Advertisement

ನಾಡದೋಣಿ ಮೀನುಗಾರರು: ಅಲ್ಲೂ ಇಲ್ಲ , ಇಲ್ಲೂ ಇಲ್ಲ , ಬದುಕೂ ಇಲ್ಲ!

11:25 PM Dec 29, 2022 | Team Udayavani |

ಮಂಗಳೂರು: ನಾಡದೋಣಿ ಮೀನುಗಾರಿಕೆಗೆ ಮೂಲ ಇಂಧನವಾದ ಸೀಮೆಎಣ್ಣೆ ಇತ್ತ ಮುಕ್ತ ಮಾರುಕಟ್ಟೆ , ಅತ್ತ ಸರಕಾರದ ಸಬ್ಸಿಡಿ ರೂಪದಲ್ಲೂ ಸಿಗದ ಕಾರಣ ನೂರಾರು ಮಂದಿ ಮೀನುಗಾರರು ಅತಂತ್ರರಾಗಿದ್ದಾರೆ.

Advertisement

ಪರಿಸರ ಮಾಲಿನ್ಯದ ಹಿನ್ನೆಲೆಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಸೀಮೆಎಣ್ಣೆ ಮಾರಾಟವನ್ನು ನಿಷೇಧಿಸಲಾಗಿದೆ. ಸರಕಾರದ ಸಬ್ಸಿಡಿ ರೂಪದ ಸೀಮೆಎಣ್ಣೆಗೆ ಕಾಯಬೇಕಿದೆ. ಆದರೆ ಇದೂ ನಾಲ್ಕೈದು ತಿಂಗಳುಗಳಿಂದ ಪೂರೈಕೆಯಾಗಿಲ್ಲ.

ಮೀನುಗಾರಿಕೆ ಋತು (ಸೆಪ್ಟಂಬರ್‌-ಮೇ)ವಿನ ವೇಳೆ ಹಿಂದೆ ಪ್ರತೀ ವರ್ಷ ಮಾಸಿಕ ತಲಾ ಗರಿಷ್ಠ 200 ಲೀ.ಗಳಂತೆ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆ ನೀಡಲಾಗುತ್ತಿತ್ತು. ಆ ಬಳಿಕ ಗರಿಷ್ಠ ತಲಾ 300 ಲೀ.ಗಳಿಗೆ ಏರಿಕೆ ಮಾಡಲು ಪ್ರಸ್ತಾವಿಸಲಾಗಿತ್ತು.

ಒಂದು ದಿನದ ಮೀನುಗಾರಿಕೆಗೆ ಕನಿಷ್ಠ 30 ಲೀಟರ್‌ ಸೀಮೆಎಣ್ಣೆ ಬೇಕೆಂಬುದು ಮೀನುಗಾರರ ಬೇಡಿಕೆ. ಆದರೆ ಈ ಮಧ್ಯೆ ಪ್ರಸಕ್ತ ಸಾಲಿನ ಸೆಪ್ಟಂಬರ್‌ನಿಂದ ನವೆಂಬರ್‌ವರೆಗೆ ತಲಾ 290 ಲೀಟರ್‌ ಸೀಮೆಎಣ್ಣೆ ಪೂರೈಕೆಯಾಗಿದೆ. ಇದು ದಿನಕ್ಕೆ 5 ಲೀಟರ್‌ಗಳಿಗಿಂತಲೂ ಕಡಿಮೆ. ಸಬ್ಸಿಡಿ ದರದಲ್ಲಿ ಲೀಟರ್‌ಗೆ 35 ರೂ. ನೀಡಬೇಕು. ಮುಕ್ತ ಮಾರುಕಟ್ಟೆಯಲ್ಲಿ 130 ರೂ. ನೀಡಬೇಕಿದೆ. ಆದರೆ ಈಗ ಎಲ್ಲೂ ಸಿಗದಿರುವುದು ಮೀನುಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಮಂಗಳೂರು, ಉಡುಪಿ, ಕಾರವಾರ ಸೇರಿ ಕರಾವಳಿಯುದ್ದಕ್ಕೆ 8,030 ಪರವಾನಿಗೆ ಪಡೆದ ನಾಡದೋಣಿ ಮೀನುಗಾರರಿದ್ದು, ಸೀಮೆಎಣ್ಣೆ ಪೂರೈಕೆ ವಿಳಂಬದಿಂದ ಬೇರೆ ಉದ್ಯೋಗದತ್ತ ಮುಖ ಮಾಡುವಂಥ ಅನಿವಾರ್ಯ ಎದುರಾಗಿದೆ. ಇವರೊಂದಿಗೆ ಮೀನು ಅಲಭ್ಯತೆಯಿಂದ ವ್ಯಾಪಾರಿಗಳೂ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

Advertisement

ನಮ್ಮ ಸಂಕಷ್ಟಗಳನ್ನು ತಾಳಲಾರದೆ ಸ್ವಲ್ಪ ಸಮಯದ ಹಿಂದೆ ಬೈಂದೂರಿನಿಂದ ಮಂಜೇಶ್ವರದ ವರೆಗೆ ಪ್ರತಿಭಟನೆ ನಡೆಸಲು ಮುಂದಾಗಿದ್ದೆವು. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಉಡುಪಿ ಭೇಟಿ ವೇಳೆ ನೀಡಲಾದ ಭರವಸೆಯ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಗಿತ್ತು ಎನ್ನುತ್ತಾರೆ ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ, ನವಮಂಗಳೂರು ವಲಯ ಅಧ್ಯಕ್ಷ ವಾಸುದೇವ ಕರ್ಕೇರ.

ಸಂಬಂಧಪಟ್ಟ ಎಲ್ಲ ಜನಪ್ರತಿನಿಧಿಗಳಿಗೆ ನಮ್ಮ ಸಮಸ್ಯೆ ವಿವರಿಸಿದ್ದೇವೆ. ಭರವಸೆಯಷ್ಟೆ ಸಿಕ್ಕಿದೆ. ನಾಡದೋಣಿ ಮೀನುಗಾರರನ್ನು ಅವಗಣಿಸಲಾಗುತ್ತಿದೆ ಎಂಬ ಶಂಕೆ ವ್ಯಕ್ತಪಡಿಸುತ್ತಾರೆ ದ.ಕ. ಕರಾವಳಿ ಮೂಲ ಮೀನುಗಾರರ ಸಂಘದ ಅಧ್ಯಕ್ಷ ಅಶ್ವತ್ಥ ಕಾಂಚನ್‌.

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಮೂರು ಜಿಲ್ಲೆಗಳಲ್ಲಿ ನಾಡದೋಣಿಗಳ ಸಂಖ್ಯೆಗೆ ಪೂರಕವಾಗಿ 4,514 ನಾಡದೋಣಿಗಳಿಗೆ ಸೀಮೆಎಣ್ಣೆ ವಿತರಿಸಲಾಗುತ್ತಿದೆ. ಈ ಸಾಲಿನಲ್ಲಿ ಕೇಂದ್ರ ಸರಕಾರದಿಂದ 5,472 ಕಿ.ಲೀ. ಸೀಮೆಎಣ್ಣೆ ಬಿಡುಗಡೆಯಾಗಿದೆ. ಇನ್ನೂ 18,618 ಕಿ.ಲೀ. ಬಿಡುಗಡೆಯಾಗಬೇಕಿದೆ. ಹಾಗಾಗಿ ಕೈಗಾರಿಕಾ ಸೀಮೆಎಣ್ಣೆ ಖರೀದಿಸಿ ಪೂರೈಸಲು ಮುಖ್ಯಮಂತ್ರಿಯವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ.ಎಸ್‌. ಅಂಗಾರ, ಮೀನುಗಾರಿಕೆ ಸಚಿವರು 

 -ಸತ್ಯಾ ಕೆ.

Advertisement

Udayavani is now on Telegram. Click here to join our channel and stay updated with the latest news.

Next