Advertisement
ಆತನ ಬಳಿ ಎಲ್ಲವೂ ಇತ್ತು. ಆಸ್ತಿ, ಅಂತಸ್ತು, ಮನೆ, ಸಾಮಾಜಿಕವಾಗಿ ಗಣ್ಯ ಸ್ಥಾನಮಾನ, ಎಲ್ಲವೂ. ರೋಗಿಗಳು ಆತನ ಮುಖ ದರ್ಶನಕ್ಕೇ ಕೃತಾರ್ಥರಾಗುತ್ತಿದ್ದರು. ಹೀಗಿದ್ದರೂ ಅದೊಂದು ದಿನ ಬೆಳಿಗ್ಗೆ ತನ್ನ ಮನೆಯಲ್ಲಿ ಹೆಣವಾಗಿ ಬಿದ್ದಿದ್ದ.
ಕಳೆದ ವರ್ಷ ದೇಶದ ಪ್ರಮುಖ ವೈದ್ಯಕೀಯ ನಿಯತಕಾಲಿಕಗಳಲ್ಲೊಂದಾದ Indian Journal of Psychiatry ಪ್ರಕಟಿಸಿದ ವೈದ್ಯಕೀಯ ಲೇಖನ ಭಾರತದ ವೈದ್ಯರ ಮಾನಸಿಕ ಸ್ಥಿತಿಗತಿಯನ್ನು ಬಿಚ್ಚಿಟ್ಟಿದೆ. ದೇಶದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳಲ್ಲೊಂದಾದ ಕಎಐ ಇಜಚnಛಜಿಜಚrಜನ ವೈದ್ಯರ ಮೇಲೆ ನಡೆಸಿದ ಸಮೀಕ್ಷೆ ಆಧರಿತ ಈ ಲೇಖನದಲ್ಲಿ ಪ್ರಕಟವಾಗಿರುವ ಅಂಕಿಅಂಶಗಳು ನಿಜಕ್ಕೂ ಆತಂಕಕಾರಿ. ಇದರ ಪ್ರಕಾರ ಶೇ.30ರಷ್ಟು ವೈದ್ಯರು ಮಾನಸಿಕ ಖನ್ನತೆಗೆ ತುತ್ತಾಗುತ್ತಿದ್ದಾರೆ ಹಾಗೂ ಪ್ರತಿಶತ 17ರಷ್ಟು ವೈದ್ಯರು ಆತ್ಮಹತ್ಯಾ ಯೋಚನೆಗೂ ಒಳಗಾಗುತ್ತಿದ್ದಾರೆ. ಇದು ನಿಜಕ್ಕೂ ತೀವ್ರ ಕಳವಳಕಾರಿ ಸಂಗತಿ. 2018ರಲ್ಲಿ Indian Journal of Critical Care Medicine ಮತ್ತು Indian Journal of Social Psychiatry ಎಂಬ ಮತ್ತೆರಡು ವೈದ್ಯಕೀಯ ನಿಯತಕಾಲಿಕಗಳು ಪ್ರಕಟಿಸಿರುವ ಲೇಖನಗಳೂ ಹೆಚ್ಚುಕಡಿಮೆ ಇವೇ ಅಂಶಗಳನ್ನು ಪುಷ್ಟೀಕರಿಸುತ್ತವೆ.
Related Articles
Advertisement
ವೃತ್ತಿ ಸಂಬಂಧಿ ಕಾರಣಗಳು ವೈದ್ಯ ವೃತ್ತಿ ಉದಾತ್ತ ಹಾಗೂ ಅತೀವ ಆತ್ಮತೃಪ್ತಿ ಕೊಡುವ ವೃತ್ತಿಗಳಲ್ಲೊಂದೆಂಬುದು ನಿಸ್ಸಂಶಯ. ಆದರೂ ಭಾರತದಂತಹ ಜನಸಂಖ್ಯಾ ಬಾಹುಳ್ಯದ ದೇಶದಲ್ಲಿ ವೈದ್ಯರ ಸಂಖ್ಯಾ ಅನುಪಾತ ಜನಸಂಖ್ಯೆಗೆ ಹೋಲಿಸಿದಲ್ಲಿ ತೀರಾ ಕಡಿಮೆಯಿರುವುದು ಸ್ಪಷ್ಟ. ವಿಶ್ವ ಆರೋಗ್ಯ ಸಂಸ್ಥೆಯೂ ಇದನ್ನು ದೃಢೀಕರಿಸಿದೆ. ಇದರಿಂದಾಗಿ ವೈದ್ಯರು ತೀವ್ರ ಕೆಲಸದ ಒತ್ತಡಕ್ಕೆ ಗುರಿಯಾಗುತ್ತಿದ್ದಾರೆ. ಅವೇಳೆಯಲ್ಲಿನ ಕೆಲಸ, ರಜಾ ದಿನಗಳ ಕೊರತೆ, ಮನರಂಜನಾ ಚಟುವಟಿಕೆಗಳಿಗೆ ಸಮಯದ ಅಭಾವ ಇವೆಲ್ಲವೂ ವೈದ್ಯರ ಮಾನಸಿಕ ಸ್ಥಿತಿಯನ್ನು ಹದಗೆಡಿಸುತ್ತಿವೆ. ಜೊತೆಗೆ ವೈದ್ಯರ ಬಗ್ಗೆ ರೋಗಿಗಳಿಗೆ ಇರುವ ವಿಪರೀತ ನಿರೀಕ್ಷೆಗಳಿಂದಾಗಿ ಚಿಕಿತ್ಸಾ ವೈಫಲ್ಯದ ಭಯವೂ ವೈದ್ಯರನ್ನು ಕಾಡುತ್ತಿದೆ. ಇವಿಷ್ಟೂ ಸಾಲದು ಎಂಬಂತೆ ರೋಗಿ/ಸಂಬಂಧಿಕರಿಂದ ವೈದ್ಯರ ಮೇಲಿನ ದೈಹಿಕ ಹಾಗೂ ಮಾನಸಿಕ ಹಲ್ಲೆಗಳೂ ಇತ್ತೀಚೆಗೆ ಮಿತಿಮೀರುತ್ತಿವೆ. ಇದರಿಂದಾಗಿ ವೈದ್ಯರು ಅಕ್ಷರಶಃ ಭಯದ ನೆರಳಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದು ವೈದ್ಯರ ಮಾನಸಿಕ ನೆಮ್ಮದಿಯನ್ನು ಛಿದ್ರವಾಗಿಸಿದೆ. ಸಾಮಾಜಿಕ ಕಾರಣಗಳು
ವೈದ್ಯಕೀಯ ವೃತ್ತಿ ಇಂದು ಕೇವಲ ಉದಾತ್ತ ಸೇವಾವೃತ್ತಿಯಾಗಿ ಉಳಿದಿಲ್ಲ. ಯಾವಾಗ ವೈದ್ಯವೃತ್ತಿಯನ್ನು ಗ್ರಾಹಕ ಸೇವಾ ಕಾಯಿದೆ ಯಡಿ ತರಲಾಯಿತೋ ಅಂದಿನಿಂದಲೇ ವೈದ್ಯನ ಕಷ್ಟಕೋಟಲೆಗಳೂ ಆರಂಭವಾದವು. ವೈದ್ಯಕೀಯ ನಿರ್ಲಕ್ಷ್ಯ ಹಾಗೂ ಸೇವಾನ್ಯೂನತೆ ಕಾಲಂನಡಿಯಲ್ಲಿ ಭಾರೀ ಮೊತ್ತದ ದಂಡ/ ಜುಲ್ಮಾನೆಗೆ ಒಳಗಾಗುವ ಸಾಧ್ಯತೆಯು ಎಲ್ಲ ವೈದ್ಯರನ್ನೂ ಭಯ, ಆತಂಕದಲ್ಲೇ ಕೆಲಸ ಮಾಡುವ ಅನಿವಾರ್ಯತೆಗೆ ದೂಡಿದೆ. ಎಷ್ಟೋ ಸಂದರ್ಭಗಳಲ್ಲಿ ಹಣಕ್ಕೋಸ್ಕರ ವೈದ್ಯರನ್ನು ಹುಸಿ ಪ್ರಕರಣಗಳಲ್ಲಿ ಬಲಿಪಶುಗಳನ್ನಾಗಿಸುತ್ತಿರುವುದೂ ಆತಂಕಕಾರಿ ಬೆಳವಣಿಗೆ. ಕತ್ತು ಹಿಸುಕುತ್ತಿರುವ ಬಂಡವಾಳಶಾಹಿ ಕೈಗಳು
ಕಳೆದೆರಡು ದಶಕದಿಂದೀಚೆಗೆ ನಮ್ಮನ್ನಾಳುತ್ತಿರುವ ಸರಕಾರಗಳೆಲ್ಲ ಬಂಡವಾಳಶಾಹಿಗಳನ್ನು ಕೊಬ್ಬಿಸುತ್ತಿವೆ. ಇದರಿಂದಾಗಿ ಇಂದು ಕಾರ್ಪೊರೇಟ್ ಆಸ್ಪತ್ರೆಗಳು ಎಲ್ಲೆಂದರಲ್ಲಿ ಎಗ್ಗಿಲ್ಲದೆ ತಲೆ ಎತ್ತಿದ್ದು, ವೈದ್ಯಕೀಯ ಬಹುದೊಡ್ಡ ಉದ್ಯಮವಾಗಿ ಬೆಳೆದಿದೆ. ರಂಗುರಂಗಿನ, ಭವ್ಯ ವೈಭವೋಪೇತ ಕಾರ್ಪೊರೇಟ್ ಆಸ್ಪತ್ರೆಗಳಿಂದ ಮಾತ್ರ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂಬ ಮಿಥ್ಯೆಯನ್ನು ವ್ಯವಸ್ಥಿತವಾಗಿ ಜನರ ತಲೆಗೆ ತುಂಬಲಾಗುತ್ತಿದೆ. ಇದರಿಂದಾಗಿ ಸುಮಾರು ಶೇ.70ರಷ್ಟು ಸಣ್ಣ ಆಸ್ಪತ್ರೆಗಳು-ಕ್ಲಿನಿಕ್‌ಗಳು ಈಗಾಗಲೇ ಸೊರಗಿವೆ ಅಥವಾ ಕಣ್ಣು ಮುಚ್ಚಿವೆ. ಹಾಗಾಗಿ ವೈದ್ಯ ಪದವೀಧರರು, ಬೇರೆ ದಾರಿಕಾಣದೆ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ದುಡಿಯುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಉದ್ಯಮಿಗಳ ಮಾಲಿಕತ್ವದ ಈ ಆಸ್ಪತ್ರೆಗಳಲ್ಲಿ ಎಂಬಿಎಗಳು ಇಲ್ಲಿ ಕೆಲಸ ಮಾಡುವ ವೈದ್ಯರನ್ನಾಳು ತ್ತಿದ್ದಾರೆ. ಇಲ್ಲಿ ವೈದ್ಯರ ಶೋಷಣೆ ಎಗ್ಗಿಲ್ಲದೆ ನಡೆಯುತ್ತಿದೆ. ಲಕ್ಷಗಟ್ಟಲೆ ಬಿಲ್ ಮಾಡುವ ಈ ಆಸ್ಪತ್ರೆಗಳು, ವೈದ್ಯರಿಗೆ ನೀಡುವುದು ಬಿಡಿಗಾಸು ಮಾತ್ರ. ಇದನ್ನರಿಯದ ಜನ ಸಾಮಾನ್ಯರಿಗೆ, ವೈದ್ಯರು ಹಣದೋಚುವ ಡಕಾಯಿತರಂತೆ ಖಳನಾಯಕರಂತೆ ಕಾಣುತ್ತಾರೆ. ಆದರೆ ವೈದ್ಯರು ಇಲ್ಲಿ ಕೈಗೊಂಬೆಗಳು ಮಾತ್ರ ಎಂಬ ಭೀಕರ ವಾಸ್ತವ ಅರ್ಥವಾಗುವುದೇ ಇಲ್ಲ. ವೈದ್ಯನ ಇಷ್ಟೆಲ್ಲಾ ಗಾಯಗಳ ಮೇಲೆ ಬರೆ ಎಳೆದಂತೆ ರಾಜಕಾರಣಿಗಳು ಹಾಗೂ ಸಂಭಾವಿತರ ಸೋಗಿನ ಗಣ್ಯ ವ್ಯಕ್ತಿಗಳು ಪೈಪೋಟಿಗೆ ಬಿದ್ದವರಂತೆ ವೈದ್ಯರನ್ನು ತುತ್ಛವಾಗಿ ಬೈದು ನಾಲಿಗೆಯ ಚಪಲ ತೀರಿಸಿಕೊಳ್ಳುತ್ತಿದ್ದಾರೆ. ಅನಿಷ್ಟಗಳಿಗೆಲ್ಲಾ ಶನಿಯೇ ಕಾರಣ ಎಂಬಂತೆ ಸಮಾಜದ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ವೈದ್ಯನೇ ಕಾರಣ ಎಂದು ದೂಷಿಸಲಾಗುತ್ತಿದೆ. ಇದು ವೈದ್ಯರ ಆತ್ಮಸ್ಥೈರ್ಯವನ್ನು ಕುಂದಿಸುತ್ತದೆ. ಸರಕಾರಗಳ ಹಾಗೂ ವೈದ್ಯಕೀಯ ಪರಿಷತ್ತುಗಳ ಇತ್ತೀಚಿನ ಕರಾಳ ಕಾಯಿದೆಗಳೂ (KMPEA,PNDTA) ಕೂಡ ವೈದ್ಯರನ್ನು ಅಕ್ಷರಶಃ ಹೈರಾಣಾಗಿಸಿವೆ. ಕೆಲವು ಕಾಯಿದೆಗಳಂತೂ ಅವೈಜ್ಞಾನಿಕವೂ, ಅತಾರ್ಕಿಕವೂ ಆಗಿದ್ದು ವೈದ್ಯರನ್ನು ಶೋಷಿಸುವುದಕ್ಕಾಗಿಯೇ ಇವೆಯೇನೋ ಎಂಬಂತಿವೆ. ನಕಲಿ ವೈದ್ಯರಂತೂ ಯಾವ ಕಾಯಿದೆ ಕಾನೂನುಗಳ ಭಯವಿಲ್ಲದೆ ರಾಜಾರೋಷವಾಗಿ ವಿಜೃಂಭಿಸುತ್ತಿದ್ದಾರೆ. ಪ್ರಜ್ಞಾವಂತ ವೈದ್ಯರು ಮೌನವಾಗಿ, ನಿಸ್ಸಹಾಯಕರಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದಾರೆ. ವೈಯಕ್ತಿಕ ಕಾರಣಗಳು
ವೃತ್ತಿ ಬದುಕಿನ ಅತೀವ ಒತ್ತಡ, ಜಂಜಡಗಳು ವೈದ್ಯರ ಖಾಸಗಿ ಬದುಕನ್ನು ಮೂರಾಬಟ್ಟೆಯಾಗಿಸುತ್ತಿವೆ. ಇದರಿಂದಾಗಿ ಕೌಟುಂಬಿಕ ಕಲಹ, ಸಾಂಸಾರಿಕ ತಾಪತ್ರಯ, ಕೆಲವೊಮ್ಮೆ ಆರ್ಥಿಕ ಅಡಚಣೆಗಳು ವೈದ್ಯರನ್ನು ತೀವ್ರವಾಗಿ ಬಾಧಿಸುತ್ತಿವೆ. ವೈದ್ಯರು ಸಾರ್ವಜನಿಕ ಬದುಕಲ್ಲಿ ತಮ್ಮ ವೃತ್ತಿ ಘನತೆ ಹಾಗೂ ಸ್ಥಾನಮಾನ ಕಾಪಾಡಿಕೊಳ್ಳುವ ಅನಿವಾರ್ಯತೆಯಿಂದಾಗಿ ಖಾಸಗಿ ಬದುಕನ್ನು ಬಲಿಕೊಡಬೇಕಾದ ಸನ್ನಿವೇಶಗಳೂ ಬರುವುದಿದೆ. ಇದರಿಂದಾಗಿ ಮಾನಸಿಕ ನೆಮ್ಮದಿ ಮರೀ ಚಿಕೆಯಾಗುತ್ತಿದೆ. ಕುಟುಂಬಕ್ಕೆ ಬೇಕಾದಷ್ಟು ಸಮಯ ಕೊಡುತ್ತಿಲ್ಲ ವೆಂಬುದು ಹೆಚ್ಚಿನ ಎಲ್ಲಾ ವೈದ್ಯ ಕುಟುಂಬದವರ ಕೊರಗಾಗಿದೆ. ಇವಿಷ್ಟು ಮಾತ್ರವಲ್ಲದೆ, ವೈದ್ಯರಿಗೆ ಸಾಮಾನ್ಯವಾಗಿ ತಮ್ಮ ವೃತ್ತಿ ಬದುಕಿನಿಂದಾಚೆ ಗೆಳೆಯರು ತೀರಾ ಕಡಿಮೆ. ಹೆಚ್ಚಿನ ವೈದ್ಯರಿಗೆ ಅವರ ವೃತ್ತಿ ಬಿಟ್ಟರೆ, ಸಮಾಜದಲ್ಲಿ ಬೇರೆ ಗುರುತು (Identity) ಇರುವುದಿಲ್ಲ ಇದರಿಂದಾಗಿ ವೈದ್ಯರನ್ನು ಒಂಟಿತನವೂ ಕಾಡುತ್ತಿದೆ. ಈ ಎಲ್ಲಾ ಕಾರಣಗಳಿಂದ ವೈದ್ಯರು ಮಾನಸಿಕ ಸಮಸ್ಯೆಗಳಿಗೆ ಎಲ್ಲರಿಗಿಂತ ಹೆಚ್ಚಾಗಿ ಗುರಿಯಾಗುತ್ತಿದ್ದಾರೆ. ಈ ಬಗ್ಗೆ ಎಲ್ಲರೂ ಗಂಭೀರವಾಗಿ ಯೋಚಿಸಬೇಕಾಗಿದೆ. ಏಕೆಂದರೆ ಇದು ಕೇವಲ ವೈದ್ಯನೊಬ್ಬನ ಸಮಸ್ಯೆಯಲ್ಲ ಪರೋಕ್ಷವಾಗಿ ಸಾಮಾಜಿಕ ಸಮಸ್ಯೆ ಕೂಡ ಹೌದು. ಪರಿಹಾರವೇನು?
ಇದನ್ನು ಪರಿಹರಿಸುವುದರಲ್ಲಿ ಸಮಾಜದ ಪಾತ್ರ ಬಹು ದೊಡ್ಡ ದಿದೆ. ಬಹುಮುಖ್ಯವಾಗಿ, ವೈದ್ಯರ ಮೇಲಿನ ಹಲ್ಲೆಗಳು ಸಂಪೂರ್ಣ ವಾಗಿ ಕೊನೆಯಾಗಬೇಕು. ವೈದ್ಯನೂ ನಮ್ಮ ನಿಮ್ಮಂತೆ ಒಬ್ಬ ಮನುಷ್ಯ ಮಾತ್ರ, ಅವನಿಗೂ ಇತಿಮಿತಿಗಳಿವೆ ಎಂಬುದನ್ನು ಜನ ಅರಿತು ವೈದ್ಯರ ಮೇಲೆ ಮಾನವೀಯತೆ, ಸಹನೆ ಬೆಳೆಸಿಕೊಳ್ಳಬೇಕಾಗಿದೆ. ವೈದ್ಯರು ನಿಮ್ಮಲ್ಲಿ ಮಾಡುವ ವಿನಂತಿ ಇಷ್ಟೆ, ಅತಿಯಾದ ನಿರೀಕ್ಷೆಗಳನ್ನಿಟ್ಟು ವೈದ್ಯೋ ನಾರಾಯಣೋಹರಿಃ ಎಂದು ವೈದ್ಯನನ್ನು ದೇವತಾ ಮಟ್ಟಕ್ಕೆ ಏರಿಸಬೇಡಿ ಅಥವಾ ವೈದ್ಯರೆಲ್ಲಾ ಕೊಲೆಗಡುಕರು, ದರೋಡೆಕೋರರು ಎಂದು ಕೀಳು ರಾಕ್ಷಸಿ ಮಟ್ಟಕ್ಕೆ ಇಳಿಸಲೂ ಬೇಡಿ. ವೈದ್ಯರನ್ನು ಮನುಷ್ಯರಂತೆ ಕಂಡರೆ ಸಾಕು. ಸರಕಾರಗಳೂ ಅಷ್ಟೆ, ವಿಧವಿಧವಾದ ಕರಾಳ ಕಾಯಿದೆಗಳ ಹೆಸರಿನಲ್ಲಿ ವೈದ್ಯರನ್ನು ಶೋಷಿಸುವುದನ್ನು ನಿಲ್ಲಿಸಬೇಕು. ವೃತ್ತಿನಿರತ ವೈದ್ಯರ ರಕ್ಷಣೆಗೆ ಕ್ರಮಗಳನ್ನು ಕೈಗೊಳ್ಳಬೇಕು. ವೈದ್ಯರ ಮೇಲೆ ಸಮಾಜಕ್ಕೆ ವಿಶ್ವಾಸ ಮೂಡಿಸುವ ಕ್ರಮಗಳನ್ನು ಕೈಗೊಳ್ಳಬೇಕೇ ವಿನಃ ವೈದ್ಯರನ್ನ ಸುಖಾಸುಮ್ಮನೆ, ಕೀಳು ಪ್ರಚಾರಪ್ರಿಯತೆಗಾಗಿ ದೂಷಿಸುವುದನ್ನು ನಿಲ್ಲಿಸಬೇಕು. ಆಸ್ಪತ್ರೆಗಳಲ್ಲಿ ದುಡಿಯುವ ವೈದ್ಯ ವರ್ಗದ ಹಿತಾಸಕ್ತಿಗಳನ್ನು ಕಾಯಬೇಕು. ಇವಿಷ್ಟು ಮಾಡಿದರೆ, ವೈದ್ಯರೂ ತುಸು ನೆಮ್ಮದಿಯ ನಿಟ್ಟುಸಿರು ಬಿಡುವಂತಾದೀತು, ವೈದ್ಯರ ಆರೋಗ್ಯವೂ ಸುಧಾರಿಸೀತು. ಈ ಸಮಸ್ಯೆಗಳನ್ನು ಉಪೇಕ್ಷಿಸಿದರೆ ಮುಂದೊಂದು ದಿನ ವೈದ್ಯರ ಮನಃಸ್ಥಿತಿ ಇನ್ನಷ್ಟು ಹದಗೆಟ್ಟು, ಸಮಾಜ ಇದಕ್ಕೆ ಭಾರೀ ಬೆಲೆ ತೆರಬೇಕಾದೀತು. ಡಾ. ಗಣೇಶ್ ಪ್ರಸಾದ್ ವಿ.