ಮಂಗಳೂರು: ಕೋವಿಡ್ 19 ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ಕೊಡಿಸಲು ಸರಕಾರ ಮುಂದಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 30 ಆಸ್ಪತ್ರೆಗಳನ್ನು ಗುರುತಿಸಿದೆ.
ಈ ಪೈಕಿ 12 ಆಸ್ಪತ್ರೆಗಳು ತತ್‌ಕ್ಷಣಕ್ಕೇ ಸ್ಪಂದಿಸಿ ಕೋವಿಡ್ 19 ರೋಗಿಗಳ ಸೇವೆಗಿಳಿಯುವ ಭರವಸೆ ನೀಡಿವೆ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಡಿಸುವ ಉದ್ದೇಶ ಸರಕಾರದ್ದು. ರಾಜ್ಯದಲ್ಲಿ ಒಟ್ಟು 483 ಖಾಸಗಿ ಆಸ್ಪತ್ರೆಗಳನ್ನು ಗೊತ್ತುಪಡಿಸಲಾಗಿದೆ. ಜಿಲ್ಲೆಯ 18 ಆಸ್ಪತ್ರೆಗಳ ಮುಖ್ಯಸ್ಥರು ಸಮಯಾವಕಾಶ ಕೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಿಗದಿತ ದರದಲ್ಲೇ ಚಿಕಿತ್ಸೆ
ಎಲ್ಲ ಆಸ್ಪತ್ರೆಗಳಲ್ಲಿಯೂ ಸರಕಾರ ನಿಗದಿ ಪಡಿಸಿದ ದರದಲ್ಲಿಯೇ ಚಿಕಿತ್ಸೆ ಸಿಗುತ್ತದೆ. ಆಸ್ಪತ್ರೆಗಳಿಗೆ ಆಯಾ ಜಿಲ್ಲೆಗಳ ಆರೋಗ್ಯ ಇಲಾಖೆಗಳ ಶಿಫಾರಸಿನೊಂದಿಗೆ ತೆರಳಿದರೆ ಚಿಕಿತ್ಸಾ ಶುಲ್ಕ ಕಡಿಮೆಯಾಗುತ್ತದೆ.
ನೇರವಾಗಿ ತೆರಳಿದರೆ ಸರಕಾರ ನಿಗದಿಪಡಿಸಿದ ತುಸು ಹೆಚ್ಚಿನ ಶುಲ್ಕವನ್ನು ನೀಡಬೇಕಾಗುತ್ತದೆ. ಎಲ್ಲ ಆಸ್ಪತ್ರೆಗಳಲ್ಲಿ ಶೇ. 50 ಹಾಸಿಗೆಗಳನ್ನು ಆರೋಗ್ಯ ಇಲಾಖೆಯಿಂದ ಶಿಫಾರಸು ಮಾಡಿದ ಕೋವಿಡ್ 19 ರೋಗಿಗಳ ಚಿಕಿತ್ಸೆಗೆಂದೇ ಮೀಸಲಿಡಬೇಕು. ರೋಗಿಗಳಿಗೆ ಸರಕಾರ ನಿಗದಿಪಡಿಸಿದ ದರದಲ್ಲೇ ಚಿಕಿತ್ಸೆ ನೀಡಬೇಕು.
ಯಾವುದೇ ಕಾರಣಕ್ಕೂ ಹೆಚ್ಚುವರಿ ಹಣ ವಸೂಲಿ ಮಾಡುವಂತಿಲ್ಲ ಎಂದು ನಿರ್ದೇಶನ ನೀಡಲಾಗಿದೆ. ಆರೋಗ್ಯ ವಿಮೆ ಹೊಂದಿರುವವರಿಗೆ ಈ ದರ ಅನ್ವಯವಾಗುವುದಿಲ್ಲ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.