ಚಾಮರಾಜನಗರ: ಹಲ್ಲು ನೋವಿಗೆ ಚಿಕಿತ್ಸೆ ಪಡೆಯಲು ಹೋದ ಮಹಿಳೆಯೊಬ್ಬರು ವೈದ್ಯರ ನಿರ್ಲಕ್ಷ್ಯದಿಂದಾಗಿ ಶಾಶ್ವತ ಅಂಗವಿಕಲತೆಗೆ ಒಳಗಾಗಿರುವ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ನ್ಯಾಯಲಯವು ಖಾಸಗಿ ವೈದ್ಯರೊಬ್ಬರಿಗೆ 9,24,605 ರೂ.ಗಳನ್ನು ದಂಡದ ರೂಪದಲ್ಲಿ ಪರಿಹಾರ ನೀಡುವಂತೆ ಆದೇಶಿಸಿದೆ.
ನಗರದ ಅಗ್ರಹಾರ ಬೀದಿಯಲ್ಲಿರುವ ಗಿರಿಜಾ ಡೆಂಟಲ್ ಕೇರ್‌ನ ದಂತ ವೈದ್ಯ ಡಾ. ಮಂಜುನಾಥ್ ಅವರಿಗೆ ಜಿಲ್ಲಾ ಗ್ರಾಹಕರ ನ್ಯಾಯಾಲಯ ದಂಡ ವಿಧಿಸಿದೆ.
ನ್ಯಾಯಾಧೀಶರಾದ ಎಂ.ವಿ. ಭಾರತಿ ಹಾಗೂ ಸದಸ್ಯ ಕೆ.ಎಸ್. ರಾಜು ಅವರ ಪೀಠ ಸೇವಾ ನ್ಯೂನತೆ ಮತ್ತು ಚಿಕಿತ್ಸೆ ನೀಡುವಾಗ ಬೇಜವ್ದಾರಿ ತೋರಿರುವುದು ವಿಚಾರಣೆ ಹಾಗೂ ವೈದ್ಯಕೀಯ ದಾಖಲೆಯಲ್ಲಿ ದೃಢಪಟ್ಟಿದೆ. ಅಲ್ಲದೇ ರೋಗಿಗೆ ಪ್ರಾಥಮಿಕ ಹಂತದ ಪರೀಕ್ಷೆಗಳನ್ನು ಮಾಡದೇ ನೇರವಾಗಿ ಇಂಜೆಕ್ಷನ್ ನೀಡಿರುವುದು ಸೇವಾ ನ್ಯೂನತೆಯಾಗಿದ್ದು, ಇದಕ್ಕಾಗಿ ರೋಗಿ ಸುಕನ್ಯಾ ಅವರಿಗೆ ವೈದ್ಯಕೀಯ ವೆಚ್ಚ 6,14,605 ರೂ. ಹಾಗೂ 3 ಲಕ್ಷ ರೂ. ಪರಿಹಾರ ಮತ್ತು 10 ಸಾವಿರ ದಂಡ ಸೇರಿ 9,24,605 ರೂ.ಗಳನ್ನು ಪಾವತಿ ಮಾಡುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.
ಸುಕನ್ಯಾ ಅವರು ಜಿಲ್ಲಾ ಗ್ರಾಹಕರ ನ್ಯಾಯಾಲಯಕ್ಕೆ ತಮ್ಮ ವಕೀಲರಾದ ಧಾರವಾಡದ ಬಸವಪ್ರಭು ಹೊಸಕೇರಿ ಅವರ ಮುಖಾಂತರ 2022ರ ಮಾ. 25 ರಂದು ವೈದ್ಯರ ವಿರುದ್ದ ದಾವೆ ಹೂಡಿದ್ದರು. ಒಂದು ವರ್ಷ ನಾಲ್ಕು ತಿಂಗಳು ಕಾಲ ವಿಚಾರಣೆ ನಡೆಸಿ, ಅನೇಕ ತಜ್ಞ ವೈದ್ಯರ ಅಭಿಪ್ರಾಯಗಳನ್ನು ಸಂಗ್ರಹಿಸಿ ಅಂತಿಮವಾಗಿ ವೈದ್ಯ ಡಾ. ಮಂಜುನಾಥ್ ಸೇವಾ ನ್ಯೂನತೆ, ಬೇಜವಾಬ್ದಾರಿಯಿಂದ ಮಹಿಳೆಯು ಶಾಶ್ವತವಾಗಿ ಎಡ ಕೈ ಮತ್ತು ಎಡ ಕಾಲಿನ ಸ್ವಾಧೀನವನ್ನು ಕಳೆದುಕೊಳ್ಳುವಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ವೈದ್ಯರಿಂದ 9.24 ಲಕ್ಷ ರೂ.ಗಳ ಪರಿಹಾರವನ್ನು ಕಟ್ಟಿಕೊಡುವಂತೆ ಆದೇಶ ನೀಡಿದ್ದಾರೆ.
ಘಟನೆ ವಿವರ : ನಗರದ ರಥದ ಬೀದಿಯಲ್ಲಿರುವ ಲೇಟ್ ಕೆ.ಬಿ. ಸುಂದರ್ ಅವರ ಪತ್ನಿ ಸುಕನ್ಯಾ ಅವರು 2021ರ ಫೆ. 3 ರಂದು ನಗರದ ಆಗ್ರಹಾರ ಬೀದಿಯಲ್ಲಿರುವ ಗಿರಿಜಾ ಡೆಂಟಲ್ ಕೇರ್‌ನ ವೈದ್ಯ ಡಾ. ಮಂಜುನಾಥ್ ಅವರಿಗೆ ಹಲ್ಲು ನೋವಿಗೆ ಚಿಕಿತ್ಸೆ ಪಡೆಯಲು ಹೋಗಿದ್ದಾರೆ. ಡಾ. ಮಂಜುನಾಥ್ ಅವರು ದವಡೆಗೆ ಅರವಳಿಕೆ ನೀಡಿದ ಪರಿಣಾಮ ಸುಕನ್ಯಾ ಅವರು ಕುಸಿದು ಬಿದ್ದಿದ್ದಾರೆ. ಎಡಕೈ ಹಾಗೂ ಎಡಗಾಲಿನ ಸ್ವಾಧೀನ ಕಳೆದುಕೊಂಡಿದ್ದಾರೆ. ಸುಕನ್ಯಾ ಅವರನ್ನು ಡಾ. ಮಂಜುನಾಥ್ ಮರಿಯಾಲದ ಬಳಿ ಇದ್ದ ಬಸವರಾಜೇಂದ್ರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲಿನ ವೈದ್ಯರ ಸೂಚನೆಯಂತೆ ವಿಳಂಬವಾಗಿ ಮೈಸೂರಿನ ನಾರಾಯಣ ಅಸ್ಪತ್ರೆಗೆ ಸೇರ್ಪಡೆ ಮಾಡಿದ್ದಾರೆ. ಬಳಿಕ ಅಲ್ಲಿ ಕೆಲವು ವಾರಗಳ ಚಿಕಿತ್ಸೆಯ ನಂತರ ಸುಕನ್ಯಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆದರೆ, ವೈದ್ಯರು ತೋರಿದ ನಿರ್ಲಕ್ಷ್ಯದಿಂದಾಗಿ ಸುಕನ್ಯಾ ಅವರಿಗೆ ಶಾಶ್ವತ ಅಂಗವೈಕಲ್ಯವಾಗಿದೆ ಎಂದು ತಮಗೆ ನ್ಯಾಯ ದೊರಕಿಸಬೇಕುಎಂದು ಸುಕನ್ಯಾ ಅವರ ಪುತ್ರ ರವಿಕುಮಾರ್ ಅವರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ದೂರು ನೀಡಿದ್ದರು. ಆದರೆ, ಯಾವುದೇ ಪ್ರಯೋಜನವಾದ ಕಾರಣ ಒಂದು ವರ್ಷಗಳ ಕಾಲ ಚಿಕಿತ್ಸೆ ಪಡೆದುಕೊಂಡು ಬಂತು ನಂತರ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ್ದರು.