆರಳಿದ ಪರಿಣಾಮ ಅಲ್ಲೇ ಹೂತು ಹೋದ ಘಟನೆಯೂ ಸಂಭವಿಸಿದೆ.
ಹಳೆಕೋಟೆಯ ಬಳಿ ಮರ ಬಿದ್ದಿದ್ದರೂ ವಾಹನಗಳು ಸುಮಾರು 3 ಕಿ.ಮೀ.ವರೆಗೂ ಸರತಿ ಸಾಲಿನಲ್ಲಿ ನಿಂತಿದ್ದವು. ಬೆಳ್ತಂಗಡಿ ನಗರ ಸಹಿತ ಒಂದು ಬದಿ ಕಾಶಿಬೆಟ್ಟುವರೆಗೆ, ಗುರುವಾಯನಕೆರೆಯಲ್ಲಿ ಮಂಗಳೂರು ರಸ್ತೆ, ಉಡುಪಿ ರಸ್ತೆ ಹಾಗೂ ಉಪ್ಪಿನಂಗಡಿ ರಸ್ತೆಯಲ್ಲೂ ವಾಹನಗಳು ಬ್ಲಾಕ್ ಆಗಿದ್ದವು. ಕೆಲವೊಂದು ವಾಹನದವರು ವಿರುದ್ಧ ದಿಕ್ಕಿನಲ್ಲೂ ವಾಹನಗಳನ್ನು ಚಲಾಯಿಸಿ, ಎದುರಿನಿಂದ ಬರುವ ವಾಹನಗಳಿಗೆ ಅವಕಾಶ ನೀಡದೆ, ಹೆಚ್ಚಿನ ಟ್ರಾಫಿಕ್ ಜಾಮ್‌ಗೆ ಕಾರಣರಾದರು. ಬಳಿಕ ಬೆಳ್ತಂಗಡಿ ಸಂಚಾರಿ ಪೊಲೀಸರು ಅಂತಹ ವಾಹನದವರನ್ನು ತರಾಟೆಗೆ ತೆಗೆದುಕೊಂಡು ಟ್ರಾಫಿಕ್ ಜಾಮ್ ನಿಯಂತ್ರಿಸಿದರು. ಎಲ್ಲ ರಸ್ತೆಗಳಲ್ಲೂ ವಾಹನಗಳು ಬ್ಲಾಕ್ ಆಗಿದ್ದ ಪರಿಣಾಮ ಮರ ತೆರವುಗೊಂಡ ಬಳಿಕವೂ ವಾಹನ ಸಂಚಾರ ಸಹಜ ಸ್ಥಿತಿಗೆ ಬರುವುದಕ್ಕೆ ಕೊಂಚ ವಿಳಂಬವಾಯಿತು. ಒಂದೆರಡು ಆ್ಯಂಬುಲೆನ್ಸ್ ಗಳೂ ಬ್ಲಾಕ್‌ನಲ್ಲಿ ಸಿಲುಕಿ ಪರದಾಡಿದವು.
ಶಾಲೆಗೆ ರಜೆ
ಗುರುವಾರ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಮದನ್ ಮೋಹನ್ ಅವರು ಮುನ್ನೆಚ್ಚರಿಕೆ ಕ್ರಮವಾಗಿ ಶುಕ್ರವಾರ ರಜೆ ಘೋಷಿಸಿದರು. ಹೀಗಾಗಿ ತಾಲೂಕಿನ ಹೆಚ್ಚಿನ ಶಾಲೆಗಳಿಗೆ ರಜೆ ನೀಡಲಾಗಿತ್ತು. ಆದರೆ ಕೆಲವು ಖಾಸಗಿ ಶಾಲೆಗಳಿಗೆ ವಿದ್ಯಾರ್ಥಿಗಳು ಆಗಮಿಸಿದ್ದ ಪರಿಣಾಮ ರಜೆ ನೀಡಿರಲಿಲ್ಲ. ಆದರೆ ಶುಕ್ರವಾರ ದಿನವಿಡೀ ಮಳೆಯ ಪ್ರಮಾಣ ತಗ್ಗಿತ್ತು.