Advertisement

ಗುಂಡ್ಯ: ಅಂಗಡಿ ಮೇಲೆ ಎರಗಿದ ಬೃಹತ್‌ ಮರ

01:24 AM Apr 26, 2023 | Team Udayavani |

ಉಪ್ಪಿನಂಗಡಿ: ಶಿರಾಡಿ ಗ್ರಾಮದ ಗುಂಡ್ಯ ಮತ್ತು ಪರಿಸರದಲ್ಲಿ ಸುರಿದ ಭಾರೀ ಗಾಳಿ-ಮಳೆಯಿಂದಾಗಿ ಮರವೊಂದು ಉರುಳಿ ಅಂಗಡಿಯೊಂದು ನೆಲ ಸಮಗೊಂಡ ಘಟನೆ ಮಂಗಳವಾರ ಸಾಯಂಕಾಲ ಸಂಭವಿಸಿದೆ.

Advertisement

ಗುಂಡ್ಯ ಪೇಟೆಯಲ್ಲಿ ಹೆದ್ದಾರಿ ಬದಿಯ ಬೃಹತ್‌ ಮರವೊಂದು ರೋಬಿನ್‌ ಅವರ ಅಂಗಡಿಯ ಮೇಲೆ ಉರುಳಿ ಅಂಗಡಿ ಸಂಪೂರ್ಣ ನೆಲ ಸಮಗೊಂಡಿದೆ. ಅಂತೆಯೇ ಶಿರಿಬಾಗಿಲು ಗ್ರಾಮದ ಗುಂಡ್ಯ ತೋಟದ ಪೂವಪ್ಪ ಅವರ ಮನೆಯ ಹಂಚುಗಳು ಹಾಗೂ ಶೀಟುಗಳು ಗಾಳಿಯ ಹೊಡೆಯಕ್ಕೆ ಸಿಲುಕಿ ಹಾರಿ ಹೋಗಿ ಹಾನಿಗೀಡಾಗಿದೆ.

ಗುಂಡ್ಯ ಪರಿಸರದ ಹಲವಾರು ಕಡೆಗಳಲ್ಲಿ ಮರಗಳು ಧರೆಗುರುಳಿದ ಹಿನ್ನೆಲೆಯಲ್ಲಿ ವಿದ್ಯುತ್‌ ಕಂಬಗಳು ಹಾನಿಗೀಡಾಗಿದ್ದು, ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಯಿತು. ಕೆಲವು ಕಡೆ ಹೆದ್ದಾರಿಗೆ ಮರಗಳು ಉರುಳಿದ ಪರಿಣಾಮ ಕೆಲ ಕಾಲ ಹೆದ್ದಾರಿ ಸಂಚಾರಕ್ಕೂ ಅಡೆತಡೆಯಾಗಿತ್ತು. ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬಂದಿ ಮರಗಳ್ನನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಗಾಳಿಯ ಅಬ್ಬರಕ್ಕೆ ಹಲವೆಡೆ ಅಡಿಕೆ ಮರಗಳ ಸಹಿತ ಕೃಷಿ ಬೆಳೆಗಳಿಗೆ ಹಾನಿಯಾಗಿದೆ. ಘಟನ ಸ್ಥಳಕ್ಕೆ ಕಂದಾಯ ಇಲಾಖಾಧಿಕಾರಿಗಳು ಹಾಗೂ ಪಂಚಾಯತ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕ್ಷಣ ಮಾತ್ರದಲ್ಲಿ ಮೂಡಿದ ವಿವೇಕ ಪ್ರಾಣವನ್ನುಳಿಸಿತು
ಗುಂಡ್ಯದಲ್ಲಿ ಭಾರೀ ಗಾಳಿಯೊಂದಿಗೆ ಮಳೆ ಸುರಿಯಲಾರಂಭಿಸಿದಾಗ ಗಾಳಿಯ ಹೊಡೆತಕ್ಕೆ ಅಂಗಡಿಯೊಳಗಿನ ವಸ್ತುಗಳು ಹಾರಿಹೋಗುವ ಸ್ಥಿತಿ ನಿರ್ಮಾಣವಾಗಿತ್ತು. ವಸ್ತುಗಳನ್ನು ರಕ್ಷಿಸಲು ಅಂಗಡಿಯ ಬಾಗಿಲು ಹಾಕಲೆಂದು ಹೊರ ಬಂದ ರೋಬಿನ್‌ ಅವರಿಗೆ ಹೆದ್ದಾರಿ ಬದಿಯ ಬೃಹತ್‌ ಮರವೊಂದು ಧರೆದುರುಳುತ್ತಿದ್ದ ದೃಶ್ಯ ಕಾಣಿಸಿತು. ಕೂಡಲೇ ದೂರಕ್ಕೆ ಓಡಿದ ಅವರು ಹಿಂದಿರುಗಿ ನೋಡುವಷ್ಟರಲ್ಲಿ ಬೃಹತ್‌ ಮರ ಬಿದ್ದು ಅಂಗಡಿ ನೆಲ ಸಮವಾಗಿತ್ತು. ಅಪಘಾತದಿಂದಾಗಿ ಅಂಗವಿಕಲರಾಗಿದ್ದ ರೋಬಿನ್‌ ಅವರ ಜೀವನೋಪಾಯಕ್ಕೆ ಇದ್ದ ಏಕೈಕ ಆಸರೆ ಈ ಅಂಗಡಿ. ಆ ಕ್ಷಣದಲ್ಲಿ ಅಂಗಡಿಯಿಂದ ಹೊರಗೋಡಿ ಬರಲು ಒದಗಿದ ಭಗವಂತನ ಪ್ರೇರಣೆ, ಹಾಗೂ ಅಂಗವೈಕಲ್ಯದ ನಡುವೆಯೂ ಓಡಿಹೋಗಿ ಜೀವ ಉಳಿಸಿಕೊಳ್ಳಲು ಭಗವಂತನ ಪ್ರೇರಣೆಯೇ ಕಾರಣ ಎಂದು ಗದ್ಗದಿತರಾಗಿ ಪತ್ರಿಕೆಗೆ ಪ್ರತಿಕ್ರಿಯಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next